ಭಾರತದಿಂದ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳುವ ಯಾತ್ರಿಕರಿಗೆ ಯಾವುದೇ ಅಡೆತಡೆಯಿಲ್ಲದ ಪ್ರಯಾಣ ಮಾಡಲು ಕರ್ತಾರ್‌ಪುರ ಕಾರಿಡಾರ್‌ನ ಒಪ್ಪಂದದ (Kartarpur Corrodor Agreement) ಮಾನ್ಯತೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಭಾರತ (India) ಮತ್ತು ಪಾಕಿಸ್ತಾನ (Pakistan) ಒಪ್ಪಿಕೊಂಡಿವೆ. ಈ ಒಪ್ಪಂದದ ಮಾನ್ಯತೆ ವಿಸ್ತರಣೆಯಿಂದ ಪಾಕಿಸ್ತಾನದ ಪವಿತ್ರ ಗುರುದ್ವಾರಕ್ಕೆ (Gurudwar) ಭೇಟಿ ನೀಡಲು ಭಾರತದ ಯಾತ್ರಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಹಾಗಿದ್ರೆ ಕರ್ತಾರ್‌ಪುರ ಒಪ್ಪಂದ ಏನು? ಗುರುದ್ವಾರಕ್ಕೆ ತೆರಳಲು ಈ ಒಪ್ಪಂದ ಏಕೆ ಬೇಕು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಕರ್ತಾರ್‌ಪುರ ಕಾರಿಡಾರ್ ಒಪ್ಪಂದ?
ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರ ಸಿಖ್ಖರ ಅತ್ಯಂತ ಪೂಜ್ಯ ಸ್ಥಳಗಳಲ್ಲಿ ಒಂದಾಗಿದೆ. ಗುರುನಾನಕ್ ದೇವ್ 1521 ರಿಂದ 1539 ರವರೆಗೆ ತಮ್ಮ ಅಂತಿಮ ದಿನಗಳನ್ನು ಕರ್ತಾರ್‌ಪುರ ಸಾಹಿಬ್‌ನಲ್ಲಿ ಕಳೆದರು ಎಂದು ನಂಬಲಾಗಿದೆ. ಪಾಕ್‌ನ ಪಂಜಾಬ್ ಪ್ರಾಂತ್ಯದ ಶಾಕಾರ್‌ಗಢದಲ್ಲಿ ಕರ್ತಾರ್‌ಪುರ ಇದೆ. ಸಿಖ್ ಧರ್ಮವನ್ನು ಸಂಸ್ಥಾಪನೆ ಮಾಡಿದ ಗುರು ನಾನಕರು ಇಲ್ಲಿ 18 ವರ್ಷ ವಾಸಿಸಿದ್ದರು. ಹೀಗಾಗಿ ಈ ದೇಗುಲ ಸಿಖ್ಖರಿಗೆ ಅತ್ಯಂತ ಮಹತ್ವದ ಸ್ಥಳವಾಗಿದೆ.ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 3 ಕಿ.ಮೀ ದೂರದಲ್ಲಿ ಈ ಸ್ಥಳವಿದೆ.
Advertisement
Advertisement
ಸಿಖ್ ಸಮುದಾಯವು ಕಾರಿಡಾರ್‌ಗೆ ಪ್ರವೇಶವನ್ನು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದೆ. ದೇಗುಲ ಪ್ರವೇಶದ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲು 1998ರಲ್ಲಿ ಮತ್ತು ನಂತರ 2004 ರಲ್ಲಿ ಮತ್ತೆ ಚರ್ಚೆಯಾಯಿತು. 2008 ರಲ್ಲಿ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಾರಿಡಾರ್ ವಿಷಯವನ್ನು ಪ್ರಸ್ತಾಪಿಸಿತು. ಆದರೆ ರಾಜಕೀಯ ಉದ್ವಿಗ್ನತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ. ಹೀಗಾಗಿ ಭಾರತೀಯ ಭಕ್ತರು ಗುರುದ್ವಾರವನ್ನು ತಲುಪಲು ಲಾಹೋರ್ ಮುಖಾಂತರ ಹೋಗಬೇಕಾಗಿತ್ತು. ಗುರುದ್ವಾರ ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದರೂ 125 ಕಿ.ಮೀ. ಸುತ್ತಿಕೊಂಡು ಹೋಗಬೇಕಾಗಿತ್ತು.
Advertisement
2018 ರ ನವೆಂಬರ್‌ನಲ್ಲಿ ಕರ್ತಾರ್‌ಪುರ ಕಾರಿಡಾರ್‌ನ ಅಭಿವೃದ್ಧಿಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿತು. ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮದಿನವನ್ನು ಗುರುತಿಸಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಕರ್ತಾರ್‌ಪುರ ಕಾರಿಡಾರ್ ಅನ್ನು ನವೆಂಬರ್ 9, 2019 ರಂದು ಉದ್ಘಾಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕಾರಿಡಾರ್ ಅನ್ನು ಅನಾವರಣಗೊಳಿಸಿದರು ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಗಿನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೇರಿದಂತೆ 500 ಕ್ಕೂ ಹೆಚ್ಚು ಭಾರತೀಯ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಅನ್ನು ಗುರುದ್ವಾರಕ್ಕೆ ಕಳುಹಿಸಲಾಯಿತು. ಆಗಿನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಗಡಿಯಲ್ಲಿ ನಡೆದ ಸಮಾರಂಭದಲ್ಲಿ ಕರ್ತಾರ್‌ಪುರ ಕಾರಿಡಾರ್ ಅನ್ನು ಉದ್ಘಾಟಿಸಿ ಭಾರತೀಯ ಯಾತ್ರಾರ್ಥಿಗಳಿಗೆ ಪವಿತ್ರ ದೇಗುಲಕ್ಕೆ ಭೇಟಿ ನೀಡಲು ದಾರಿ ಮಾಡಿಕೊಟ್ಟರು.
Advertisement
ಈ ಒಪ್ಪಂದವು ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ನಮನ ಸಲ್ಲಿಸಲು ಪಾಕಿಸ್ತಾನಕ್ಕೆ ಭಾರತೀಯ ಯಾತ್ರಾರ್ಥಿಗಳು ಮತ್ತು ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್‌ದಾರರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸುತ್ತದೆ. ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಮೂಲಕ ಸುಮಾರು 5,000 ಪ್ರವಾಸಿಗರು ಪವಿತ್ರ ದೇಗುಲಕ್ಕೆ ಭೇಟಿ ನೀಡಬಹುದು. ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಾದ ಝೀರೋ ಪಾಯಿಂಟ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಸಿಖ್ಬರು ಪಾಕಿಸ್ತಾನದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ತೆರಳಲು ಅನುಕೂಲ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್ ನಿರ್ಮಾಣಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪಂಜಾಬ್ ಮುಖ್ಯ ಮಂತ್ರಿ ಅಮರಿಂದರ್ ಸಿಂಗ್ ಶಂಕುಸ್ಥಾಪನೆ ಮಾಡಿದ್ದಾರೆ.
ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಒಪ್ಪಂದದ ಮಾನ್ಯತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಗುರುದ್ವಾರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಾರತೀಯ ಯಾತ್ರಾರ್ಥಿಗಳ ಮೇಲೆ ವಿಧಿಸುವ 20 ಅಮೆರಿಕನ್ ಡಾಲರ್ ಸೇವಾ ಶುಲ್ಕವನ್ನು ಪಾಕಿಸ್ತಾನ ರದ್ದು ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮನವಿ ಮಾಡಿದೆ.
ಪ್ರವಾಹದಿಂದ ನಾಶವಾದ ನಂತರ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರ ದೇಗುಲವನ್ನು 1925ರಲ್ಲಿ ಮರು ನಿರ್ಮಿಸಲಾಯಿತು. ಇದನ್ನು ಪಟಿಯಾಲದ ಮಹಾರಾಜ ಮತ್ತು ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಜ್ಜ ಭೂಪಿಂದರ್ ಸಿಂಗ್ ನಿರ್ಮಿಸಿದ್ದಾರೆ.
ಭಾರತ ಸರ್ಕಾರದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಮೂಲಕ ಭಾರತದಿಂದ 1.92 ಲಕ್ಷ ಭಕ್ತರು ಪಾಕಿಸ್ತಾನದ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. 2021ರಲ್ಲಿ ಭಾರತದಿಂದ ಒಟ್ಟು 10, 025 ಯಾತ್ರಿಕರು ಕರ್ತಾರ್ ಪುರ ಕಾರಿಡಾರ್ ಮೂಲಕ ಗುರದ್ವಾರಕ್ಕೆ ತೆರಳಿದ್ದರೆ, 2022 ರಲ್ಲಿ 86, 097 ಮತ್ತು 2023ರಲ್ಲಿ 96,555 ಯಾತ್ರಿಕರು ತೆರಳಿದ್ದಾರೆ.. ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಮುಚ್ಚಲಾಗಿದ್ದ ಕಾರಿಡಾರ್ ಒಂದೂವರೆ ವರ್ಷಗಳ ನಂತರ ನವೆಂಬರ್ 2021ರಲ್ಲಿ ಮತ್ತೆ ಕಾರ್ಯಾರಂಭ ಮಾಡಿತು.