ಮುಂಬೈ: ಪದ್ಮಾವತ್ ಸಿನಿಮಾದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಶ್ರೀ ರಜಪೂತ ಕರ್ಣಿ ಸೇನಾ ತನ್ನ ನಿರ್ಧಾರವನ್ನು ಶುಕ್ರವಾರ ತಿಳಿಸಿದೆ.
ಮುಂಬೈನ ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ನಾಯಕ ಯೋಗೇಂದ್ರ ಸಿಂಗ್ ಖಟರ್ ಈ ಬಗ್ಗ ನಿರ್ಣಯ ತೆಗೆದುಕೊಂಡಿದ್ದಾರೆ. ಯೋಗೇಂದ್ರ ಸಿಂಗ್ ತಮ್ಮ ನಿರ್ಧಾರವನ್ನು ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಅಧ್ಯಕ್ಷ ಸುಖ್ ದೇವ್ ಸಿಂಗ್ ಗೋಮಾಡಿ ಅವರಿಗೆ ರವಾನಿಸಿದ್ದಾರೆ. ಶುಕ್ರವಾರದಂದು ಮುಂಬೈನಲ್ಲಿ ಕರ್ಣಿ ಸೇನಾದ ಕೆಲವು ಸದಸ್ಯರು ಪದ್ಮಾವತ್ ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರದ ವಿವಾದಗಳಿಂದ ಮುಕ್ತವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ರಜಪೂತ ವ್ಯಕ್ತಿ ಹೆಮ್ಮೆ ಪಡುತ್ತಾರೆ ಎಂದು ಹೇಳಿದ್ದಾರೆ.
Advertisement
Advertisement
ಚಿತ್ರ ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ಹೊಂದಿಲ್ಲ. ದೆಹಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ದೃಶ್ಯಗಳು ಎಲ್ಲಿಯೂ ರಜಪೂತ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡುವುದಿಲ್ಲ. ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವ ಪತ್ರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಪತ್ರ ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಹರಿಯಾಣ ಮತ್ತು ದೇಶದ ಚಿತ್ರಮಂದಿರಗಳ ಮಾಲೀಕರಿಗೆ ಸಿನಿಮಾ ರಿಲೀಸ್ ಮಾಡಲು ಒಪ್ಪಿಗೆ ನೀಡಿದಂತಾಗುತ್ತದೆ ಎಂದು ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ.
Advertisement
ಕರ್ಣಿ ಸೇನಾ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಸಿನಿಮಾವನ್ನು ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಆದ್ರೆ ಸುಪ್ರೀಂ ಕೋರ್ಟ್ ಕರ್ಣಿ ಸೇನಾದ ಅರ್ಜಿಯನ್ನ ರದ್ದುಗೊಳಿಸಿ, ಪದ್ಮಾವತ್ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಕರ್ಣಿ ಸೇನಾ ಮಾತ್ರ ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್ ಗೆ ಬೆಂಕಿ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದರು. ಕರ್ಣಿ ಸೇನಾದ ಬೆದರಿಕೆ ಹೆದರಿದ ಕೆಲವು ಚಿತ್ರಮಂದಿರಗಳ ಮಾಲೀಕರು ‘ಪದ್ಮಾವತ್’ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರು. ಕರ್ಣಿ ಸೇನಾ ಪ್ರತಿಭಟನೆಯನ್ನು ಹಿಂದೆ ಪಡೆದಿರುವದರಿಂದ ಚಿತ್ರಮಂದಿರಗಳ ಮಾಲೀಕರು ನಿರ್ಭಯವಾಗಿ `ಪದ್ಮಾವತ್’ ಸಿನಿಮಾ ರಿಲೀಸ್ ಮಾಡಬಹುದಾಗಿದೆ.
Advertisement
ಪದ್ಮಾವತ್ ಸಿನಿಮಾ ಜನವರಿ 25ರಂದು ಬಿಡುಗೊಡೆ ಆಗಿದ್ದು, ಈಗಾಗಲೇ 200 ಕೋಟಿ ಅಧಿಕ ಹಣವನ್ನು ತನ್ನ ಗಲ್ಲಾಪೆಟ್ಟಿಗೆಯಲ್ಲಿ ತುಂಬಿಸಿಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಭದ್ರತೆ ನೀಡಲಾಗಿತ್ತು. 2017 ಡಿಸೆಂಬರ್ 01 ರಂದು ಪದ್ಮಾವತ್ ಸಿನಿಮಾ ಬಿಡುಗೊಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು. ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ವಿರೋಧ ಮಾಡುತ್ತಿದ್ದ ಕರ್ಣಿ ಸೇನಾ ದೇಶಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಬೋರ್ಡ್ ಚಿತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿ ಸಿನಿಮಾದ ಟೈಟಲ್ ಸೇರಿದಂತೆ ಕೆಲವು ಬದಲಾವಣೆ ಮಾಡುವಂತೆ ಚಿತ್ರತಂಡಕ್ಕೆ ಸೂಚಿಸಿತ್ತು. ಸೆನ್ಸಾರ್ ಮಂಡಳಿಯ ನಿರ್ದೇಶನದಂತೆ ಚಿತ್ರತಂಡ ಸಿನಿಮಾದಲ್ಲಿ ಮಾರ್ಪಡು ಮಾಡಿಕೊಂಡು ಬಿಡುಗೊಡೆ ಮಾಡಿದೆ.