ಬೆಂಗಳೂರು: ಕನ್ನಡ ಚಿತ್ರ ಅಭಿಮಾನಿಗಳಿಗೆ ಹೊಸತನದ ಅನುಭವ ನೀಡಲು ಡಿಜೆ ಎಂಟರ್‍ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ `ಕರ್ಷಣಂ’ ಚಿತ್ರದ ಮುಹೂರ್ತ ಭಾನುವಾರ ನಗರದ ದುರ್ಗಾ ಇಂದ್ರಾಕ್ಷಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು.
ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಧನಂಜಯ್ ಅತ್ರೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮುಹೂರ್ತದ ನಂತರ ಮಾತನಾಡಿದ ಅವರು, ಉಪೇಂದ್ರ ಅವರ `ಬುದ್ಧಿವಂತ’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ನಾನು ಚಿತ್ರರಂಗ ಪ್ರವೇಶ ಮಾಡಿದೆ. ಅನಂತರದಲ್ಲಿ ಯೋಧ, ಬೊಂಬಾಟ್, ದೇವ್ರು, ವೀರಪ್ಪನ್ ಅಟ್ಟಹಾಸ ಚಿತ್ರಗಳಲ್ಲಿ ನನ್ನ ಸಿನಿಮಾ ಪ್ರಯಾಣ ಮುಂದುವರೆಯಿತು. ಕಿರುತೆರೆಯಲ್ಲಿ `ಚಿತ್ರಲೇಖಾ’ ಧಾರವಾಹಿಯಲ್ಲಿ ನಟನೆ ಮಾಡಿದ್ದೇನೆ. ಅನಂತರ ಸ್ವಲ್ಪ ದಿನಗಳ ಕಾಲ ಬ್ರೇಕ್ ಪಡೆಯಬೇಕಾಯಿತು ಎಂದರು.
Advertisement
Advertisement
ಮೊದಲ ಬಾರಿಗೆ ಚಂದನವನಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿ ಹಾಗೂ ನಿರ್ಮಾಪಕನಾಗಿ ಪ್ರವೇಶಿಸುವ ಅವಕಾಶ ಲಭಿಸಿದೆ. ಈ ಮೂಲಕ ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಕನ್ನಡ ಸಿನಿಮಾ ಅಭಿಮಾನಿಗಳಿಗೆ ಒಂದು ಉತ್ತಮ ಚಿತ್ರ ನೀಡುತ್ತಿದ್ದೇವೆ. ಚಿತ್ರ ಶೀರ್ಷಿಕೆ `ಕರ್ಷಣಂ’ ಮೂಲತಃ ಸಂಸ್ಕೃತ ಪದವಾಗಿದ್ದು, ಕನ್ನಡದಲ್ಲಿ ಸೆಳೆತ, ಸಂಕಷ್ಟ ಎಂಬ ಅರ್ಥಗಳನ್ನು ನೀಡುತ್ತದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಅದರ ಅರ್ಥವನ್ನು ನಿರ್ಧರಿಸಬಹುದು ಎಂದರು. ಚಿತ್ರದಲ್ಲಿ ಧನಂಜಯ್ ಒಬ್ಬ ವಿದ್ಯಾವಂತ ಸ್ಲಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳೊಂದಿಗೆ ಕೂಡಿದೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವ ಉದ್ದೇಶ ಹೊಂದಿದ್ದೇವೆ. ಚಿತ್ರದ ನಿರ್ದೇಶಕರಾದ ಶರವಣ ಅವರಿಗೂ ಇದು ಮೊದಲ ಸಿನಿಮಾ. ಅವರು ಈ ಹಿಂದೆ ಮಹಾಭಾರತ, ಸೀತೆ ಧಾರವಾಹಿಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ. ವಿಶೇಷ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ ಎಂದರು.
Advertisement
Advertisement
ನಿರ್ದೇಶಕ ಶರವಣ ಅವರು ಮಾತನಾಡಿ, ಚಿತ್ರದಲ್ಲಿ ಹಿರಿಯ ಹಾಗೂ ಹೊಸ ಕಲಾವಿದರ ತಂಡವೇ ಇದೆ. ಚಿತ್ರದ ನಾಯಕರಾಗಿ ಧನಂಜಯ್ ಅತ್ರೆ, ನಾಯಕಿಯಾಗಿ ಅನುಷಾ ರಾಯ್ ಅಭಿನಯಿಸುತ್ತಿದ್ದಾರೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರಿಗೆ ವಿಶೇಷ ಪಾತ್ರ ನೀಡುವ ಯೋಚನೆ ಮಾಡಲಾಗಿದೆ. ಉಳಿದಂತೆ ಗೌತಮ್, ಮನಮೋಹನ ರಾಯ್ ಹಾಗೂ ಹಾಸ್ಯ ಕಲಾವಿದರಾಗಿ ವಿಜಯ್ ಚಂದುರ್, ಕ್ಯಾಮೆರಾ ಮೆನ್ ಆಗಿ ಮೋಹನ್ ಎಂ. ಮುಗುಡೇಶ್ವರನ್ ಸೇರಿದಂತೆ ಚಿತ್ರದಲ್ಲಿ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಕಿರುತೆರೆಯಲ್ಲಿ ಯಶ್ವಸಿಯಾಗಿ ಕಾರ್ಯನಿರ್ವಹಿಸುವ ಮೂಲಕ ಈ ಬಾರಿ ಜನರ ಮನಸ್ಸಿಗೆ ಹತ್ತಿರವಾದ ಹಾಗೂ ಸಸ್ಪೆನ್ಸ್ ಹಿನ್ನೆಲೆ ಇರುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವಾಗ ಸೀಟ್ ತುದಿಯಲ್ಲಿ ಕೂತು ನೋಡುತ್ತಾರೆ ಎಂಬ ಭರವಸೆಯನ್ನು ನೀಡುತ್ತೇನೆ. ಚಿತ್ರಕ್ಕೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಈ ವೇಳೆ ಧನ್ಯವಾದ ತಿಳಿಸುತ್ತೇನೆ ಎಂದರು. ಮುಹೂರ್ತ ಸಮಾರಂಭದಲ್ಲಿ ಹಿರಿಯ ಕಲಾವಿದ ಶ್ರೀನಿವಾಸ್ ಮೂರ್ತಿ ಅವರು ಭಾಗವಹಿಸಿ ಶುಭ ಕೋರಿದರು.