ಬೆಂಗಳೂರು/ಕೋಲಾರ: 2016ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಚಿನ್ನದ ಗಣಿ ನಾಡಿನ ಖ್ಯಾತಿಯ ಕೋಲಾರದ ಹೆಣ್ಣು ಮಗಳು ನಂದಿನಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ಮೂಲಕ ಯುಪಿಎಸ್‍ಸಿ ಇತಿಹಾಸದಲ್ಲಿ ಎರಡನೇ ಬಾರಿಗೆ ಕನ್ನಡತಿಯೊಬ್ಬರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದಂತಾಗಿದೆ.
ಕೋಲಾರ ಜಿಲ್ಲೆ ಕೆಂಬೋಡಿ ಗ್ರಾಮದ ಕೆ.ಆರ್ ನಂದಿನಿ ಟಾಪರ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸದ್ಯ ಹರ್ಯಾಣಾದ ಫರೀದಾಬಾದ್‍ನಲ್ಲಿ ಐ.ಆರ್.ಎಸ್ ತರಬೇತಿಯಲ್ಲಿರುವ ಕೆ.ಆರ್. ನಂದಿನಿ, ನಿವೃತ್ತ ಹೈಸ್ಕೂಲ್ ಶಿಕ್ಷಕರಾದ ರಮೇಶ್ ಅವರ ಪುತ್ರಿ.
ಕೋಲಾರದ ಚಿನ್ಮಯ ಸ್ಕೂಲ್‍ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ನಂದಿನಿ, ಪಿಯುಸಿಯನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರೈಸಿದರು. ನಂತ್ರ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಬಿಇ ಪದವಿ ಪಡೆದ್ರು. ನಂತರ ದೆಹಲಿ ಕರ್ನಾಟಕ ಭವನದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ರು. ಕಳೆದ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 849ನೇ ಸ್ಥಾನ ಪಡೆದು ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾಗಿದ್ದರು. ಐಆರ್‍ಎಸ್ ಅಧಿಕಾರಿಯಾಗಿದ್ದುಕೊಂಡೇ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಕೆ.ಆರ್. ನಂದಿನಿ ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಇನ್ನು ಶಿವಮೊಗ್ಗದ ಧ್ಯಾನಚಂದ್ರ 47ನೇ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಿನೋಬನಗರ ಲಕ್ಷ್ಮೀಪೂರ ಬಡವಾಣೆಯ ಹಾಲೇಶಪ್ಪನವರ ಮಗ ಧ್ಯಾನ್ ಚಂದ್ರ ಸದ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸ್ತಿದ್ದಾರೆ. ಈ ಬಾರಿಯ ಇನ್ನೂ ವಿಶೇಷ ಅಂದ್ರೆ, ಸಂಪೂರ್ಣ ಅಂಧತ್ವ ಹೊಂದಿರುವ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯ ಕೆಂಪಹೊನ್ನಯ್ಯ 340ನೇ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸದ್ಯ ಮೈಸೂರಿನ ಒಂಟಿಕೊಪ್ಪಲ್‍ನ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಕೆಂಪಹೊನ್ನಯ್ಯ, ತಮ್ಮ ಮೂರನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಕರ್ನಾಟಕದ ಐಎಎಸ್ ಬಾಬಾ ಸಂಸ್ಥೆಯಲ್ಲಿ ತರಬೇತಿ ಪಡೆದ 6 ಮಂದಿ ಈ ಸಲ ಶ್ರೇಯಾಂಕದ 100ನೇ ಸ್ಥಾನದೊಳಗಿದ್ದಾರೆ. ಅನ್ಮೋಲ್ ಶೇರ್ ಸಿಂಗ್‍ಬೇಡಿ ದ್ವಿತೀಯ ಸ್ಥಾನ ಹಾಗೂ ಗೋಪಾಲಕೃಷ್ಣ ರೋನಂಕಿ ತೃತೀಯ ಸ್ಥಾನ ಪಡೆದಿದ್ದಾರೆ. 2016ನೇ ಸಾಲಿನಲ್ಲಿ ಒಟ್ಟು 1099 ಮಂದಿ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ.
ಯುಪಿಎಸ್‍ಸಿ ಟಾಪರ್ ಆದ ನಂದಿನಿ ಅವರಿಗೆ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.
Congratulations to K R Nandini of Karnataka for being the civil services topper in the country. We are proud of her achievement.
— CM of Karnataka (@CMofKarnataka) May 31, 2017