ಕಾರವಾರ: ರಾಜ್ಯದಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಅಭಾವ ಹೆಚ್ಚಾಗುತಿದ್ದಂತೆ ಜನ ಕಟ್ಟಿಗೆಯ (Firewood) ಮೊರೆ ಹೋಗುತ್ತಿದ್ದಾರೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಇದೀಗ ಕಟ್ಟಿಗೆಗಳ ಬೇಡಿಕೆ ಹೆಚ್ಚಾಗಿದ್ದು ಕಟ್ಟಿಗೆ ಡಿಪೋಗಳಲ್ಲಿ ಕಟ್ಟಿಗೆಗಳು ಖಾಲಿಯಾಗಿವೆ. ಇದೀಗ ಈ ಬೇಡಿಕೆಗೆ ಅನುಗುಣವಾಗಿ 3ಲಕ್ಷ ಆಕೇಶಿಯಾ ಮರಗಳ ಕಟಾವಿಗೆ ಅರಣ್ಯ ಇಲಾಖೆ (Forest Department) ಅನುಮತಿ ನೀಡಿದೆ.
ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಟ್ಟಿಗೆ ಕಟಾವು ಮಾಡಲು ಅರಣ್ಯ ಇಲಾಖೆಗೆ ಅನುಮತಿ ಇರಲಿಲ್ಲ. ಹೀಗಾಗಿ ಸಂಗ್ರಹವಾಗಿದ್ದ ಕಟ್ಟಿಗೆಗಳೇ ಮಾರಾಟವಾಗುತಿದ್ದವು. ಆದರೆ ಈಗ ಸಿಲಿಂಡರ್ ಸಮಸ್ಯೆ ಉದ್ಭವವಾಗಿ ಸ್ಥಳೀಯವಾಗಿ ಇರುವ ಡಿಪೋಗಳಲ್ಲಿ ಕಟ್ಟಿಗೆಗಳಿಗೆ ಬೇಡಿಕೆ ಬರತೊಡಗಿದೆ. ಇನ್ನೂ ಜಿಲ್ಲೆಯಲ್ಲಿ ಅರಣ್ಯವಿರುವುದರಿಂದ ಜನ ಕಾಡಿನಲ್ಲಿ ಕಟ್ಟಿಗೆ ಕಡಿಯಲು ಅರಣ್ಯ ಇಲಾಖೆ ನಿರ್ಬಂಧಿಸುತ್ತಿದೆ. ಹೀಗಾಗಿ ಕಟ್ಟಿಗೆಯನ್ನ ಅನಿವಾರ್ಯವಾಗಿ ಡಿಪೋಗಳಲ್ಲೇ ತೆಗೆದುಕೊಳ್ಳಬೇಕಾಗಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೇ ಈ ವರ್ಷದ ಮಾರ್ಚ್ ತಿಂಗಳಲ್ಲಿ ಕಟ್ಟಿಗೆ ಬೇಡಿಕೆ 35%ಗೂ ಹೆಚ್ಚಾಗಿದೆ. ಡಿಪೋಗಳಲ್ಲಿ ಈಗ ಹಿಂದಿನ ಸಂಗ್ರಹ ಖಾಲಿಯಾಗುತಿದ್ದು ಹೊಸ ಕಟ್ಟಿಗೆಗಳು ಇಲಾಖೆಯಿಂದ ಸರಬರಾಜಾಗುತ್ತಿಲ್ಲ. ಇದನ್ನೂ ಓದಿ: 1,700 ರೂ. ಸಿಲಿಂಡರ್ 3,600ಕ್ಕೆ ಮಾರಾಟ – ವಾಣಿಜ್ಯ ಗ್ಯಾಸ್ ಅಭಾವ; ಹೋಟೆಲ್ ಮಾಲೀಕರು ಹೈರಾಣು
ಹೊನ್ನಾವರ ವಿಭಾಗದ 28 ಡಿಪೋಗಳಲ್ಲಿ 8 ಡಿಪೋಗಳಲ್ಲಿ ಸಂಪೂರ್ಣ ಕಟ್ಟಿಗೆ ಖಾಲಿಯಾಗಿದೆ. ಉಳಿದ 20 ಡಿಪೋಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ಕಟ್ಟಿಗೆ ಸಂಗ್ರಹವಿದೆ. ಇನ್ನೂ ಕಟ್ಟಿಗೆಗೆ ಹೆಚ್ಚು ಬೇಡಿಕೆ ಬಂದಿರುವುದರಿಂದ ಇಲಾಖೆ ಕಟ್ಟಿಗೆ ಕಡಿಯಲು ಅಕೇಶಿಯಾ ನಡುತೋಪುಗಳಲ್ಲಿ ಮರ ಕಡಿಯಲು ಅನುಮತಿ ಕೇಳಿತ್ತು. ಈಗ ಅನುಮತಿ ದೊರೆತಿದೆ.
ಈ ಕುರಿತು ಹೊನ್ನಾವರದ ಡಿ.ಎಫ್ ಓ ಯೋಗೀಶ್ ಮಾಹಿತಿ ನೀಡಿದ್ದು, ಹೊನ್ನಾವರ ವಿಭಾಗದಲ್ಲಿ 3 ಲಕ್ಷ ಅಕೇಶಿಯಾ ಮರಗಳ ಕಟಾವಿಗೆ ಅನುಮತಿ ಸಿಕ್ಕಿದೆ. ಈಗಾಗಲೇ ಹೊನ್ನಾವರ ಅರಣ್ಯ ವಿಭಾಗ ವ್ಯಾಪ್ತಿಯ ನಡುತೋಪುಗಳಲ್ಲಿ ಕಡಿತಲೆ ಪ್ರಾರಂಭ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

