ಕೊರೊನಾ ವೈರಸ್ ತಪಾಸಣೆಗೆ ಒಲ್ಲೆ ಎಂದ ಭಟ್ಕಳ ಯುವಕರು! - Public TV
Connect with us

ಕೊರೊನಾ ವೈರಸ್ ತಪಾಸಣೆಗೆ ಒಲ್ಲೆ ಎಂದ ಭಟ್ಕಳ ಯುವಕರು!

ಕೊರೊನಾ ವೈರಸ್ ತಪಾಸಣೆಗೆ ಒಲ್ಲೆ ಎಂದ ಭಟ್ಕಳ ಯುವಕರು!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ಮರಳಿದ ಜಿಲ್ಲೆಗೆ ಬಂದ ಪ್ರತಿಯೊಬ್ಬರನ್ನೂ ಆರೋಗ್ಯ ಇಲಾಖೆ ಅವರ ಮನೆಗೆ ತೆರಳಿ ಪರೀಕ್ಷೆ ನಡೆಸುತ್ತಿದೆ. ದುಬೈನಿಂದ ನಿನ್ನೆ ಆಗಮಿಸಿದ್ದ ಭಟ್ಕಳದ ಸುಲ್ತಾನ್ ಸ್ಟ್ರೀಟ್‍ನಲ್ಲಿನ ನಾಲ್ಕು ಜನ ಯುವಕರು ಪರೀಕ್ಷೆ ನಡೆಸಲು ಬಂದ ಆರೋಗ್ಯ ಇಲಾಖೆಯವರಿಗೆ ಸಹಕರಿಸದೇ ಬೆದರಿಸಿ ಕಳುಹಿಸಿದ್ದಾರೆ. ದುಬೈನಿಂದ ಬಂದ ಮತ್ತೊಬ್ಬ ಭಟ್ಕಳದ ಯುವಕನಲ್ಲಿ ಕೊರೊನಾ ವೈರಸ್ ಲಕ್ಷಣಗಳು ಗೋಚರವಾದ ಹಿನ್ನೆಲೆಯಲ್ಲಿ ಆತನ ರಕ್ತದ ಮಾದರಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಇಂದು ಮಧ್ಯಾಹ್ನ ಕಳುಹಿಸಲಾಗಿದೆ.

14 ಜನರಿಗೆ ಗೃಹ ಬಂಧನ:
ಹಳಿಯಾಳದಲ್ಲಿ ಮೆಕ್ಕಾ ಮದೀನಾಗೆ ಹೋಗಿ ಬಂದವರಿಗೆ ಕೊರೊನಾ ವೈರಸ್ ತಗುಲಿದೆಯೇ ಎಂಬ ಬಗ್ಗೆ ಇಂದು ಪರೀಕ್ಷೆ ಮಾಡಲಾಗಿದೆ. ಹಳಿಯಾಳದಿಂದ ಮೆಕ್ಕಾಗೆ ತೆರಳಿದ್ದ 14 ಜನರು ಫೆ.27, 28ರಂದು ಹಳಿಯಾಳಕ್ಕೆ ವಾಪಸ್ ಬಂದಿದ್ದರು. ಇವರು ಕೊರೊನಾ ವೈರೆಸ್ ತಗುಲಿ ಸಾವು ಕಂಡ ಕಲಬುರಗಿ ವ್ಯಕ್ತಿ ಜೊತೆ ಇವರು ಸಹ ತೆರಳಿದ್ದರು.

ಹಳಿಯಾಳಕ್ಕೆ ಬಂದು 14 ದಿನಗಳು ಕಳೆದಿವೆ. ವಿಶ್ವದೆಲ್ಲೆಡೆ ಕೊರೊನಾ ವೈರಸ್ ವ್ಯಾಪಿಸಿದ್ದು, ಮೆಕ್ಕಾ- ಮದೀನಾದ ಮೇಲೂ ಕೊರೊನಾ ವೈರಸ್ ಪರಿಣಾಮ ಬೀರಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಹಳಿಯಾಳದ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಈ 14 ಜನರ ಮನೆಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ.

ಇವರಲ್ಲಿ ರೋಗದ ಯಾವುದೇ ಗುಣಲಕ್ಷಣಗಳು ಕಂಡುಬಂದಿಲ್ಲ ಎಂದು ಹಳಿಯಾಳ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ್ ಕದಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರೋಗ ಪರೀಕ್ಷೆಯ ಬಳಿಕ ಇವರನ್ನು ಹೊರಗೆ ಹೋಗದಂತೆ, ಮನೆಯಲ್ಲಿಯೇ ಸ್ವಲ್ಪ ದಿನ ಕಳೆಯುವಂತೆ, ಸ್ವಚ್ಛತೆ ಕಾಪಾಡುವಂತೆ, ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ವಿದೇಶದಿಂದ ಬಂದವರಿಗೆ ಮನೆಯಲ್ಲಿ ದಿಗ್ಭಂಧನ:
ಜಿಲ್ಲೆಯ ಭಟ್ಕಳ ಮುಂಡಗೋಡು ಸೇರಿದಂತೆ ಜಿಲ್ಲೆಗೆ ವಿದೇಶದಿಂದ ಇತ್ತೀಚೆಗೆ ಮರಳಿರುವ ಜಿಲ್ಲೆಯಲ್ಲಿರುವ ಎಲ್ಲ ವ್ಯಕ್ತಿಗಳನ್ನು ಅವರ ಮನೆಯಲ್ಲಿಯೇ ಇಟ್ಟು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಾರವಾರದ ಸಂತೆ ಮೊಟಕು:
ಭಾನುವಾರ ನಡೆಯಬೇಕಿದ್ದ ಕಾರವಾರದ ಸಂತೆಯನ್ನು ನಿರ್ಬಂಧ ಹೇರುವ ಬದಲು ಕಾರವಾರದ ನಗರಸಭೆ ಸಮಯವನ್ನು ಮೊಟಕುಗೊಳಿಸಿದೆ. ಬೆಳಗ್ಗಿನಿಂದ ಸಂಜೆ 6 ಗಂಟೆವರೆಗೆ ಮಾತ್ರ ಸಂತೆಗೆ ಅವಕಾಶ ಮಾಡಿಕೊಟ್ಟಿದ್ದು ಗುಂಪು ಗುಂಪಾಗಿ ತೆರಳದಂತೆ ಸೂಚಿಸಿದೆ.

Advertisement
Advertisement