Connect with us

Districts

ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

Published

on

ಕಾರವಾರ: ರಾಜ್ಯದಲ್ಲಿ ಪ್ರಥಮ ಬಾರಿಗೆ ಪತಂಗಗಳ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಡಿ. 14 ಹಾಗೂ 15 ರಂದು ಬೆಂಗಳೂರು ಬಟರ್ ಫ್ಲೈ ಕ್ಲಬ್ (ಬಿಬಿಸಿ)ಸಹಕಾರದೊಂದಿಗೆ ಆಯೋಜಿಸಲು ಸಿದ್ಧತೆ ನಡೆದಿದೆ.

ರಾಜ್ಯದಲ್ಲಿ ಅಂದಾಜು 130 ಪ್ರಭೇದದ ಪತಂಗಗಳಿವೆ. ಆದರೆ, ಕೇರಳ, ತಮಿಳುನಾಡಿನಲ್ಲಿ ಹೊರತುಪಡಿಸಿದರೆ ಇದುವರೆಗೂ ಅವುಗಳ ಸಮೀಕ್ಷೆ ಎಲ್ಲೂ ನಡೆದಿಲ್ಲ.

ಗಣತಿ ಹೇಗೆ ಮಾಡಲಾಗುತ್ತದೆ?
ಪ್ರಾಣಿಗಳನ್ನಾದರೆ ಹೆಜ್ಜೆ ಗುರುತು ಹಾಗೂ ಕ್ಯಾಮೆರಾ ಮೂಲಕ ಟ್ರ್ಯಾಪ್ ಮಾಡಿ ಮಾಡಲಾಗುತ್ತದೆ. ಆದರೆ ಚಿಟ್ಟೆಗಳ ಗಣತಿ ಮಾಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಅವುಗಳ ಚಲನ-ವಲನ ಸಮಯ ಹೀಗೆ ಪ್ರತಿಯೊಂದನ್ನೂ ಲೆಕ್ಕ ಹಾಕಿ ಅವುಗಳ ಬಣ್ಣ ಆಕಾರ, ದೇಹದ ಶೈಲಿ ಹೀಗೆ ಪ್ರತಿಯೊಂದರ ಮೇಲೂ ನಿಗಾ ಇಟ್ಟು ಮಾಡಬೇಕಾಗುತ್ತದೆ. ಇದಕ್ಕಾಗಿ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನುರಿತ ತಜ್ಞರು, ಛಾಯಾಗ್ರಾಹಕರನ್ನು ಒಳಗೊಂಡ ತಂಡವನ್ನು ಅರಣ್ಯ ಇಲಾಖೆ ಜೊತೆಗೂಡಿ ಕಾಡಿನಲ್ಲಿ ಸುತ್ತಾಡಲಿದೆ. ಕರ್ನಾಟಕದ ನಿತ್ಯ ಹರಿದ್ವರ್ಣ ಕಾಡುಗಳನ್ನು ಒಳಗೊಂಡಿರುವ ದಾಂಡೇಲಿ ಹುಲಿ ರಕ್ಷಿತಾ ಕಾಡನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಗಣತಿ ಹೇಗೆ ನಡೆಯಬೇಕು, ಯಾವ್ಯಾವ ಕಾರ್ಯಕ್ರಮಗಳು ಇರಬೇಕು ಎಂಬುದು ನಿರ್ಧರಿಸಿ ಕಾರ್ಯಾಚರಣೆಗೆ ಇಳಿಯಲಿದೆ.

ದಾಂಡೇಲಿ ಪ್ರದೇಶವೇ ಆಯ್ಕೆ ಏಕೆ? ವಿಶೇಷತೆಯೇನು?
ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನೊಳಗೊಂಡ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ. ಇದು 1,300 ಚದರ ಕಿ.ಮೀಯಷ್ಟು ವ್ಯಾಪ್ತಿಯನ್ನು ವಿಸ್ತಾರವಾಗಿ ಹೊಂದಿದೆ. ಇಲ್ಲಿನ ವಾತಾವರಣ ಪರಿಸರ ಸಾಕಷ್ಟು ಪ್ರಭೇದಗಳ ಪತಂಗಗಳಿಗೆ ಆವಾಸ ಸ್ಥಾನ ಕೂಡ ಆಗಿದೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ಈ ಪ್ರದೇಶ ಜನರನ್ನು ಸೆಳೆಯುವ ಆಲೋಚನೆಯೂ ಅರಣ್ಯ ಇಲಾಖೆಯ ಉದ್ದೇಶವಾಗಿದೆ.

ಇಲ್ಲಿರುವ ಪತಂಗಗಳ ಅಂದ, ಚಂದ ನೋಡುವ, ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವ, ತಜ್ಞರನ್ನು ಕರೆಸಿ ಜೀವನ ಕ್ರಮಗಳ ಬಗ್ಗೆ ಅಧ್ಯಯನ ನಡೆಸುವ ಆಸಕ್ತರಿಗೆ ಇದೊಂದು ಬಟರ್ ಫ್ಲೈ ಉತ್ಸವವಾಗಿ ರೂಪಿಸುವುದು ಅರಣ್ಯ ಇಲಾಖೆಯ ಉದ್ದೇಶ ಕೂಡ ಆಗಿದೆ.

ದಾಂಡೇಲಿ ಹಾರ್ನ್ ಬಿಲ್ ಸಂರಕ್ಷಿತ ಅರಣ್ಯ ಎಂಬ ಖ್ಯಾತಿ ಕೂಡ ಇದ್ದು, ಪ್ರತಿ ವರ್ಷ ದಾಂಡೇಲಿಯಲ್ಲಿ ಹಾರ್ನ್ ಬಿಲ್ ಉತ್ಸವ ಆಯೋಜಿಸಲಾಗುತ್ತಿದೆ. ಕೈಗಾ ಹಾಗೂ ದಾಂಡೇಲಿಗಳಲ್ಲಿ ಹಲವು ವರ್ಷಗಳಿಂದ ಬರ್ಡ್ ಮ್ಯಾರಾಥಾನ್ ಆಯೋಜಿಸುವ ಮೂಲಕ ಪಕ್ಷಿಗಳ ಪ್ರಭೇದದ ದಾಖಲೀಕರಣ ನಡೆಸಲಾಗುತ್ತಿದೆ.

ಅದೇ ಮಾದರಿಯಲ್ಲಿ ಬಟರ್ ಫ್ಲೈ ಉತ್ಸವ ಆಯೋಜಿಸಿದ್ದಲ್ಲಿ ದಾಂಡೇಲಿ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ದೊರಕುವ ಜೊತೆಗೆ ಚಿಟ್ಟೆಗಳ ಬಗ್ಗೆ ಅಧಿಕೃತ ಅಧ್ಯಯನಕ್ಕೂ ಚಾಲನೆ ದೊರೆಯಲಿದೆ ಎಂಬುದು ಅಧಿಕಾರಿಗಳ ಯೋಜನೆಯಾಗಿದೆ.

ಪತಂಗ ಪಾರ್ಕ್:
ಜೊಯಿಡಾ, ಕಾರವಾರದಲ್ಲಿ ಅರಣ್ಯ ಇಲಾಖೆ ಚಿಟ್ಟೆ ಪಾರ್ಕ್ ನಿರ್ಮಿಸಿದೆ. ಕೈಗಾದಲ್ಲಿ ಎನ್ ಪಿಸಿಐಎಲ್ ಚಿಟ್ಟೆ ಪಾರ್ಕ್ ಅಭಿವೃದ್ಧಿ ಮಾಡಿದೆ. ಆದರೆ, ಅವುಗಳ ಗಣತಿ, ದಾಖಲೀಕರಣ, ಅಧ್ಯಯನ ಇಲಾಖೆಯಿಂದ ನಡೆದಿಲ್ಲ. ಈ ಗಣತಿ ಚಿಟ್ಟೆ ಪಾರ್ಕ್ ಗಳ ಅಭಿವೃದ್ಧಿಗೂ ಮುಂದೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ!
ದಾಂಡೇಲಿಯಲ್ಲಿ ಚಿಟ್ಟೆಗಳ ಗಣತಿ ಕಾರ್ಯ ನಡೆಸಲು ಯೋಜಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಹಣ ಕೂಡ ಮೀಸಲಿಡಲಾಗಿದ್ದು ಕಮಿಟಿ ಸಹ ಮಾಡಿದೆ. ಆದರೆ ಅದರ ಅಧಿಕೃತ ರೂಪುರೇಷೆ ಇದುವರೆಗೂ ಸಿದ್ಧವಾಗಿಲ್ಲ. ಗಣತಿ ಬಗ್ಗೆ ಯಾವುದೇ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಕೂಡ ಇಲ್ಲ. ಎಲ್ಲವನ್ನೂ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನವರನ್ನು ಆಶ್ರಯಿಸಿದೆ.

ಇಲಾಖೆ ಪ್ರಬಾರ ಡಿಎಫ್ ಒ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಅಧಿಕಾರಿ ವಸಂತ ರೆಡ್ಡಿ ರವರಿಗೆ ವಹಿಸಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪತಂಗಗಳ ಅಧ್ಯಯನಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಆದರೆ ಕೇವಲ ಸರ್ಕಾರದಿಂದ ಬರುವ ಅನುದಾನವನ್ನು ಖರ್ಚು ಮಾಡುವುದಕ್ಕಷ್ಟೇ ಸೀಮಿತವಾಗಿರದಿರಲಿ ಎಂಬುದೇ ನಮ್ಮ ಆಶಯ. ಪ್ರಶಾಂತ್ ಎಸ್.ಎನ್ ಅವರ ಕ್ಯಾಮೆರಾದಲ್ಲಿ ಚಿಟ್ಟೆಗಳು ಸೆರೆಯಾಗಿವೆ.

Click to comment

Leave a Reply

Your email address will not be published. Required fields are marked *