ಬೆಂಗಳೂರು: ರಾಜ್ಯದಲ್ಲಿ ಹೊಸ ಜಾತಿಗಣತಿಗೆ (Caste Census) ದಿನಾಂಕ ನಿಗದಿಯಾಗಿದ್ದು, 16 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ತನಕ ಜಾತಿಗಣತಿ ಸಮೀಕ್ಷೆ ನಡೆಯಲಿದ್ದು, ಸಂಪೂರ್ಣ ಮೊಬೈಲ್ ಆಪ್ (Mobile App) ಮೂಲಕವೇ ಮನೆ ಮನೆ ಸಮೀಕ್ಷೆ ನಡೆಯಲಿದೆ.
ಕಾವೇರಿ ನಿವಾಸದಲ್ಲಿ ಇವತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಾಗಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿತು. ರಾಜ್ಯದ 7 ಕೋಟಿ ಜನರ ಸಮೀಕ್ಷೆ ನಡೆಸುವ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಅಕ್ಟೋಬರ್ ಅಂತ್ಯದ ಒಳಗೆ ಸರ್ಕಾರ ಹೊಸ ಜಾತಿಗಣತಿ ವರದಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಡೆಡ್ ಲೈನ್ ನೀಡಿದ್ದಾರೆ. ಕಾಂತರಾಜು ಆಯೋಗ ಸಿದ್ಧಪಡಿಸಿ ಕಳೆದ ಜಾತಿಗಣತಿಯಲ್ಲಿ ಕೇಳಿದ್ದ 54 ಪ್ರಶ್ನಾವಳಿ ಜೊತೆಗೆ ಇನ್ನಷ್ಟು ಅಂಶಗಳನ್ನು ಸೇರಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಬಾರಿ ಸಮೀಕ್ಷಾ ಕಾರ್ಯಕ್ಕೆ 1.65 ಲಕ್ಷ ಗಣತಿದಾರರ ಅವಶ್ಯಕತೆ ಇದ್ದು, ಶಿಕ್ಷಕರ ಜೊತೆಗೆ ಇತರೆ ಇಲಾಖೆಗಳ ಸಿಬ್ಬಂದಿ ಬಳಕೆಗೂ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 2020 ರಿಂದ ಇಲ್ಲಿಯವರೆಗೆ 343 ಬಾರಿ ಪಕ್ಷಿಗಳು ಡಿಕ್ಕಿ
ಹೊಸ ಜಾತಿಗಣತಿ ಹೇಗೆ?
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜೊತೆಗೆ ಆರ್ಥಿಕ ಪರಿಸ್ಥಿತಿ ಸಮೀಕ್ಷೆ ನಡೆಸಲಾಗುತ್ತದೆ. ಅಕ್ಟೋಬರ್ ಅಂತ್ಯದೊಳಗಾಗಿ ಸರ್ಕಾರಕ್ಕೆ ಸಮೀಕ್ಷಾ ವರದಿ ಸಲ್ಲಿಸಬೇಕಾಗುತ್ತದೆ.
ಕಾಂತರಾಜು ಆಯೋಗ 54 ಪ್ರಶ್ನೆಗಳೊಂದಿಗೆ ಮ್ಯಾನ್ಯುಯಲ್ ಆಗಿ ಈ ಹಿಂದೆ ಸಮೀಕ್ಷೆ ನಡೆಸಿತ್ತು, ಈಗ ಇನ್ನಷ್ಟು ಅಂಶಗಳನ್ನು ಸೇರಿಸಿ ಮೊಬೈಲ್ ಆಪ್ ಬಳಸಿಕೊಂಡೇ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ.
ತೆಲಂಗಾಣದ ಜಾತಿಗಣತಿ ಅಧ್ಯಯನ ನಡೆಸಲು ಮೇಲುಸ್ತುವಾರಿಗೆ ಉನ್ನತಮಟ್ಟದ ಸಮಿತಿ ರಚನೆ ಮಾಡಲಾಗುತ್ತದೆ. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಬೇಕು. ಸಮೀಕ್ಷೆ ಕಾರ್ಯಕ್ಕೆ 1.65ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲ ಅವಶ್ಯಕತೆಯಿದೆ. ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಸೇವೆಯೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ.