ಕಾರವಾರ: ಅಂತರ್ಜಾತಿ ವಿವಾಹ ಸಂಬಂಧವಾಗಿ ಎರಡೂ ಕುಟುಂಬಗಳು ಬಡಿದಾಡಿಕೊಂಡು ಯುವಕನ ಕುಟುಂಬದ ಆರು ಜನರು ಗಂಭೀರ ಗಾಯಗೊಂಡ ಘಟನೆ ಬನವಾಸಿಯಲ್ಲಿ ನಡೆದಿದೆ.
ಬನವಾಸಿಯ ಕೃಷ್ಣಚೆನ್ನಯ್ಯ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿಯ ಮಡಿವಾಳ ಜನಾಂಗದ ಯುವತಿಯನ್ನು ಪ್ರೀತಿಸಿದ್ದು, ಎಂಟು ದಿನದ ಹಿಂದೆ ಬೆಂಗಳೂರಿನಲ್ಲಿ ಮದುವೆಯಾಗಿದ್ದರು.
ಯುವಕ ದಲಿತ ಎಂಬ ಕಾರಣಕ್ಕೆ ಯುವತಿಯ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದುವೆ ಮಾಡಿಕೊಂಡು ಜೋಡಿಗಳು ಇಂದು ಬೆಂಗಳೂರಿನಿಂದ ಊರಿಗೆ ಬಂದಿದ್ದಾರೆ. ಈ ಮದುವೆಗೆ ಯಾವುದೇ ಅಧಿಕೃತ ದಾಖಲೆ ಇಲ್ಲದನ್ನು ತಿಳಿದ ಯುವತಿ ಕುಟುಂಬದವರು ಯುವತಿಯನ್ನು ಅಪಹರಿಸಿ ಕರೆದುಕೊಂಡು ಹೋಗಲು ಬನವಾಸಿಗೆ ಬಂದಿದ್ದಾರೆ.
ಈ ವೇಳೆ ಮನೆಯಲ್ಲಿ ಮದುವೆಯಾದ ನವ ಜೋಡಿಗಳು ಇರಲಿಲ್ಲ. ಇದರಿಂದ ಕೋಪಗೊಂಡ ಯುವತಿಯ ಚಿಕ್ಕಪ್ಪ ಹೊಳಿಯಪ್ಪ ಶಾನವಳ್ಳಿ ಮತ್ತು ಸಂಬಧಿಕರು ಯುವಕನ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು ಯುವಕನ ಸಹೋದರ ಹಾಗೂ ಮಾವನಿಗೆ ಮಚ್ಚಿನಿಂದ ಹೊಡೆದಿದ್ದು ಬೆರಳುಗಳು ತುಂಡಾಗಿವೆ. ಈ ಬಡಿದಾಟದಲ್ಲಿ ಒಟ್ಟು ಆರು ಜನರಿಗೆ ಗಂಭೀರ ಗಾಯವಾಗಿದೆ.
ಗಾಯಾಳುಗಳನ್ನು ಬನವಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಎರಡೂ ಕುಟುಂಬದ ವಿರುದ್ಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.