ಕಾರವಾರ: ಜಾತ್ರೆಯನ್ನ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸಲಾಗುತ್ತದೆ. ಭಿನ್ನ ವಿಭಿನ್ನವಾದ ಆಚರಣೆಗಳಿಂದಲೇ ಜಾತ್ರೆಗಳು ಸಾಕಷ್ಟು ಜನರನ್ನು ಆಕರ್ಷಿಸುತ್ತವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಗ್ರಾಮದಲ್ಲಿ ವಿಶಿಷ್ಟ ಜಾತ್ರೆ ನಡೆಯುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಗ್ರಾಮದ ಭೂದೇವಿ ದೇವರ ಜಾತ್ರಾಯನ್ನು ಇಲ್ಲಿನ ಜನರು ಆಚರಿಸುತ್ತಾರೆ.
ಜಾತ್ರೆಯ ಪ್ರಯುಕ್ತ ಎಲ್ಲಾ ಮನೆಯವರು ತಮ್ಮ ಮನೆಯ ಮುಂಭಾಗದಲ್ಲಿ ತೋರಣಗಳನ್ನ ಕಟ್ಟುತ್ತಾರೆ. ವಿಶೇಷವೆಂದರೆ ಮಾವಿನ ತೋರಣಗಳಿಗೆ ಹೂವುಗಳನ್ನು ಹಾಕುವುದರ ಜೊತೆಗೆ ವಿವಿಧ ಬಗೆಯ ಹಣ್ಣುಗಳು, ತರಕಾರಿ, ತಿಂಡಿಗಳ ಪ್ಯಾಕೇಟ್ ಸೇರಿದಂತೆ ಕೋಲ್ಡಿಂಕ್ಸ್ ಗಳನ್ನ ಸಹ ಇದಕ್ಕೆ ಕಟ್ಟಲಾಗುತ್ತದೆ. ಜಾತ್ರೆಯ ದಿನ ಮನೆಮನೆಗೆ ಬರುವ ದೇವಿಯ ಪಲ್ಲಕ್ಕಿಗೆ ಗೌರವ ಸಲ್ಲಿಸುವುದು ಹಾಗೂ ತಮ್ಮ ಕೈಯಲ್ಲಾದ ಸೇವೆಯನ್ನ ನೀಡುವುದು ಇದರ ಉದ್ದೇಶವಾಗಿದೆ.
Advertisement
Advertisement
ಗ್ರಾಮದ ಗೌಡ, ಹರಿಕಂತ್ರ, ಭಂಡಾರಿ ಜನಾಂಗ ಸೇರಿದಂತೆ ಎಲ್ಲಾ ಸಮಾಜದ ಜನರೂ ಒಟ್ಟಾಗಿ ಸೇರಿ ಈ ಜಾತ್ರೆಯನ್ನು ವರ್ಷದಿಂದ ವರ್ಷಕ್ಕೆ ಅತೀ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಜಾತ್ರೆಯ ಎರಡನೇ ದಿನ ಅಂದರೆ ಕೊನೆಯ ದಿನ ದಹಿಂಕಾಲ ಎನ್ನುವ ವಿಶೇಷ ಉತ್ಸವವನ್ನ ಆಚರಿಸಲಾಗುತ್ತದೆ.
Advertisement
ಭೂದೇವಿಯ ಜಾತ್ರೆಯ ಪಲ್ಲಕ್ಕಿ ಮಧ್ಯಾನದ ನಂತರ ಗ್ರಾಮದಲ್ಲಿ ಹೊರಡುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಬಡಾವಣೆಗಳ ಯುವಕರು ಸೇರಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಾ ತೋರಣಗಳನ್ನ ಒಂದೊಂದಾಗಿ ಹರಿಯಲು ಮುಂದಾಗುತ್ತಾರೆ. ಒಬ್ಬರ ಮೇಲೊಬ್ಬರು ಪಿರಮಿಡ್‍ನಂತೆ ನಿಂತುಕೊಂಡು ಓರ್ವನನ್ನ ಮೇಲಕ್ಕೆ ಹತ್ತಿಸುತ್ತಾರೆ. ಅವನು ತೋರಣದ ಮೇಲಿನ ಕಂಭದ ಮೇಲೆ ಹತ್ತಿಕೊಂಡು ಅದಕ್ಕೆ ಕಟ್ಟಿರುವ ತಿಂಡಿ ತಿನಿಸುಗಳನ್ನ ಹರಿದು ಕೆಳಕ್ಕೆ ಹಾಕುತ್ತಾನೆ. ಕೆಳಗೆ ನಿಂತುಕೊಂಡಿರುವ ಉಳಿದ ಯುವಕರು, ಮಕ್ಕಳು ಆತ ಕೆಳಗೆ ಹಾಕಿದ ತಿನಿಸುಗಳನ್ನ ಹಿಡಿದುಕೊಳ್ಳುತ್ತಾರೆ.
Advertisement
ಕೆಲವರು ಕೈಗೆ ಸಿಕ್ಕ ತಿಂಡಿಗಳನ್ನ ಅಲ್ಲಿಯೇ ತಿಂದರೆ, ಇನ್ನು ಕೆಲವರು ಮನೆಗೆ ಒಯ್ಯುತ್ತಾರೆ. ಹೀಗೆ ಗ್ರಾಮದಲ್ಲಿ ಹಾಕಿರುವ ಸುಮಾರು 50ಕ್ಕೂ ಅಧಿಕ ತೋರಣಗಳನ್ನು ಎಲ್ಲರೂ ಸೇರಿ ತೆಗೆದ ಬಳಿಕ ಜಾತ್ರೆ ಸಂಪನ್ನಗೊಳ್ಳುತ್ತದೆ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ಜಾತ್ರೆಗಾಗಿಯೇ ಯುವಕರು ತಂಡಗಳನ್ನ ಮಾಡಿಕೊಂಡು ಒಂದೊಂದು ತಂಡವೂ ಒಂದೊಂದು ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಜಾತ್ರೆ ಕೇವಲ ಆಚರಣೆಯಾಗಿ ಉಳಿಯದೇ ಯುವಕರಲ್ಲಿ ಮನರಂಜನೆಯ ಒಂದು ಕ್ರೀಡೆಯಾಗಿ ಮಾರ್ಪಾಡಾಗಿದೆ.
ದಹಿಂಕಾಲ ಉತ್ಸವ ಒಂದು ರೀತಿ ಐಕ್ಯತೆಯನ್ನ ಮೂಡಿಸುವ ಹಬ್ಬವಾಗಿದ್ದು, ಸಂಜೆ ವೇಳೆಗೆ ದೇವಿಯ ದೇವಸ್ಥಾನದ ಬಳಿ ಮೊಸರು ಕುಡಿಕೆ ಒಡೆಯುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳುತ್ತದೆ. ಒಟ್ಟಾರೇ ಜನರು ಆಚರಿಸುವ ಒಂದೊಂದು ಬಗೆಯ ಆಚರಣೆಗಳೂ ಒಂದೊಂದು ರೀತಿಯ ವಿಶೇಷತೆಯನ್ನ ಹೊಂದಿವೆ. ಇಂತಹ ಆಚರಣೆಗಳು ಜನರಲ್ಲಿ ಏಕತೆಯನ್ನ ಮೂಡಿಸುತ್ತಿದೆ. ಪ್ರತಿ ವರ್ಷ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿರುವ ಜಾತ್ರೆಯು ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುತ್ತಿದೆ.