– ಏರಿಕೆಯಾಯ್ತು ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣ
– ಅಬಕಾರಿ ಅಧಿಕಾರಿಗಳ ಪ್ರಾಮಾಣಿಕ ಶ್ರಮಕ್ಕೆ ಮೆಚ್ಚುಗೆ
ಕಾರವಾರ: ಚುನಾವಣೆ ಬಂತೆಂದರೆ ಮತದಾರರನ್ನು ಓಲೈಸಲು ಹಣದ ಜೊತೆ ಮದ್ಯ ಸಹ ಮತದಾರರಿಗೆ ಸರಬರಾಜಾಗುತ್ತದೆ. ಅದರಲ್ಲೂ ಮದ್ಯ ಪ್ರಿಯರ ಮೆಚ್ಚಿನ ರಾಜ್ಯವಾದ ಗೋವಾಕ್ಕೆ ಅಂಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಗೆ ಗೋವಾದ ಅಗ್ಗದ ಮದ್ಯಗಳು ಎಗ್ಗಿಲ್ಲದೇ ಸರಬರಾಜಾಗುತ್ತದೆ.
ಇದಕ್ಕಾಗಿ ಖಾಕಿಗಳನ್ನೊಳಗೊಂಡ ದೊಡ್ಡ ಜಾಲವೇ ವ್ಯವಸ್ಥಿತ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪವೂ ಇದೆ. ಆದರೆ ಈ ಬಾರಿ ಅಬಕಾರಿ ಅಧಿಕಾರಿಗಳ ಪ್ರಾಮಾಣಿಕ ಶ್ರಮ ಹಾಗೂ ಗಡಿ ಭಾಗದಿಂದ ಹಿಡಿದು ಜಿಲ್ಲೆ ಪ್ರತಿ ಪ್ರದೇಶದಲ್ಲಿನ ಕಾರ್ಯಾಚರಣೆ ಗೋವಾದ ಮದ್ಯದ ಅಮಲನ್ನು ಇಳಿಸಿದೆ.
Advertisement
Advertisement
ಈ ಬಾರಿ ಜಿಲ್ಲಾ ಅಬಕಾರಿ ಇಲಾಖೆ ಮದ್ಯ ಸಾಗಾಟದಾರರ ಮೇಲೆ ಗಡಿಭಾಗದಲ್ಲಿ 24 ತಾಸುಗಳ ಕಣ್ಗಾವಲು ಜೊತೆಗೆ ಗೋವಾ ರಾಜ್ಯದ ಅಬಕಾರಿ ಇಲಾಖೆಯ ಸಿಬ್ಬಂದಿ ಜೊತೆಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯದ ಸಾಗಾಟಕ್ಕೆ ಕಡಿವಾಣ ಹಾಕಲು ಯತ್ನಿಸಿದೆ.
Advertisement
ಜಿಲ್ಲೆಯಾದ್ಯಂತ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸಿದ ಫಲವಾಗಿ ಜಿಲ್ಲೆಯ ಮದ್ಯದ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಮದ್ಯದ ಮಾರಾಟ ಇಳಿಮುಖವಾಗಿದೆ. ಅನಧಿಕೃತವಾಗಿ ಸರಬರಾಜಾಗುತ್ತಿದ್ದ ಲಕ್ಷಾಂತರ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶ ವಶಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
Advertisement
ಭರ್ಜರಿ ಭೇಟೆ:
ಕರ್ನಾಟಕಕ್ಕಿಂತ ಅಗ್ಗದಲ್ಲಿ ಮದ್ಯ ಗೋವಾದಲ್ಲಿ ಸಿಗುವುದರಿಂದ ಗೋವಾದಿಂದ ಚುನಾವಣೆ ಸಂದರ್ಭದಲ್ಲಿ ಲಕ್ಷಾಂತರ ಮೌಲ್ಯದ ಮದ್ಯಗಳು ಕಾರವಾರಕ್ಕೆ ಕಳ್ಳ ದಾರಿಯಿಂದ ಸರಬರಾಜಾಗುತ್ತದೆ. ಆದರೆ ಅಬಕಾರಿ ಇಲಾಖೆಯು ಗಡಿಯಲ್ಲಿ 24 ಗಂಟೆಗಳ ಹದ್ದಿನ ಕಣ್ಣನ್ನು ಇಟ್ಟಿದ್ದು ಸಿ.ಸಿ ಕ್ಯಾಮರಾ ಸಹ ಅಳವಡಿಸಲಾಗಿದೆ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಈವರೆಗೆ ಬರೋಬ್ಬರಿ 630 ದಾಳಿ ನಡೆಸಿರುವ ಅಬಕಾರಿ ಇಲಾಖೆ 212 ಪ್ರಕರಣಗಳನ್ನು ದಾಖಲಿಸಿದೆ. 134 ಜನ ಆರೋಪಿಗಳನ್ನು ಬಂಧಿಸಿ ಇದರಲ್ಲಿ 80 ಗಂಭೀರ ಪ್ರಕರಣದಲ್ಲಿ 26 ಜನರನ್ನು ಜೈಲಿಗೆ ಕಳುಹಿಸಿದ್ದು, 134 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
ಒಟ್ಟಾರೆ 4,140 ಸಾವಿರ ಲೀಟರ್ ಕರ್ನಾಟಕ ಮದ್ಯ, 1,443.78 ಲೀಟರ್ ಗೋವಾ ಮದ್ಯ, 19,254.78 ಲೀಟರ್ ಬಿಯರ್, 65 ಲೀಟರ್ ಗೋವಾ ಬಿಯರ್, 1,640 ಲೀಟರ್ ಬೆಲ್ಲದ ಹಾಗೂ ಗೇರು ಹಣ್ಣಿನ ಮದ್ಯ (ಸ್ಪಿರಿಟ್), 180 ಲೀಟರ್ ಕಳ್ಳಬಟ್ಟಿ ಹಾಗೂ ಮದ್ಯ ಸಾಗಾಟಕ್ಕೆ ಬಳಸಿದ್ದ 15 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ 53,97,743 ಲಕ್ಷ ರೂ. ಮದ್ಯದ ಬೆಲೆಯಾದರೆ 43,60,000 ರೂ. ವಾಹನದ ಬೆಲೆಯಾಗಿದೆ.
ಇದಲ್ಲದೇ ಈ ಬಾರಿ ಅಬಕಾರಿ ಇಲಾಖೆಯ ಹದ್ದಿನ ಕಣ್ಣಿನಿಂದಾಗಿ ಮಾರಾಟಗಾರರು ಕೂಡ ಅಕ್ರಮವಾಗಿ ಜಿಲ್ಲೆಯ ಬೇರೆಡೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. ಇದಲ್ಲದೇ ಚುನಾವಣೆಗಾಗಿ ಅಧಿಕ ದಾಸ್ತಾನು ಸಹ ಮಾಡಲು ಇಲಾಖೆ ಅವಕಾಶವನ್ನು ಕೊಟ್ಟಿಲ್ಲ. ಈ ಕಾರಣದಿಂದ ಕಳೆದ ವಿಧಾನಸಭೆಯ ಸಂದರ್ಭಕ್ಕೆ ಹೋಲಿಸಿದಲ್ಲಿ 28,199 ಮದ್ಯದ ಕೇಸ್‍ಗಳ (ಮದ್ಯದ ಬಾಕ್ಸ್) ಮಾರಾಟ ಇಳಿಮುಖವಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಅಕ್ರಮ ಮದ್ಯ ಸಂಬಂಧ ದಾಖಲಾದ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದ್ದು ಇಲಾಖೆಯ ಕಟ್ಟು ನಿಟ್ಟಿನ ಕ್ರಮದಿಂದ ಇಳಿಕೆಯಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ. ಜಿಲ್ಲೆಯಾದ್ಯಂತ ಗೋವಾ ಮದ್ಯದ ಸಾಗಾಟ ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದ್ದು ಈ ಬಾರಿಯ ಅಬಕಾರಿ ಇಲಾಖೆಯ ಈ ಕಾರ್ಯಕ್ಕೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.