ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಮುತ್ತುವೇಲು ಕರುಣಾನಿಧಿ ನಿಧನರಾಗಿದ್ದಾರೆ. ಇವತ್ತು ಸಂಜೆ 6 ಗಂಟೆ 10 ನಿಮಿಷಕ್ಕೆ ನಿಧನದ ಸುದ್ದಿಯನ್ನ ಕಾವೇರಿ ಆಸ್ಪತ್ರೆ ವೈದ್ಯರು ಪ್ರಕಟಿಸಿದರು.
ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಜುಲೈ 27ಕ್ಕೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ 11 ದಿನಗಳಿಂದ ಚಿಕಿತ್ಸೆ ನಿಂತರವಾಗಿದ್ದ ಅವರನ್ನು ವಿಶೇಷ ವೈದ್ಯರ ತಂಡ ಸೂಕ್ಷ್ಮವಾಗಿ ನಿಗಾವಹಿಸಿತ್ತು. ಆರಂಭದ ಮೂರ್ನಾಲ್ಕು ದಿನಗಳಲ್ಲಿ ಚಿಕಿತ್ಸೆಗೆ ಅಚ್ಚರಿಯ ರೀತಿ ಸ್ಪಂದಿಸುತ್ತಿದ್ದ ತಲೈವಾ ಆರೋಗ್ಯ ಕಳೆದರಡು ದಿನಗಳಿಂದ ತೀವ್ರ ಚಿಂತಾಜನಕವಾಗಿತ್ತು.
Advertisement
ಕರುಣಾನಿಧಿ ಅವರ ಲಿವರ್, ಕಿಡ್ನಿ ಕಾರ್ಯ ಸ್ಥಗಿತವಾಗುತ್ತಾ ಹೋಯಿತು. ರಕ್ತದೊತ್ತಡವೂ ಗಣನೀಯ ಇಳಿಕೆಯಾಗಿತ್ತು. ಅಯ್ಯ ಅವರನ್ನ ಉಳಿಸಿಕೊಳ್ಳಲು ನಿನ್ನೆ ಸಂಜೆಯಿಂದಲೂ ನಾವು ಶತಪ್ರಯತ್ನ ಮಾಡಿದೆವು. ಆದರೆ, ಉಳಿಸಿಕೊಳ್ಳಲು ಆಗಲಿಲ್ಲ ಅಂತ ಕಾವೇರಿ ಆಸ್ಪತ್ರೆ ವೈದ್ಯರು ಪ್ರಕಟಿಸಿದರು. ಇದನ್ನು ಇದಿ: ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?
Advertisement
Advertisement
ಸೋಮವಾರ ಸಂಜೆಯಿಂದಲೂ ಆಸ್ಪತ್ರೆ ಮುಂದೆ ಜನಸಾಗರ ಸೇರಲಾರಂಭಿಸಿತ್ತು. ಪುತ್ರ ಸ್ಟಾಲಿನ್ ಅವರು ಸಿಎಂ ಪಳನಿಸ್ವಾಮಿ ಅವರ ಜೊತೆ ಸರಣಿ ಸಭೆ ನಡೆಸಿದ್ದರು. ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಪಳನಿಸ್ವಾಮಿ ತುರ್ತು ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು ಸೂಚಿಸಿದ್ದರು. ಇದರ ಮಧ್ಯೆ, ಕುಟುಂಬ ವರ್ಗದವರು, ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಹೊರಗೆ ಬಂದವರ ಮೊಗದಲ್ಲಿ ದುಃಖ ಮಡುಗಟ್ಟಿತ್ತು. ಇಷ್ಟೊತ್ತಿಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಮತ್ತೆ ಜಮಾಯಿಸಿದರು. ಮಹಿಳೆಯರಂತು ಕಣ್ಣೀರು ಸುರಿಸುತ್ತ ದೇವರಲ್ಲಿ ಪ್ರಾರ್ಥಸಿದರು. ಆದರೆ, ಅವರ ಪ್ರಾರ್ಥನೆ ಫಲಿಸಲಿಲ್ಲ.
Advertisement
ಬುಧವಾರ ಅಂತ್ಯಕ್ರಿಯೆ ನಡೆಯಲಿದ್ದು, ತಮಿಳುನಾಡಿನಲ್ಲಿ ಶೋಕದ ಕಾರ್ಮೋಡ ಆವರಿಸಿದೆ. ಶೋಕಾಚರಣೆ ಆಚರಿಸಲಾಗುತ್ತಿದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಇದನ್ನು ಓದಿ: ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?
ಕರುಣಾನಿಧಿ ಹೆಜ್ಜೆ ಗುರುತು:
* 1924 ಜೂನ್ 3ರಂದು ತಿರುವರೂರ್ ಜಿಲ್ಲೆಯ ತಿರುಕ್ಕುವಲೈನಲ್ಲಿ ಕರುಣಾನಿಧಿ ಜನನ
* ಕರುಣಾನಿಧಿ ಮೂಲ ಹೆಸರು ದಕ್ಷಿಣ ಮೂರ್ತಿ
* 14ನೇ ವಯಸ್ಸಿನಲ್ಲಿ ಅಳಗಿರಿಸ್ವಾಮಿ ಭಾಷಣದಿಂದ ಪ್ರಭಾವಿತರಾಗಿ ರಾಜಕೀಯ ರಂಗಕ್ಕೆ ಪ್ರವೇಶ
* 1932ರಲ್ಲಿ ಹಿಂದಿ ವಿರೋಧಿ ಚಳವಳಿಯಲ್ಲಿ ಭಾಗಿ
* ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ಸಂಘಟನೆ ನಾಯಕ
* 1957ರಲ್ಲಿ ತಿರುಚಿರಾಪಲ್ಲಿ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ
* 1962ರಲ್ಲಿ ವಿಧಾನಸಭೆ ವಿರೋಧಪಕ್ಷದ ಉಪನಾಯಕ
* 1967ರಲ್ಲಿ ಲೋಕೋಪಯೋಗಿ ಸಚಿವ
* 1969ರಲ್ಲಿ ಅಣ್ಣಾದೊರೈ ನಿಧನರಾದ ಬಳಿಕ ಸಿಎಂ
* 1971, 1989, 1996, 2006ರಲ್ಲಿ ಮುಖ್ಯಮಂತ್ರಿ
ಸಾಹಿತಿಯಾಗಿ ಕರುಣಾನಿಧಿ:
ಕರುಣಾನಿಧಿ ಅವರು ತಮಿಳು ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕವನ, ಕಾದಂಬರಿ, ಜೀವನಚರಿತ್ರೆ, ಸಂಭಾಷಣೆ ಸೇರಿದಂತೆ ಗೀತಾರಚನಾಕಾರರಾಗಿ ಗುರುತಿಸಿಕೊಂಡಿದ್ದಾರೆ. 100ಕ್ಕೂ ಹೆಚ್ಚು ಕವನ, ಗದ್ಯ ಬರೆದಿರುವ ಅವರು, 20ನೇ ವಯಸ್ಸಿನಲ್ಲಿ ಜ್ಯುಪಿಟರ್ ಪಿಕ್ಚರ್ಸ್ ನಲ್ಲಿ ಕಥಾ ಲೇಖಕರು. ಅವರು ಅಭಿನಯಿಸಿದ ಮೊದಲ ಸಿನಿಮಾ ‘ರಾಜಕುಮಾರಿ’ ಮೂಲಕವೇ ಜನಪ್ರಿಯತೆ ಗಿಟ್ಟಿಸಿಕೊಂಡರು. ಅಷ್ಟೇ ಅಲ್ಲದೆ 70 ಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ ಕೀರ್ತಿ ಕರುಣಾನಿಧಿಗೆ ಸೇರುತ್ತದೆ.
ಪತ್ರಕರ್ತರಾಗಿ ಕರುಣಾನಿಧಿ:
ಕರುಣಾನಿಧಿ ತಮ್ಮನ್ನು ಅನೇಕ ಕ್ಷೇತ್ರದಲ್ಲಿ ತೊಡಿಸಿಕೊಂಡಿದ್ದರು. ಪತ್ರಕರ್ತರು, ವ್ಯಂಗ್ಯಚಿತ್ರಕಾರರಾಗಿ ಪತ್ರಿಕೋದ್ಯಮಕ್ಕೆ ಕೊಡುಗೆ ನೀಡಿದ್ದಾರೆ. 1942ರಲ್ಲಿ ಮುರಸೊಳಿ ಮಾಸಪತ್ರಿಕೆ ಆರಂಭಸಿದ ಅವರು, ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ, ಪ್ರಕಾಶಕರಾಗಿ ಬೆಳೆಸಿದರು. ನಂತರದಲ್ಲಿ ಅದನ್ನು ದಿನಪತ್ರಿಕೆಯಾಗಿ ಪರಿವರ್ತಿಸಿದರು. ಕೇವಲ ಮುರಸೂಳಿ ಅಲ್ಲದೆ “ಕುಡಿಯರಸು” ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿ ‘ಮುತಾರಮ್’ ಪತ್ರಿಕೆಗೆ ಹೊಸಜೀವ ತುಂಬಿದರು.
ಕರುಣಾನಿಧಿ ಮತ್ತು ವಿವಾದ:
ಡಿಎಂಕೆ ಪಕ್ಷವನ್ನು ತಮ್ಮ ಹಿಡಿತಕ್ಕೆ ತಗೆದುಕೊಂಡು ನೆಹರು ಮಾದರಿಯಲ್ಲಿಯೇ ವಂಶಪಾರಂಪರ್ಯ ರಾಜಕೀಯಕ್ಕೆ ಮುಂದಾಗಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಕರುಣಾನಿಧಿ ಪುತ್ರರಾದ ಆಳಗಿರಿ, ಸ್ಟಾಲಿನ್, ಕನಿಮೋಳಿ, ಮುತ್ತು ರಾಜಕೀಯ ಪ್ರವೇಶ ಮಾಡಿದ್ದಾರೆ. ಇತ್ತ ಸಂಬಂಧಿ ಹಾಗೂ ಪಕ್ಷದ ಮುಖಂಡ ಮುರಸೊಳಿ ಮಾರನ್ ಪುತ್ರ ಕಲಾನಿಧಿ ಮಾರನ್‍ಗೆ ಪ್ರಕರಣವೊಂದರಲ್ಲಿ ನೆರವು ನೀಡಿದ್ದರು. ಹೀಗಾಗಿ ಕರುಣಾನಿಧಿ ವಿರುದ್ಧ ಸ್ವಜನಪಕ್ಷಪಾತ ಆರೋಪ ಕೇಳಿ ಬಂದಿತ್ತು.
ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಪೋಷಣೆ ನೀಡಿದ್ದರು ಎನ್ನುವ ವಿವಾದ ಅವರ ಸುತ್ತ ಸುತ್ತಿತ್ತು. ಶ್ರೀರಾಮನ ಬಗ್ಗೆಯೂ ಕರುಣಾನಿಧಿ ಲಘು ಹೇಳಿಕೆ ನೀಡಿದ್ದರು. ಇತ್ತ ಮಗಳು ಎಂ.ಕೆ.ಕನಿಮೋಳಿ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಬಂಧಿತರಾಗಿದ್ದರು.