ಕಾರವಾರ: ದೇಶದ ಗಡಿಯಲ್ಲಿ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಸೈನಿಕರ ಸೇವೆ ಎಷ್ಟು ಅಮೂಲ್ಯವೋ, ಅವರೊಂದಿಗೆ ಹೆಜ್ಜೆ ಹಾಕಿ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಶತ್ರುಗಳನ್ನ ಸದೆಬಡಿದು, ಆಪತ್ತನ್ನು ನೀಗಿಸುವ ಸೈನ್ಯದಲ್ಲಿನ (Indian Army) ಶ್ವಾನಗಳ (Dogs) ಸೇವೆಯೂ ಅಷ್ಟೇ ಮಹತ್ವದ್ದಾಗಿದೆ.
ಬಾಂಬ್ ಪತ್ತೆ, ಮಾದಕ ವಸ್ತು ಶೋಧನೆ, ಉಗ್ರರ ಪತ್ತೆ ಕಾರ್ಯಾಚರಣೆಗಳಲ್ಲಿ ಮಾನವನಿಗಿಂತ ವೇಗವಾಗಿ ಮತ್ತು ನಿಖರವಾಗಿ ಕಾರ್ಯನಿರ್ವಹಿಸುವ ಈ ಶ್ವಾನಗಳು ದೇಶರಕ್ಷಣೆಯ ಮೌನ ಯೋಧರಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಶ್ವಾನಗಳನ್ನು ದೇಶಸೇವೆಗೆ ಸಮರ್ಪಿಸುವ ಅಪರೂಪದ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Ankola) ತಾಲೂಕಿನ ಭಾವಿಕೇರಿ ಗ್ರಾಮದ ರಾಘವೇಂದ್ರ ಭಟ್ ಅವರು ಮಾಡುತ್ತಿದ್ದಾರೆ. ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕು ಎಂಬ ತಮ್ಮ ಜೀವನದ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲವಾದರೂ, ತನ್ನ ಶ್ವಾನಗಳನ್ನ ಸೈನ್ಯಕ್ಕೆ ನೀಡಿ ಆ ಮೂಲಕ ದೇಶಸೇವೆ ಮಾಡುತ್ತಿರುವ ಈ ವ್ಯಕ್ತಿಯ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಇದನ್ನೂ ಓದಿ: ಆರ್ಮಿಗೆ ಸೇರೋಕಾಗಿಲ್ಲ ಅಂತ 30ಕ್ಕೂ ಹೆಚ್ಚು ಶ್ವಾನಗಳನ್ನು ದೇಶ ಸೇವೆಗೆ ನೀಡಿದ ಅಧಿಕಾರಿ!
ರಾಘವೇಂದ್ರ ಭಟ್ ಅವರಿಗೆ ಸೈನ್ಯ ಸೇರಿ ದೇಶಸೇವೆ ಮಾಡುವ ಅಪಾರ ಆಸೆ ಇತ್ತು. ಆದರೆ ವಿವಿಧ ಕಾರಣಗಳಿಂದ ಆ ಕನಸು ನನಸಾಗಲಿಲ್ಲ. ಆದರೂ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಅವರ ಮನದಲ್ಲಿ ಸದಾ ಜೀವಂತವಾಗಿತ್ತು. ಬಳಿಕ ಅವರು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರೂ, ದೇಶರಕ್ಷಣೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕೆಂಬ ಆಲೋಚನೆ ಅವರನ್ನು ಬಿಡಲಿಲ್ಲ. ಶ್ವಾನ ಪ್ರಿಯರಾಗಿದ್ದ ರಾಘು ಭಟ್, ಆರಂಭದಲ್ಲಿ ಮನೆಯಲ್ಲೇ ಕೆಲವು ತಳಿಯ ಶ್ವಾನಗಳನ್ನು ಸಾಕಿದ್ದರು. ತಮ್ಮ ಶ್ವಾನಗಳನ್ನು ಡಿಫೆನ್ಸ್‌ಗೆ ನೀಡಬೇಕು. ದೇಶಸೇವೆ ಮಾಡಬೇಕು ಎಂಬ ಹಂಬಲದಲ್ಲಿ ಈ ಬಗ್ಗೆ ಡಿಫೆನ್ಸ್‌ಗೆ ಮನವಿ ಮಾಡಿದ್ದರು.
ಹೀಗಾಗಿ ಅವರು ಸೈನ್ಯದಲ್ಲಿ ಬಳಸಲಾಗುವ ಶ್ವಾನಗಳ ತಳಿ, ಗುಣಲಕ್ಷಣಗಳ ಬಗ್ಗೆ ಅಧ್ಯಯನ ನಡೆಸಿ, ಸೈನ್ಯಕ್ಕೆ ಅತ್ಯುತ್ತಮವಾಗಿ ಹೊಂದಿಕೊಳ್ಳುವ ಬೆಲ್ಜಿಯಂ ಮೆಲಿನೋವಾ ತಳಿಯ ಮೇಲೆ ಗಮನಹರಿಸಿದರು. ಅದಕ್ಕಾಗಿಯೇ ವಿದೇಶದಿಂದ ಲಕ್ಷಾಂತರ ರುಪಾಯಿ ವ್ಯಯಿಸಿ ಬೆಲ್ಜಿಯಂ ಮೆಲಿನೋವಾ ತಳಿಯ ಮರಿಗಳನ್ನು ಮನೆಗೆ ತಂದರು.
2020ರಲ್ಲಿ ಆರಂಭವಾದ ದೇಶಸೇವೆಯ ಪಯಣ
ಸೈನ್ಯದ ಕಠಿಣ ಮಾನದಂಡಗಳನ್ನು ಪೂರೈಸುವ ಶ್ವಾನಗಳ ಅಗತ್ಯತೆಯನ್ನು ಅರಿತ ರಾಘವೇಂದ್ರ ಭಟ್, 2020ರಲ್ಲಿ ಹೊರದೇಶದಿಂದ ಎರಡು ಬೆಲ್ಜಿಯಂ ಮೆಲಿನೋವಾ ತಳಿಯ ಶ್ವಾನಗಳನ್ನು ತರಿಸಿಕೊಂಡರು. ಇವುಗಳನ್ನು ವೈಜ್ಞಾನಿಕವಾಗಿ, ಪ್ರೀತಿಯಿಂದ ಮತ್ತು ಶಿಸ್ತುಬದ್ಧವಾಗಿ ಸಾಕಿ, ಅವುಗಳ ಮರಿಗಳನ್ನು ದೇಶಸೇವೆಗೆ ನೀಡುವ ದೃಢ ನಿರ್ಧಾರ ಕೈಗೊಂಡರು.
ಡಿಫೆನ್ಸ್ ಇಲಾಖೆಯನ್ನು ಸಂಪರ್ಕಿಸಿ ತಮ್ಮ ಶ್ವಾನಗಳನ್ನು ದೇಶಸೇವೆಗೆ ನೀಡುವ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸೇನೆ, ತಾವೇ ಕುದ್ದಾಗಿ ಅಂಕೋಲದ ಇವರ ನಿವಾಸಕ್ಕೆ ಬಂದು ಶ್ವಾನಗಳ ಪರೀಕ್ಷೆ ನಡೆಸಿತು. ಮೊದಲ ಹಂತದಲ್ಲೇ ಎರಡು ಶ್ವಾನದ ಮರಿಗಳು ಸೈನ್ಯದ ಕಠಿಣ ಪರೀಕ್ಷೆಗಳನ್ನು ಉತ್ತೀರ್ಣಗೊಂಡು ಆಯ್ಕೆಯಾದವು. ಶ್ವಾನಗಳ ಕಾರ್ಯಕ್ಷಮತೆ, ಬುದ್ಧಿಮತ್ತೆ ಹಾಗೂ ಶಿಸ್ತು ಕಂಡು ಸಂತೃಪ್ತಗೊಂಡ ಸೇನೆ ಶ್ವಾನಗಳ ಬೇಡಿಕೆ ಇಟ್ಟಿತು.
ಐದು ವರ್ಷದಲ್ಲಿ 40 ಶ್ವಾನಗಳು ದೇಶಸೇವೆಗೆ
ಡಿಫೆನ್ಸ್‌ನಿಂದ ಇವರಿಗೆ ಬೇಡಿಕೆ ಹೆಚ್ಚಾದಂತೆ ಈವರೆಗೆ ರಾಘವೇಂದ್ರ ಭಟ್ ಅವರು 40 ಬೆಲ್ಜಿಯಂ ಮೆಲಿನೋವಾ ತಳಿಯ ಶ್ವಾನದ ಮರಿಗಳನ್ನು ಉಚಿತವಾಗಿ ಭಾರತೀಯ ಸೈನ್ಯಕ್ಕೆ ನೀಡಿದ್ದಾರೆ. ಈ ಶ್ವಾನಗಳು ಇಂದು ಅಸ್ಸಾಂ, ಜಮ್ಮು–ಕಾಶ್ಮೀರ ಸೇರಿದಂತೆ ದೇಶದ ವಿವಿಧ ಗಡಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಬಾಂಬ್ ಪತ್ತೆ, ಮಾದಕ ವಸ್ತು ಶೋಧನೆ, ಶಂಕಿತ ಪ್ರದೇಶಗಳ ತಪಾಸಣೆ ಸೇರಿದಂತೆ ಅನೇಕ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಸೈನಿಕರ ಜೊತೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತಿವೆ.
ಇದೇ ತಳಿಯ ಶ್ವಾನಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲೂ ನಿಯೋಜಿಸಲಾಗಿದ್ದು, ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಬಾಂಬ್ ಮತ್ತು ಡ್ರಗ್ಸ್ ಪತ್ತೆ ಕಾರ್ಯದಲ್ಲಿ ಬಳಕೆಯಾಗುತ್ತಿವೆ.
ಕುಟುಂಬದ ಬೆಂಬಲವೇ ಶಕ್ತಿ
ರಾಘು ಭಟ್ ಅವರ ಈ ದೇಶಸೇವೆಯ ಕಾರ್ಯದಲ್ಲಿ ಪತ್ನಿ ರಾಜೇಶ್ವರಿ ಅವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಶ್ವಾನಗಳ ಆರೈಕೆ, ಆರೋಗ್ಯ, ಮರಿಗಳ ಪಾಲನೆ ಸೇರಿದಂತೆ ಎಲ್ಲ ಕಾರ್ಯಗಳಲ್ಲಿ ಪತಿಯ ಜೊತೆಗೇ ಪತ್ನಿ ಹಾಗೂ ಕುಟುಂಬ ನಿಂತಿದ್ದಾರೆ. ಮನೆಯಲ್ಲೇ ಬೆಲ್ಜಿಯಂ ಮೆಲಿನೋವಾ ತಳಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಿರುವ ಈ ಕುಟುಂಬ, ಪ್ರತಿ ವರ್ಷ ಹುಟ್ಟುವ ಮರಿಗಳನ್ನು ಆರೋಗ್ಯಪೂರ್ಣವಾಗಿ ಬೆಳೆಸಿ ದೇಶಸೇವೆಗೆ ಸಮರ್ಪಿಸುತ್ತಿದೆ.
ಲೀಸಾ, ಟೈನಿ, ಕ್ಲಿಯಾ, ಕಿಂಗ್ ಫೈಟರ್ ಮತ್ತು ಡೆವಿಲ್ ಎಂಬ ಐದು ಬೆಲ್ಜಿಯಂ ಮೆಲಿನೋವಾ ಶ್ವಾನಗಳು ಇವರ ಮನೆಯಲ್ಲಿದ್ದು, ಅತೀ ಹೆಚ್ಚು ಲೀಸಾ ಶ್ವಾನದಿಂದಲೇ 20 ಮರಿಗಳನ್ನು ಅಸ್ಸಾಂ ರೈಫಲ್ಸ್‌ಗೆ ಉಚಿತವಾಗಿ ನೀಡಲಾಗಿದೆ. ಉಳಿದ ಶ್ವಾನಗಳು ಸಿ.ಆರ್.ಪಿ.ಎಫ್ (CRPF) ಸೇರಿದಂತೆ ಇತರೆ ವಿಭಾಗಕ್ಕೆ ನೀಡಿದ್ದು ಐದು ವರ್ಷದಲ್ಲಿ 40 ಶ್ವಾನಗಳನ್ನು ನೀಡಿದ ಹೆಗ್ಗಳಿಕೆ ಇವರದ್ದಾಗಿದ್ದು ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿವೆ.
ವಿಶ್ವಾದ್ಯಂತ ಬೇಡಿಕೆಯ ತಳಿ – ಬೆಲ್ಜಿಯಂ ಮೆಲಿನೋವಾ
ಬೆಲ್ಜಿಯಂ ಮೆಲಿನೋವಾ ಶ್ವಾನಗಳು ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, 12 ರಿಂದ 16 ವರ್ಷಗಳ ಜೀವಿತಾವಧಿ ಹೊಂದಿವೆ. ಇತರ ಶ್ವಾನಗಳಿಗಿಂತ ಹೆಚ್ಚು ಬುದ್ಧಿಮತ್ತೆ, ವೇಗ, ಶಕ್ತಿ ಹಾಗೂ ಮಾಲೀಕರೊಂದಿಗೆ ಗಾಢ ಬಾಂಧವ್ಯ ಹೊಂದಿರುವುದು ಈ ತಳಿಯ ಪ್ರಮುಖ ಗುಣ.
ಈ ಹಿಂದೆ ಅಮೇರಿಕ ಸೈನ್ಯಕ್ಕೆ ಬಿನ್ ಲ್ಯಾಡನ್ ಪತ್ತೆಹಚ್ಚಿದ ಕಾರ್ಯದಲ್ಲಿ ಬೆಲ್ಜಿಯಂ ಮೆಲಿನೋವಾ ಶ್ವಾನಗಳು ಮುನ್ನಲೆಗೆ ಬಂದವು. ಇದೇ ಕಾರಣಕ್ಕೆ ವಿಶ್ವಾದ್ಯಂತ ಈ ಶ್ವಾನಗಳ ಮರಿಗಳಿಗೆ ಭಾರೀ ಬೇಡಿಕೆ ಇದೆ.
ಪ್ರತಿ ಮರಿಯ ಬೆಲೆ 40 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ಇದ್ದರೂ, ಹಣಕ್ಕಿಂತ ದೇಶದ ಜವಾಬ್ದಾರಿಗೆ ಮೌಲ್ಯ ನೀಡಿರುವ ಈ ಕುಟುಂಬ, ಶ್ವಾನಗಳನ್ನು ಉಚಿತವಾಗಿ ದೇಶಸೇವೆಗೆ ನೀಡುವ ಮೂಲಕ ತಮ್ಮದೇ ಆದ ಕಾಣಿಕೆ ನೀಡುತ್ತಿವೆ.
ಶಸ್ತ್ರ ಹಿಡಿದು ಯುದ್ಧಭೂಮಿಗೆ ಹೋಗಲಾಗದಿದ್ದರೂ, ಶ್ವಾನಗಳ ಮೂಲಕ ದೇಶರಕ್ಷಣೆಗೆ ತಮ್ಮದೇ ಆದ ಪಾತ್ರ ವಹಿಸಿರುವ ಈ ವ್ಯಕ್ತಿಯ ಯಶೋಗಾಧೆ
ಎಲ್ಲರಿಗೂ ಪ್ರೇರಣೆಯಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಮೌನ ಯೋಧರು ಮತ್ತು ಅವರ ಹಿಂದೆ ನಿಂತಿರುವ ದೇಶಭಕ್ತಿಯ ಪರಾಕಾಷ್ಟೆ ಹೊಂದಿದ ರಾಘವೇಂದ್ರ ಭಟ್ ಅವರ ಸೇವೆ ದೇಶದ ಗೌರವವನ್ನು ಮತ್ತಷ್ಟು ಎತ್ತಿ ಹಿಡಿಯುತ್ತದೆ.





