LatestNational

ಲಂಡನ್‍ ನಿಂದ ಬಂದಿಳಿಯುತ್ತಿದ್ದಂತೆ ಚಿದಂಬರಂ ಪುತ್ರ ಕಾರ್ತಿ ಅರೆಸ್ಟ್

ಚೆನ್ನೈ: ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂನನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘನೆಯ ಆರೋಪದಡಿ ಇಂದು ಸಿಬಿಐ ಬಂಧಿಸಿದೆ.

ಲಂಡನ್‍ನಿಂದ ಚೆನ್ನೈಗೆ ವಾಪಸ್ಸಾಗಿದ್ದ ಕಾರ್ತಿಯನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ವಲಸೆ ಅಧಿಕಾರಿಗಳು ನಂತರ ಸಿಬಿಐ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಏರ್‍ಪೋರ್ಟ್‍ನಲ್ಲೇ ಸಿಬಿಐ ಅಧಿಕಾರಿಗಳು ಕಾರ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಬಳಿಕ ದೆಹಲಿಗೆ ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿದಂಬರಂ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದ ವೇಳೆ ಕಾರ್ತಿ ಚಿದಂಬರಂ ತಂದೆಯ ಹೆಸರು ಬಳಸಿ ಐಎನ್‍ಎಕ್ಸ್ ಮೀಡಿಯಾಗೆ 300 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಕಿಕ್‍ಬ್ಯಾಕ್ ಪಡೆದಿದ್ದಾರೆಂಬ ಆರೋಪವಿದೆ. ಮೊದಲು ಪ್ರಕರಣ ದಾಖಲಾದಾಗ 10 ಲಕ್ಷ ರೂ. ಪಡೆದಿದ್ದಾರೆಂದು ಉಲ್ಲೇಖಿಸಲಾಗಿತ್ತು. ಆದ್ರೆ ಈಗ ಅದಕ್ಕೂ ಹೆಚ್ಚಿನ ಮೊತ್ತ ಪಡೆದಿರುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕಳೆದ ವರ್ಷ ಮೇನಲ್ಲಿ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಸಿಬಿಐ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಕಾರ್ತಿ ಚಿದಂಬರಂ ತೆರಿಗೆಗೆ ಸಂಬಂಧಿಸಿದ ತನಿಖೆ ತಪ್ಪಿಸಲು ಐಎನ್‍ಎಕ್ಸ್ ಮೀಡಿಯಾದಿಂದ ಹಣ ಪಡೆದಿದ್ದಾರೆಂಬ ಆರೋಪವೂ ಇದೆ.

ಕಾರ್ತಿ ಚಿದಂಬರಂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಗಳಿಗೆ ಅಡ್ಮಿಷನ್ ಮಾಡಿಸುವ ಸಲುವಾಗಿ ನವೆಂಬರ್‍ನಲ್ಲಿ ಇಂಗ್ಲೆಂಡಿಗೆ ಹೋಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಕಾರ್ತಿಯನ್ನ ಬಂಧಿಸಿರುವುದು ಸೇಡಿನ ರಾಜಕೀಯ ಎಂದು ಕಾಂಗ್ರೆಸ್ ಹೇಳಿದೆ.

ಏನಿದು ಪ್ರಕರಣ?: 2008ರಲ್ಲಿ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳಿಗೆ ಹಣ ಪಾವತಿಸಿ ಶೇರುಗಳನ್ನು ನೀಡಿತ್ತು. ಪೀಟರ್ ಮುಖರ್ಜಿ ಅವರ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಲವು ಕಂತುಗಳಲ್ಲಿ ಹಣವನ್ನ ಪಾವತಿಸಿತ್ತು. ಅಲ್ಲದೆ 60 ಶೇರುಗಳನ್ನು ಲಂಡನ್ ಮೂಲದ ಆರ್ಟಿವಿಯಾ ಡಿಜಿಟಲ್ ಯುಕೆ ಲಿಮಿಟಡ್ ಕಂಪೆನಿಯಿಂದ ಕಾರ್ತಿ ಅವರ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿತ್ತು.

ಈ ಹಿಂದೆ ಕಾರ್ತಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಕಾರ್ತಿ ಅವರ ಸಂಸ್ಥೆಯ ಬಗ್ಗೆ ಮಾಹಿತಿವುಳ್ಳ ಹಾರ್ಡ್ ಡಿಸ್ಕ್ ಗಳನ್ನ ಜಪ್ತಿ ಮಾಡಲಾಗಿತ್ತು. ಕಾರ್ತಿ ಅವರು ಐಎನ್‍ಎಕ್ಸ್ ಮೀಡಿಯಾದಿಂದ ಕಿಕ್‍ಬ್ಯಾಕ್ ಪಡೆದಿದ್ದಾರೆಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2008 ಸೆಪ್ಟೆಂಬರ್ 22ರಂದು ಎಫ್‍ಐಪಿಬಿ(ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ) ಯಿಂದ 220 ಮಿಲಿಯನ್ ಡಾಲರ್ ಕ್ಲಿಯರೆನ್ಸ್ ಗಾಗಿ ಅರ್ಜಿ ಹಾಕಿದ್ದ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಸಂಸ್ಥೆಗೆ 35 ಲಕ್ಷ ರೂ. ನೀಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಹಿಂದೆ ಐಎನ್‍ಎಕ್ಸ್ ಮೀಡಿಯಾದ ಮಾಲೀಕರಾಗಿದ್ದ ಪೀಟರ್ ಮುಖರ್ಜಿ ಮತ್ತು ಪತ್ನಿ ಇಂದ್ರಾಣಿ ಮುಖರ್ಜಿ ಸದ್ಯ ತಮ್ಮ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಕೊಲೆ ಪ್ರಕರಣದ ತನಿಖೆ ವೇಳೆ ಮುಖರ್ಜಿ ಅವರ ಹಣಕಾಸು ವ್ಯವಹಾರಗಳನ್ನ ಪರೀಶಿಲನೆಗೆ ಒಳಪಡಿಸಿದಾಗ ಐಎನ್‍ಎಕ್ಸ್ ಮೀಡಿಯಾ ಡೀಲ್ ಬಗ್ಗೆ ಸುಳಿವು ಸಿಕ್ಕಿತ್ತು. 2009ರಲ್ಲಿ ಮುಖರ್ಜಿ ಐಎನ್‍ಎಕ್ಸ್ ಮೀಡಿಯಾದಿಂದ ಹೊರಬಂದಿದ್ದರು.

Leave a Reply

Your email address will not be published.

Back to top button