ಕಾರವಾರ: ರಾಜ್ಯದ ಮುಂದಿನ ಬಜೆಟ್ ಅಧಿವೇಶನ ದಿನಾಂಕ ನಿಗದಿ ಮಾಡುವ ಸಲುವಾಗಿ ಬರುವ ಸೋಮವಾರ ಬೆಂಗಳೂರಿನಲ್ಲಿ ಸಚಿವ ಸಂಪುಟದ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಹೊನ್ನಾವರ ತಾಲೂಕು ಮಂಕಿಯಲ್ಲಿ ಹಮ್ಮಿಕೊಳ್ಳಲಾದ ರಾಮಕ್ಷತ್ರಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಮವಾರ ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಮುಂದಿನ ಬಜೆಟ್ ಅಧಿವೇಶನದ ದಿನಾಂಕ ನಿಗದಿ ಮಾಡಲಾಗುತ್ತದೆ. ಸರ್ಕಾರದ ಯೋಜನೆಗಳು ಹಾಗೂ ರಾಜ್ಯಪಾಲರ ಭಾಷಣದ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
Advertisement
Advertisement
ಮುಂದಿನ ತಮ್ಮ ಬಜೆಟ್ ನಲ್ಲಿ ರೈತರಿಗೆ, ನೀರಾವರಿ ಮತ್ತು ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಿ ಮಂಡಿಸಲಾಗುವುದು. ರಾಜ್ಯದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸಮಾಡುವುದಾಗಿ ಅವರು ತಿಳಿಸಿದರು. ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸ್ಥಿತಿ ಗಂಭೀರವಾಗಿದೆ. ವೈದ್ಯರು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇಂದು ಸಂಜೆ ಉಡುಪಿಗೆ ತಾವು ತೆರಳುತ್ತಿರುವುದಾಗಿ ಅವರು ತಿಳಿಸಿದರು.
Advertisement
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ್ ಹೆಗಡೆ, ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಕುಮಾರ್ ದೇವರಾಜ್, ಶಾಸಕರಾದ ರೂಪಾಲಿ ಎಸ್.ನಾಯ್ಕ್, ದಿನಕರಶೆಟ್ಟಿ, ಸುನೀಲ್ ನಾಯ್ಕ್ ಉಪಸ್ಥಿತರಿದ್ದರು.