– ಚಿಕ್ಕಮಗ್ಳೂರಲ್ಲಿ ತಗ್ಗಿದ ಮಳೆಯ ಆರ್ಭಟ
– ಬೆಳಗಾವಿ, ಯಾದಗಿರಿಯಲ್ಲಿ ಪ್ರವಾಹ ಭೀತಿ
ಕಾರವಾರ/ಬೆಳಗಾವಿ/ಯಾದಗಿರಿ: ಒಂದು ತಿಂಗಳ ಮೊದಲು ಬಂದು ಹೋದ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಅಂದು ಸುರಿದ ಮಳೆಯಿಂದಾನೇ ಜನ ಚೇತರಿಸಿಕೊಂಡಿಲ್ಲ. ಅದಾಗಲೇ ಈಗ ಮತ್ತೊಮ್ಮೆ ವರುಣ ಅಬ್ಬರಿಸುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಬೈ ಕರ್ನಾಟಕದ ಬಹುತೇಕ ಜಿಲ್ಲೆಗಳು ಮತ್ತೆ ಪ್ರವಾಹಕ್ಕೆ ತುತ್ತಾಗುತ್ತಿವೆ. ಕರಾವಳಿ, ಕೊಡಗು, ಮಲೆನಾಡಿನಲ್ಲಿ ವರುಣ ಬಿಡುವೇ ಕೊಟ್ಟಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ ಡ್ಯಾಂನಿಂದ ನೀರು ಬಿಡಲಾಗಿದೆ. ಇದರಿಂದ ಜಲಾಶಯದ ಕೆಳಭಾಗದಲ್ಲಿರುವ ರಸ್ತೆಯಲ್ಲಿ ಬಿರುಕು ಮೂಡಿದ್ದು ಆತಂಕ ಮೂಡಿಸಿದೆ. ಜೊತೆಗೆ ಕಾರವಾರ-ದಾಂಡೇಲಿ ರಸ್ತೆಯ ಸೇತುವೆ ಸಂಪೂರ್ಣ ಮುಳುಗಿ ಹೋಗಿದ್ದು ಪ್ರವಾಹದ ಭೀತಿ ಎದುರಾಗಿದೆ.
Advertisement
Advertisement
ಕಳೆದೆರಡು ದಿನದಿಂದ ಕರಾವಳಿಯಲ್ಲಿ ಭಾರೀ ಮಳೆ ಆಗುತ್ತಿದ್ದು ದಾಂಡೇಲಿ ನಗರ ಭಾಗದಲ್ಲಿ ಕಾಳಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಕಾಳಿ ನದಿ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ನೇತ್ರಾಣಿ ದ್ವೀಪ ಸಮೀಪದ ಅರಬ್ಬಿ ಸಮುದ್ರದಲ್ಲಿ ಮಂಗಳೂರು ಮೂಲದ ಬೋಟ್ ಮುಳುಗಡೆ ಆಗಿದೆ. ಬೋಟ್‍ನಲ್ಲಿ 7ರಿಂದ 8 ಮೀನುಗಾರರು ಇದ್ದ ಶಂಕೆ ವ್ಯಕ್ತಪಡಿಸಲಾಗಿದೆ.
Advertisement
ಇತ್ತ ಕುಂದಾನಗರಿ ಬೆಳಗಾವಿ ಈಗ ಪ್ರವಾಹ ನಗರಿ ಆಗಿದೆ. 2ನೇ ಬಾರಿಗೆ ನೆರೆ ಎದುರಿಸುತ್ತಿರುವ ಬೆಳಗಾವಿಯಲ್ಲಿ ಹರಿಯುವ ಏಳು ನದಿಗಳು ಸದ್ಯ ಅಪಾಯದ ಮಟ್ಟ ಮೀರಿದೆ. ಬೆಳಗಾವಿಯ ಗೋಕಾಕ್, ರಾಮದುರ್ಗ, ಮೂಡಲಗಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಎರಡು ಲಕ್ಷ ಕ್ಯೂಸೆಕ್ ಹಾಗೂ ಹಿಡಕಲ್ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನ ಘಟಪ್ರಭಾ ನದಿಗೆ ಬಿಡಲಾಗುತ್ತಿದೆ.
Advertisement
ಇದರಿಂದ ಗೋಕಾಕ್ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು ನೋಡುಗರನ್ನ ತನ್ನತ್ತ ಸೆಳೆಯುತ್ತಿದೆ. ಈ ನಡುವೆ, ಖಾನಾಪುರ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಇದರಿಂದ ಗೋಡೆ ಕುಸಿದು ವಯೋವೃದ್ಧೆ ಗಂಭೀರ ಗಾಯಗೊಂಡಿದ್ದಾರೆ. ಬಡಸ್ ಗ್ರಾಮದ 84 ವರ್ಷದ ವಯೋವೃದ್ಧೆ ರುದ್ರವ್ವಾ ಗಿಡಬಸನವರ(84) ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸವದತ್ತಿ ತಾಲೂಕಿನಲ್ಲಿರುವ ನವಿಲುತೀರ್ಥ ಜಲಾಶಯದಿಂದ 21 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ರಾಮದುರ್ಗ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈಗ ಬಿಟ್ಟಿರುವ ನೀರಿನಿಂದಾಗಿ ರಾಮದುರ್ಗ ತಾಲೂಕಿನ ಹಿರೇಹಂಪಿಹೊಳಿ, ಚಿಕ್ಕ ಹಂಪಿಹೊಳಿ, ಅವರಾದಿ, ಸುನ್ನಾಳ, ಸುರೇಬಾನ್ ಸೇರಿದಂತೆ ತಾಲೂಕಿನ ಹತ್ತಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿದೆ.
ಯಾದಗಿರಿ ಬಸವಸಾಗರ ಜಲಾಶಯದ ಹೊರಹರಿವು ಗಂಟೆಯಿಂದ ಗಂಟೆಗೆ ಹೆಚ್ಚಾಗುತ್ತಿದೆ. ಬಸವಸಾಗರ ಜಲಾಶಯದಿಂದ ಬರೊಬ್ಬರಿ 2.51 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 30 ಗೆಟ್ ಗಳ ಪೈಕಿ 20 ಗೆಟ್ ಓಪನ್ ಮಾಡಿ ನೀರು ಹೊರಬಿಡಲಾಗುತ್ತಿದೆ. ಇಂದು 3 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆಯಿದೆ. ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ಜನ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.