ಕಾರವಾರ: ಯುವಕನೊಬ್ಬ ನಾಯಿಮರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಮಟಾ ಪಟ್ಟಣದ ಕಡ್ಲೆ ಗಾಂಧಿವನ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಗಾಳಿ ಮರದ ಕೆಳಗೆ ಹಾಡಹಗಲೇ ಮದ್ಯದ ಬಾಟಲಿ ಹಿಡಿದು ಕುಳಿತ ಯುವಕ, ನಾಯಿ ಮರಿಯೊಂದನ್ನು ಹಿಡಿದು ಅದರ ಬಾಯಿಗೆ ಮದ್ಯ ಸುರಿದು ವಿಕೃತಿ ಮೆರದಿದ್ದಾನೆ.
ನೀನು ಕೂತ್ಕೊಳ್ಳೆ, ಲಾಸ್ಟ್ ಪೆಗ್ ಐತಿ ಅಷ್ಟೇ. ತಿಂಡಿ ತಿಂದಿದ್ದೀಯಲಾ, ಕುಡಿಲೇ ಬೇಕು ಈಗ ಎನ್ನುತ್ತಾ ಮದ್ಯ ಕುಡಿಸಿದ್ದಾನೆ. ಸಮೀಪದಲ್ಲಿದ್ದ ಮತ್ತೊಬ್ಬ ಅದನ್ನು ವಿಡಿಯೋ ಮಾಡಿದ್ದು, ಯುವಕ ಶಿರಸಿ ಮೂಲದವನು ಎಂದು ತಿಳಿದುಬಂದಿದೆ. ಆದರೇ ಈವರೆಗೂ ಆತನ ಹೆಸರು ಪತ್ತೆಯಾಗಿಲ್ಲ. ನಾಯಿ ಮರಿಗೆ ಮದ್ಯ ಕುಡಿಸಿದ ಈತ, ಅಮಲೇರಿ ಅವುಗಳು ಒದ್ದಾಡುವುದನ್ನು ಕಂಡು ವಿಕೃತವಾಗಿ ಆನಂದಪಟ್ಟಿದ್ದಾನೆ. ಯುವಕನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.