ಕಾರವಾರ: ಹೆಲ್ಮೆಟ್ ಹಾಕಿ ವಾಹನ ಸವಾರಿ ಮಾಡಿ, ಸಂಚಾರ ನಿಯಮ ಪಾಲಿಸಿ ಎಂದು ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಜೊತೆಗೆ ಪಾಲಿಸದವರಿಗೆ ದಂಡ ಹಾಕಿ ಬುದ್ಧಿ ಕಲಿಸುತ್ತಿದ್ದಾರೆ. ಆದರೆ ಹಲವರು ಹೆಲ್ಮೆಟ್ ಧರಿಸದೇ ವಾಹನಗಳನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ.
ಇಂದು ಇಂಥದ್ದೇ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಎಂಜಿನಿಯರಿಂಗ್ ಕಾಲೇಜು ಬಳಿ ನಡೆದಿದೆ. ಅತಿ ವೇಗದಲ್ಲಿ ಬಂದು ಸರ್ಕಾರಿ ಬಸ್ಸನ್ನು ಓವರ್ ಟೇಕ್ ಮಾಡಲು ಹೋಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮಂಜುನಾಥ ಮುನ್ನಪ್ಪ ಮಿರಾಶಿ (23) ಹಾಗೂ ಶಿವಾಜಿ ರಾಮಚಂದ್ರ ಮಿರಾಶಿ (22) ಮೃತಪಟ್ಟಿದ್ದಾರೆ.
ಮೃತರು ಹಳಿಯಾಳ ತಾಲೂಕಿನ ತಟ್ಟಿಗೆರೆ ಗ್ರಾಮದ ನಿವಾಸಿಗಳಾಗಿದ್ದು ಓರ್ವ ಚಾಲಕನಾಗಿದ್ದರೆ, ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದರು. ತಟ್ಟಿಗೆರೆ ಗ್ರಾಮಕ್ಕೆ ಬೈಕಿನಲ್ಲಿ ತೆರಳುತ್ತಿದ್ದಾಗ ದಾಂಡೇಲಿಯಿಂದ ಹಳಿಯಾಳದತ್ತ ತೇಳುತ್ತಿದ್ದ ಬಸ್ಸನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಹೆಲ್ಮೆಟ್ ಹಾಕದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.