ಬೆಂಗಳೂರು: ಧಾರಾವಾಹಿ ನಟಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕುಮುದಾ ಅಲಿಯಾಸ್ ಅನಿಕಾ ಮದುವೆ ಮುರಿದು ಬೀಳಲು ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
10 ದಿನಗಳ ಹಿಂದೆ ಉದ್ಯಮಿ ಸಚಿನ್ ಎಂಬವರ ಜೊತೆ ನನ್ನ ನಿಶ್ಚಿತಾರ್ಥ ಆಗಿತ್ತು. ಆದರೆ ಈಗ ನಟಿ ಕಾರುಣ್ಯ ರಾಮ್ ನಿಂದಾಗಿ ಈ ನಿಶ್ಚಿತಾರ್ಥ ಬ್ರೇಕಪ್ ಆಗಿದೆ ಎಂದು ಅನಿಕಾ ಆರೋಪ ಮಾಡಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅನಿಕಾ, ಇದೆ ತಿಂಗಳು ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನನ್ನ ಮತ್ತು ಸಚಿನ್ ನಿಶ್ಚಿತಾರ್ಥ ನಡೆದಿತ್ತು. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ ಸಚಿನ್ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್ ಮೆಂಟ್ ಆದ ಮೇಲೆ ನನ್ನ ಜೊತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಟಿ ಅನಿಕಾ ಅವರ ಆರೋಪಕ್ಕೆ ಪ್ರತಿಕ್ರಯಿಸಿದ ನಟಿ ಕಾರುಣ್ಯ, ನನಗೆ ಅನಿಕಾ ಯಾರು ಎನ್ನುವುದೇ ಪರಿಚಯವೇ ಇಲ್ಲ. ನನಗೆ ಸಚಿನ್ ಕೂಡ ಗೊತ್ತಿಲ್ಲ. ನಾನು ಸ್ನೇಹಿತರ ಜೊತೆ ರೆಸ್ಟೋರೆಂಟ್ ಗೆ ಹೋಗಿದ್ದೆ ಅಲ್ಲಿ ಸಚಿನ್ ಇದ್ದರು. ಎಲ್ಲರ ಜೊತೆ ಇದ್ದಾಗ ಮಾತನಾಡಿದ್ದೀನಿ ಅಷ್ಟೆ ಎಂದು ಹೇಳಿದ್ದಾರೆ.
ಬಹುಶಃ ಆ ಹುಡುಗಿ ಪಬ್ಲಿಸಿಟಿ ಪಡೆಯೋಕೆ ಇದೆಲ್ಲ ಮಾಡುತ್ತಿರಬಹುದು. ನನಗೆ ಮದುವೆಯಾಗೋಕೆ ಅವರೇ ಬೇಕಿಲ್ಲ. ಆ ಹುಡುಗಿಗೆ ಬಹುಶಃ ಇನ್‍ಫಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಅನ್ನಿಸುತ್ತಿದೆ. ಆಕೆಯನ್ನು ನಾನು ನೋಡೇ ಇಲ್ಲ. ನಾನು ಯಾರ ಕುಟುಂಬಕ್ಕೂ ತೊಂದರೆ ನೀಡಿಲ್ಲ. ನನ್ನಿಂದ ತೊಂದರೆ ಆದರೆ ಆ ಹುಡುಗ ಮಾತಾಡಬೇಕು ಇವಳ್ಯಾಕೆ ಮಾತನಾಡುತ್ತಿದ್ದಾಳೆ? ನನಗೆ ಸಚಿನ್ ಪರಿಚಯವಿಲ್ಲ, ಅವರು ಪಬ್ಲಿಸಿಟಿಗೋಸ್ಕರ ಸುದ್ದಿ ಮಾಡುತ್ತಿರಬಹುದು ಎಂದು ನಟಿ ಕಾರುಣ್ಯ ರಾಮ್ ತಿಳಿಸಿದ್ದಾರೆ.
ಉದ್ಯಮಿ ಸಚಿನ್ ಯಾರೆಂಬುದು ನನಗೆ ಗೊತ್ತೇ ಇಲ್ಲ. ಯಾವುದೋ ಒಂದು ರೆಸ್ಟೊರೆಂಟ್ ಗೆ ಹೋದಾಗ ಅವನು ಪರಿಚಯವಾಗಿದ್ದ. ಅವನೊಂದಿಗೆ ಒಂದೇ ಒಂದು ಸಾರಿ ಮಾತನಾಡಿದ್ದೇನೆ. ಇಷ್ಟಕ್ಕೂ ಅವನು ವಯಸ್ಸಲ್ಲಿ ನನಗಿಂತ ದೊಡ್ಡವನು. ನನಗೆ ಈ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಆಕೆ ಕಿರುತೆರೆಯ ನಟಿ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರಿಗೂ ಫೋನ್ ಮಾಡಿಲ್ಲ, ಬೆದರಿಕೆಯೂ ಹಾಕಿಲ್ಲ. ನಾನೇದರೂ ಬೆದರಿಕೆ ಹಾಕಿದ್ದರೆ ಅವರ ಕುಟುಂಬದವರು ದೂರು ನೀಡಲಿ. ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಸುಮ್ ಸುಮ್ಮನೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದ್ದಾರೆ.