Connect with us

Latest

ಆನಂದಭಾಷ್ಪ ಹರಿಸಿ ಸಿಖ್ಖರನ್ನು ಸ್ವಾಗತಿಸಿದ ಪಾಕ್ ಬಸ್ ಚಾಲಕ – ವಿಡಿಯೋ ನೋಡಿ

Published

on

– ಕರ್ತಾರ್‍ಪುರ ಕಾರಿಡಾರ್ ನಲ್ಲೊಂದು ಮನಕಲುಕುವ ಘಟನೆ

ನವದೆಹಲಿ: ಭಾರತೀಯ ಪತ್ರಕರ್ತರೊಬ್ಬರು ಪಾಕಿಸ್ತಾನದ ಶೆಟಲ್ ಬಸ್ ಚಾಲಕನೊಂದಿಗೆ ನಡೆಸಿರುವ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ತಾರ್‍ಪುರ ಕಾರಿಡಾರ್ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಭಾರತೀಯ ಹಾಗೂ ಪಾಕಿಸ್ತಾನದ ಡ್ರೈವರ್ ಮಧ್ಯೆ ನಡೆದ ಈ ಸಂಭಾಷಣೆ ಇದೀಗ ನೆಟ್ಟಿಗರ ಮನ ಗೆದ್ದಿದೆ.

ಗುರುನಾನಕ್ ಅವರ 550ನೇ ಜನ್ಮ ದಿನಾಚರಣೆಯನ್ನು ಸಿಖ್ ಧರ್ಮದ ಸಂಸ್ಥಾಪಕರ ಅಂತಿಮ ವಿಶ್ರಾಂತಿ ಸ್ಥಳವಾದ ಗುರುದ್ವಾರ ದರ್ಬಾರ್ ಸಾಹಿಬ್‍ನಲ್ಲಿ ಆಚರಿಸಲಾಗುತ್ತಿದೆ. ಭಾರತೀಯ ಯಾತ್ರಿಕರ ಮೊದಲ ಬ್ಯಾಚ್ ಕರ್ತಾರ್‍ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಈಗಾಗಲೇ ಪ್ರವೇಶಿಸಿದೆ.

ನವೆಂಬರ್ 9ರಂದು ಈ ಕಾರಿಡಾರ್ ತೆರೆಯಲಾಗಿದ್ದು, ಪಂಜಾಬ್‍ನ ಗುರುದಾಸ್‍ಪುರದ ಡೇರಾ ಬಾಬಾ ನಾನಕ್ ದೇವಾಲಯವನ್ನು ಪಾಕಿಸ್ತಾನದ ಪಂಜಾಬ್ ಜಿಲ್ಲೆಯ ಕರ್ತಾರ್‍ಪುರದ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಜೋಡಿಸಲಾಗಿದೆ. ಈ ಕಾರಿಡಾರ್ ಎರಡು ನೆರೆಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕತೆಯ ಹೊಸ ಅಧ್ಯಾಯವನ್ನು ತೆರೆದಂತಾಗಿದೆ.

ಇದರ ಮಧ್ಯೆ ಒಂದು ಅಪರೂಪದ ಘಟನೆ ನಡೆದಿದೆ. ಇಂಡೋ-ಪಾಕ್ ಗಡಿಯಿಂದ ಗುರುದ್ವಾರ ದರ್ಬಾರ್ ಸಾಹಿಬ್‍ಗೆ ಭಾರತೀಯ ಭಕ್ತರನ್ನು ಕರೆದೊಯ್ಯಲು ಶೆಟಲ್ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಾಹನ ಓಡಿಸುವ ಜವಾಬ್ದಾರಿಯನ್ನು ಚಾಲಕ ಸದಮ್ ಹುಸೇನ್‍ಗೆ ನೀಡಲಾಗಿದೆ. ಈ ಚಾಲಕನನ್ನು ಭಾರತೀಯ ಪತ್ರಕರ್ತ ರವೀಂದರ್ ಸಿಂಗ್ ರಾಬಿನ್ ಮುಕ್ತವಾಗಿ ಮಾತನಾಡಿಸಿದ್ದಾರೆ. ಕಾರಿಡಾರ್ ತೆರೆದಿರುವುದು ಸಂತೋಷವನ್ನು ತಂದಿದೆ. ಇದೊಂದು ಅದ್ಭುತವಾಗಿದ್ದು, ಭಾರತೀಯ ಯಾತ್ರಿಕರು ತಮ್ಮ ಧಾರ್ಮಿಕ ಗುರುಗಳಿಗೆ ಗೌರವ ನೆಪದಲ್ಲಾದರೂ ಪಾಕಿಸ್ತಾನಕ್ಕೆ ಬರುತ್ತಿದ್ದಾರೆ. ಈ ಘಳಿಗೆಯಿಂದ ನೀವು ನನ್ನಷ್ಟು ಸಂತೋಷವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಮನದಾಳವನ್ನು ಹಂಚಿಕೊಂಡಿದ್ದಾನೆ.

ಈ ಬೆಳವಣಿಗೆಯಿಂದಾಗಿ ನಿನಗೆ ಸಂತೋಷವಾಗಿದೆಯೇ ಎಂದು ಪತ್ರಕರ್ತ ರಾಬಿನ್ ಕೇಳಿದಾಗ ಹುಸೇನ್ ಉತ್ತರಿಸಿ, ನನ್ನ ಕಣ್ಣುಗಳು ಕಣ್ಣೀರಿನೊಂದಿಗೆ ಸ್ವಾಗತಿಸಿವೆ. ನನಗೆ ತುಂಬಾ ಸಂತೋಷವಾಗಿದೆ ಎಂದು ಉತ್ತರಿಸಿದ್ದಾನೆ. ಮುಸ್ಲಿಮರು ಹಜ್‍ಗಾಗಿ ಮೆಕ್ಕಾಗೆ ಭೇಟಿ ನೀಡಿದಂತೆ, ಭಾರತೀಯರು ತೀರ್ಥಯಾತ್ರೆಗೆ ಪಾಕಿಸ್ತಾನಕ್ಕೆ ಬರುತ್ತಾರೆ. ಈ ಹಿಂದೆ ನಾನು ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನನಗೆ ಸಾಕಷ್ಟು ಸಿಖ್ ಸ್ನೇಹಿತರಿದ್ದರು ಎಂದು ತನ್ನ ಭಾವನೆಯನ್ನು ಹಂಚಿಕೊಂಡಿದ್ದಾನೆ.

ಈ ಸಂವಾದದ ವಿಡಿಯೋವನ್ನು ರಾಬಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

Click to comment

Leave a Reply

Your email address will not be published. Required fields are marked *