ಕಾರವಾರ: ವಿದೇಶದಿಂದ ಭಾರತಕ್ಕೆ ಬರುತ್ತಿರುವ ಹಲವರಿಂದ ಕೊರೊನಾ ವೈರಸ್ ಹರಡುತ್ತಿದ್ದರೂ ವಿಧಿಯಿಲ್ಲದೇ ಹಲವು ಭಾರತೀಯರು ಸ್ವದೇಶಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವತಿಯೊರ್ವಳು ತನ್ನಿಂದ ವೈರಸ್ ಹರಡಬಾರದು ಎಂದು ಇಟಲಿಯಲ್ಲಿಯೇ ಉಳಿದುಕೊಂಡಿದ್ದಾರೆ.
ಉತ್ತರ ಕನ್ನಡದ ಶಿರಸಿಯ ಪ್ರತಿಭಾ ಹೆಗಡೆ ಇಟಲಿಯ ನೇಪೆಲ್ಸ್ ನಗರದ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿದ್ದು, ಕೊರೊನಾ ವೈರಸ್ ಭೀತಿಯಿದ್ದರೂ ಸಹ ಅಲ್ಲಿಯೇ ಉಳಿಯುವ ನಿರ್ಧಾರ ಮಾಡಿದ್ದಾರೆ.
Advertisement
Advertisement
ತಮ್ಮ ನಿರ್ಧಾರದ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರತಿಭಾ, “ನಾನು ಇಟಲಿಯ ನೇಪಲ್ಸ್ ನಗರದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿದ್ದೇನೆ. ಒಂದೆರಡು ವಾರಗಳಿಂದ ಭಾರತದಲ್ಲಿರುವ ನನ್ನ ಸ್ನೇಹಿತರು ಮತ್ತು ಕುಟುಂಬದವರು ಮನೆಗೆ ವಾಪಸ್ ಬಂದು ಬಿಡು ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ನಾನು ಇಲ್ಲೇ ಇರಲು ಡಿಸೈಡ್ ಮಾಡಿದೆ. ಕಾರಣ ಸಿಂಪಲ್, ನನ್ನ ನಗರದಲ್ಲಿ ಎಷ್ಟೇ ಜನರಿಗೆ ಕೊರೊನಾ ಬಂದಿರಲಿ, ನಾನು ಮನೆಯಲ್ಲೇ ಇದ್ದರೆ ಏನೂ ಸಹ ಆಗುವುದಿಲ್ಲ. ಬದಲಾಗಿ ನಾನು ಭಾರತಕ್ಕೆ ಬರುವ ಹಾದಿಯಲ್ಲಿ ಎಷ್ಟೋ ಜನರ ನಡುವೆ ಇದ್ದು ಸುಮಾರು 15 ಗಂಟೆಗಳ ಪ್ರಯಾಣ ಮಾಡಬೇಕು. ಭಾರತಕ್ಕೆ ಕೊರೊನಾ ಹೊತ್ತೊಯ್ಯುವುದು ಬಿಟ್ಟರೆ ಬೇರೆ ಯಾವ ಉಪಯೋಗವು ಅದರಲ್ಲಿ ಇಲ್ಲ” ಎಂದಿದ್ದಾರೆ. ಇದನ್ನು ಓದಿ:ಚೀನಾದಿಂದ ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ- ಕಾಳಜಿ ಮೆರೆದ ಕನ್ನಡಿಗ
Advertisement
Advertisement
“ಈಗ ಪ್ರಸ್ತುತ ಭಾರತದ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜನರೂ ನನ್ನ ಪರಿಸ್ಥಿತಿಯಲ್ಲಿಯೇ ಇದ್ದೀರಿ. ಇದ್ದಲ್ಲೇ ಇರುವುದು ಬಿಟ್ಟು ಬಸ್, ರೈಲು ಹತ್ತಿ ಮನೆಗೆ ಹೋಗೋದರಿಂದ ನಿಮಗೆ ಕೊರೊನಾ ತಾಕುವ, ಅಥವಾ ಮೊದಲೇ ಇದ್ದರೆ ಸಹಪ್ರಯಾಣಿಕರಿಗೂ ಕುಟುಂಬದವರಿಗೂ ತಗುಲಿಸುವ ಸಾಧ್ಯತೆಗಳೇ ಹೆಚ್ಚು. ಸರ್ಕಾರ ಬಸ್ಸುಗಳನ್ನು ಬಂದ್ ಮಾಡಿದರೂ ಕಷ್ಟ ಪಟ್ಟು ಇನ್ನಾವುದೋ ರೀತಿಯಲ್ಲಿ ಮನೆ ಸೇರುವ ಅವಿವೇಕತನ ತೋರಬೇಡಿ. ದಯವಿಟ್ಟು ಇದ್ದಲ್ಲಿಯೇ ಇರಿ. ಮನೆ ಒಳಗೇ ಇರಿ” ಎಂದು ಪ್ರತಿಭಾ ಮನವಿ ಮಾಡಿದ್ದಾರೆ.
ಇಟಲಿಯಲ್ಲಿ ಕೊರೊನಾ ವೈರಸ್ ತೀವ್ರ ಪ್ರಮಾಣದಲ್ಲಿ ಆತಂಕ ಸೃಷ್ಟಿಸಿದ್ದರೂ, ಪ್ರತಿಭಾ ಮನೆಗೆ ಬರದೇ ವೈರಸ್ ನಿಂದ ದೇಶ ಕಾಪಾಡಲು ತಗೆದುಕೊಂಡ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.