ಸಿನಿಮಾ, ಪ್ರವಾಸ, ಸಮಾಜಸೇವೆ ಎನ್ನುತ್ತಾ ಸದಾ ಚಟುವಟಿಕೆಯಲ್ಲಿರುವ ಕಾರುಣ್ಯ ರಾಮ್, ಆಗಾಗ್ಗೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಕಳೆದ ದಸರಾದಲ್ಲಿ ಕಾರುಣ್ಯ ರಾಮ್ (Karunya Ram) ರಾಜಕುಮಾರಿ ಲುಕ್ ನಲ್ಲಿ ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಖತ್ ವೈರಲ್ ಆಗಿದ್ದವು ಇದೀಗ ಮತ್ತೆ ಕಾರುಣ್ಯ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಆಗ್ಗಾಗ್ಗೆ ಲುಕ್ ಟೆಸ್ಟ್ ಅನ್ನುವಂತೆ ಕಾರುಣ್ಯ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿಯ ಫೋಟೋಶೂಟ್ ಮತ್ತಷ್ಟು ಅಂದವನ್ನು ಹೆಚ್ಚಿಸಿದೆ. ರೆಡ್ ಮತ್ತು ಬ್ಲ್ಯಾಕ್ ಕಲರ್ ಕಾಂಬಿನೇಷನ್ ನಲ್ಲಿ ಅವರು ಸಖತ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಂಡಿದ್ದಾರೆ. ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ನೀನಾಸಂ ಸತೀಶ್ ಜೊತೆ ನಟಿಸಿದ್ದ ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ಕಾರುಣ್ಯ ಬೋಲ್ಡ್ ಆಗಿ ನಟಿಸಿದ್ದರು. ಅವರ ಡೈಲಾಗ್ ಮಾಸ್ ಆಗಿದ್ದವು. ಕಾರುಣ್ಯ ನಿರ್ವಹಿಸಿದ ಆ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅಲ್ಲದೇ, ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದ ಪ್ರಿಯಾ ಪಾತ್ರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.
ನಾನಾ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಕಾರುಣ್ಯ ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಸೇರಿದಂತೆ ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಮನೆ ಮಾರಾಟಕ್ಕಿದೆ ಸಿನಿಮಾದ ನಟನೆಗಾಗಿ ಇವರು ಸೈಮಾ ಪ್ರಶಸ್ತಿ ಕೂಡ ದೊರೆತಿದೆ. ಸಿನಿಮಾಗಳಲ್ಲಿ ಮಾತ್ರವಲ್ಲ, ಕಿರುತೆರೆ ಹಲವಾರು ಶೋಗಳಲ್ಲಿ ಕಾರುಣ್ಯ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಕೂಡ ಇವರಾಗಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತಮಿಳಿನ ಎರಡು ಚಿತ್ರಗಳಲ್ಲೂ ಕಾರುಣ್ಯ ನಟಿಸಿದ್ದಾರೆ. ಆ ಮೂಲಕ ತಮಿಳು ಪ್ರೇಕ್ಷಕರಿಗೂ ಇವರು ಹತ್ತಿರವಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂವಾದಿಸುವ ಇವರು, ಟ್ರಾವೆಲ್ ಪ್ರಿಯೆ. ಸದಾ ದೇಶಗಳನ್ನು ಸುತ್ತುತ್ತಲೇ ಇರುತ್ತಾರೆ. ಅವುಗಳ ಮಾಹಿತಿಯನ್ನೂ ಹಂಚಿಕೊಳ್ಳುತ್ತಾರೆ.
ಕೇವಲ ನಟನೆ ಮಾತ್ರವಲ್ಲ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಕಾರುಣ್ಯ. ಸಾಕಷ್ಟು ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಈ ಹಿಂದೆ ತಾವು ವಾಸವಿರುವ ರಾಜರಾಜೇಶ್ವರಿ ನಗರ (Rajarajeshwari Nagar) ಏರಿಯಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು (Potholes) ಮುಚ್ಚುವ ಮೂಲಕ ಪ್ರಶಂಸೆಗೆ ಕಾರಣರಾಗಿದ್ದರು. ರಾತ್ರಿ ಹನ್ನೊಂದು ಗಂಟೆಯ ಹೊತ್ತಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಳಿಗೆ ಇಳಿದಿದ್ದ ಕಾರುಣ್ಯ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದರು. ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ಕಾರುಣ್ಯ ಕೇವಲ ಗುಂಡಿಗಳನ್ನು ಮಾತ್ರ ಮುಚ್ಚಿಲ್ಲ. ತಮ್ಮದೇ ಆದ ಸಂಸ್ಕಾರ ಟ್ರಸ್ಟ್ (Sanskara Trust) ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಮೊನ್ನೆಯಷ್ಟೇ ರಾಜರಾಜೇಶ್ವರಿ ನಗರದಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದರು. ಆ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿದರು. ಅಲ್ಲದೇ ಕೋವಿಡ್ ವೇಳೆಯಲ್ಲೂ ಅವರು ಫುಡ್ ಕಿಟ್ ಹಂಚಿದ್ದರು. ತಮ್ಮ ಹುಟ್ಟು ಹಬ್ಬದಂದು ಅನಾಥ ಮಕ್ಕಳಿಗೆ ನೆರವಾಗುತ್ತಾ ಬಂದಿದ್ದಾರೆ.
2021ರಲ್ಲಿ ಕಾರುಣ್ಯ ರಾಮ್ ತಮ್ಮ ಕೇಶರಾಶಿಯನ್ನು 14 ಇಂಚು ಕಟ್ ಮಾಡಿ ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. 2021ರ ಹೊಸ ವರ್ಷದಲ್ಲಿ ಏನನ್ನಾದರೂ ಮಾಡಬೇಕು ಎಂದುಕೊಂಡಿದ್ದ ಕಾರುಣ್ಯ ರಾಮ್, ಅದರಂತೆ ಅವರ ಕೂದಲನ್ನು 14 ಇಂಚು ಕಟ್ ಮಾಡಿ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದರು.
ಮೈಸೂರಿನಲ್ಲಿ ನಡೆಯುತ್ತಿರುವ ತಮ್ಮ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿದ ಕಾರುಣ್ಯ ರಾಮ್ ಕೂದಲಿಗೆ ಕತ್ತರಿ ಹಾಕಿದ್ದರು. ಬೆಂಗಳೂರಿನ ಹೇರ್ ಡೊನೇಷನ್ ಸಂಸ್ಥೆಯ ಮೂಲಕವಾಗಿ ಕ್ಯಾನ್ಸರ್ ರೋಗಿಗಳಿಗೆ ತಲೆಕೂದಲನ್ನು ದಾನ ಮಾಡಿದ್ದರು.
ಪ್ರತಿಯೊಬ್ಬ ಭಾರತೀಯ ಮಹಿಳೆಗೂ ಕೂದಲು ಸ್ತ್ರೀಯತ್ವದ ಬಹುಮುಖ್ಯ ಭಾಗವಾಗಿದೆ. ಹೆಣ್ಣಿನ ಸೌಂದರ್ಯವನ್ನು ಎದ್ದು ಕಾಣುವಂತೆ ಕೇಶರಾಶಿ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ಕೂದಲಿನ ಪ್ರತಿಯೊಂದು ಎಳೆಯನ್ನು ಪ್ರೀತಿಸುತ್ತೇನೆ. ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ನೀಡುತ್ತಿದ್ದೇನೆ. ಇದು ಅಗತ್ಯವಿರುವವರನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಅವರ ಆರೋಗ್ಯದ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ . ಇದರಿಂದ ಸಾಕಷ್ಟು ಮಹಿಳೆಯರು ಮುಂದೆ ಬಂದು ತಾವೂ ನನ್ನೊಂದಿಗೆ ಕೈ ಜೋಡಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಇತರರನ್ನು ಪ್ರೇರೇಪಿಸಿದ್ದರು.
Web Stories