ಬೆಂಗಳೂರು: ಕರ್ನಾಟಕ (Karnataka) ಕಂಡಂತಹ ದಕ್ಷ ಪೊಲೀಸ್ ಅಧಿಕಾರಿ ಬಿ.ಎನ್ ಗರುಡಾಚಾರ್ (BN Garudachar) ಇಂದು ಬೆಳಿಗ್ಗೆ 3 ಗಂಟೆಗೆ ವಿಧಿವಶರಾಗಿದ್ದಾರೆ.
90ರ ಹರೆಯದ ಗರುಡಾಚಾರ್ ಅವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ದಕ್ಷತೆ ಮತ್ತು ಪ್ರಾಮಾಣಿಕತೆಯ ರೂಪವಾಗಿದ್ದರು. ಶನಿವಾರ ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ (Wilson Garden) ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ:ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ
ಬಯಲುಸೀಮೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಬರದ ಬೆಂಗಾಡು. ಈ ಹಳ್ಳಿಯ ಕೃಷಿ ಕುಟುಂಬದಲ್ಲಿ 1929ರಲ್ಲಿ ಹುಟ್ಟಿದ ಬಿ.ಎನ್. ಗರುಡಾಚಾರ್, ಹುಟ್ಟುತ್ತಲೇ ಕಷ್ಟವನ್ನು ಬೆನ್ನಿಗೆ ಕಟ್ಟಿಕೊಂಡು ಬಂದವರು. ಎಮ್ಮೆ, ದನ ಕಾಯುವ ಕೆಲಸ ಮಾಡಿ, ಸಗಣಿ ಬಾಚಿ ಬೇಸಾಯದ ಬಾಳುವೆ ಕಲಿತವರು. ತಂದೆಯ ಅಕಾಲಿಕ ಮರಣದ ನಂತರ ಕಡು ಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಅಮ್ಮ ಆಸರೆಯಾದರು. ಬಂಧುಗಳ, ಹಿತೈಷಿಗಳ ನೆರವಿನಲ್ಲಿ ಬೆಳೆದು, ಹಳ್ಳಿಯ ಕೂಲಿ ಮಠದಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಬಾಲಕ ಗರುಡಾಚಾರ್, ಗೊರೂರು, ಹಾಸನ, ಮೈಸೂರುಗಳಲ್ಲಿ ಅಲೆದಾಡಿ, ಅವರಿವರ ಮನೆಯಲ್ಲಿ ಆಶ್ರಯ ಪಡೆದು, ವಾರಾನ್ನ ಉಂಡು ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಮುಂದುವರಿದು, 1953ರಲ್ಲಿ ಐಪಿಎಸ್ ಪಾಸ್ ಮಾಡಿ, ಮೊದಲಿಗರೆನಿಸಿಕೊಂಡರು.
ಓದಿನ ನಂತರ ಸರ್ವೇಯರ್, ಅಬಕಾರಿ ಇನ್ಸ್ಪೆಕ್ಟರ್ ಕೆಲಸಕ್ಕೆ ಸೇರಿದರು. ಅಲ್ಲಿಂದ ನೇರವಾಗಿ ಐಪಿಎಸ್ ಮಾಡಿ, ತಿರುವನ್ವೇಲಿಯಲ್ಲಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸಿದ ಗುರುಡಾಚಾರ್‌ಗೆ, ಬಿಂಡಿಗನವಿಲೆಯ ಬಡತನ, ಹಸಿವು, ಅವಮಾನ, ಹಿಂಜರಿಕೆ, ಮುಗ್ಧತೆ, ಪ್ರಾಮಾಣಿಕತೆ ಎಲ್ಲವೂ ಬೆನ್ನಿಗಿದ್ದವು. ಅವುಗಳ ಅಗಾಧ ಅನುಭವ ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ ಪ್ರಶಸ್ತಿ, ಪುರಸ್ಕಾರ, ಪ್ರಶಂಸೆ ಪಡೆಯುವಲ್ಲಿ ಉದ್ದಕ್ಕೂ ಸಹಕರಿಸಿದ್ದವು. ಪೊಲೀಸ್ ವೃತ್ತಿಯಲ್ಲಿ ಶಿಸ್ತು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಗರುಡಾಚಾರ್ ಬಹಳ ಬೇಗ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಅಧಿಕಾರಸ್ಥ ರಾಜಕಾರಣಿಗಳ ಕಣ್ಣಿಗೆ ಬಿದ್ದಿದ್ದರು. ಕೊಪ್ಪಳ, ಹುಮ್ನಾಬಾದ್, ತುಮಕೂರು, ಬಳ್ಳಾರಿ, ಬೆಂಗಳೂರು ಜಿಲ್ಲಾ ಎಸ್ಪಿಯಾಗಿ ಉತ್ತಮ ಸೇವೆ ಸಲ್ಲಿಸಿ ಹೆಸರಾಗಿದ್ದರು.ಇದನ್ನೂ ಓದಿ:ಎಸ್‌ಬಿಐ ಬ್ಯಾಂಕ್ ದರೋಡೆ ಕೇಸ್ – 12.96 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ 5 ಆರೋಪಿಗಳು ಅರೆಸ್ಟ್
ಬಿ.ಎನ್ ಗರುಡಾಚಾರ್ ಅವರು 1963ರಲ್ಲಿ ಬೆಂಗಳೂರು ನಗರದ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದರು, ಆ ಸಮಯದಲ್ಲಿ ಬೆಂಗಳೂರಿನ ಕಾರ್ಪೊರೇಷನ್ ವೃತ್ತದಲ್ಲಿ ಬೆಂಗಳೂರು ನಗರದ ಮೊದಲ ಟ್ರಾಫಿಕ್ ಸಿಗ್ನಲ್ ಪ್ರಾರಂಭಿಸಿದ್ದರು. ಈ ಐತಿಹಾಸಿಕ ಘಟನೆಯ ಸವಿನೆನಪಿಗಾಗಿ, ಈ ಘಟನೆಯನ್ನು ಹೆಸರಿಸುವ ಕಲ್ಲನ್ನು 2021ರ ಮಾರ್ಚ್ನಲ್ಲಿ ಖುದ್ದು ಗರುಡಾಚಾರ್ ಅವರೇ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್, ಬೆಂಗಳೂರು ನಗರದ ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಜತೆಗೂಡಿ ಉದ್ಘಾಟಿಸಿದ್ದರು. ಅಂದು ಗರುಡಾಚಾರ್ ಅವರನ್ನೂ ಪೊಲೀಸ್ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಗಿತ್ತು.
1972ರಲ್ಲಿ ಡಿಐಜಿಯಾಗಿದ್ದಾಗ, 1975ರಲ್ಲಿ ಇಂಟಲಿಜೆನ್ಸ್ ಡಿಐಜಿ ಆದಾಗ, 1976ರಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಾಗ ಮುಖ್ಯಮಂತ್ರಿ ದೇವರಾಜ ಅರಸರ ಆಡಳಿತವಿತ್ತು. ಅನಂತರ ಅಡಿಷನಲ್ ಐಜಿ, ಡಿಜಿ ಮತ್ತು ಐಜಿಪಿಯಾಗಿ ನಿವೃತ್ತರಾದರು. ಖಡಕ್ ಅಧಿಕಾರಿ ಎಂದೇ ಹೆಸರು ಪಡೆದ ಗರುಡಾಚಾರ್ ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್, ಹೆಗಡೆಯವರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದರು.
1975ರ ತುರ್ತು ಪರಿಸ್ಥಿತಿಯಲ್ಲಿ ಇಂಟಲಿಜೆನ್ಸ್ ಐಜಿಯಾಗಿ, ರಾಷ್ಟ್ರಮಟ್ಟದ ರಾಜಕೀಯ ನಾಯಕರನ್ನು ಬಂಧಿಸಿ, ಜೈಲಿಗೆ ಹಾಕುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದರು. ದೇವರಾಜ ಅರಸರನ್ನು 1962ರಿಂದ ಬಲ್ಲವರಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡು, ನಾಲ್ಕು ವರ್ಷಗಳ ಕಾಲ ಕಮಿಷನರ್ ಹುದ್ದೆಯಲ್ಲಿದ್ದು, ಪ್ರತಿದಿನ ಅರಸು ಅವರೊಂದಿಗೆ ಮುಖಾಮುಖಿಯಾಗುತ್ತಿದ್ದರು.
60ರ ದಶಕದಲ್ಲಿ ಹೈದರಾಬಾದ್‌ನಲ್ಲಿ ಕಲಿತ ಉರ್ದುವನ್ನು ಇಂದಿಗೂ ಬಿಡದೆ, ಪ್ರತಿದಿನ ಡೈಲಿ ಸಾಲಾರ್ ಉರ್ದು ಪತ್ರಿಕೆಯನ್ನು ತಪ್ಪದೆ ಓದುವ ಹವ್ಯಾಸ ಇಟ್ಕೊಂಡಿದ್ದರು. 90ರ ಹರೆಯದಲ್ಲೂ ಗುರುಡಾಚಾರ್, ಮಗನ ಪ್ರತಿಷ್ಠಿತ ಗರುಡಾ ಮಾಲ್‌ನಲ್ಲಿ, ಏಳನೆ ಮಹಡಿಯಲ್ಲಿ ಯುವಕರನ್ನೂ ನಾಚಿಸುವ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬಿಂಡಿಗೇನವಿಲೆ ಗ್ರಾಮ ಮೂಲದವರಾದ ಬಿ.ಎನ್.ಗರುಡಾಚಾರ್ ರವರು ತಮ್ಮ ಶಿಕ್ಷಣವನ್ನು ಪೂರೈಸಿ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡು, ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಂತರ ಬೆಂಗಳೂರು ಜಿಲ್ಲೆಯ ಎಸ್.ಪಿ ಹಾಗೂ ಬೆಂಗಳೂರು ಮಹಾನಗರದ ಡಿ.ಸಿ.ಪಿ ಯಾಗಿ (8 ವರ್ಷಗಳು) ಮತ್ತು ಪೊಲೀಸ್ ಕಮಿಷನರ್ ಆಗಿ (4 ವರ್ಷ 2 ತಿಂಗಳು), ಪೊಲೀಸ್ ಡಿಜಿ/ಐಜಿಪಿಯಾಗಿ (3 ವರ್ಷ 8 ತಿಂಗಳು) ಸೇವೆ ಸಲ್ಲಿಸಿದರು.
ಇವರ ಕಾರ್ಯದಕ್ಷತೆಯನ್ನು ಮೆಚ್ಚಿ ಕರ್ನಾಟಕ ಸರ್ಕಾರವು ಕೆ.ಎ.ಟಿ ಯ ಸದಸ್ಯರಾಗಿ ಓರ್ವ ಐಪಿಎಸ್ ಅಧಿಕಾರಿಯನ್ನು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನೇಮಕ ಮಾಡಿತ್ತು. ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಇವರ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.ಇದನ್ನೂ ಓದಿ:ಇಂದು ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್ ಫೈಟ್ – ಚೆನ್ನೈ ಭದ್ರಕೋಟೆ ಛಿದ್ರ ಮಾಡಲು ಆರ್‌ಸಿಬಿ ಪ್ಲ್ಯಾನ್