ಬೆಂಗಳೂರು: ಸೆಪ್ಟೆಂಬರ್ 17 ರಂದು ರಾಜ್ಯದಲ್ಲಿ ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಲಸಿಕೆ ಹಾಕಬೇಕು ಎಂದು ನಿರ್ಧರಿಸಲಾಗಿದೆ. ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
Advertisement
ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮ ಚುರುಕಾಗಿ ಸಾಗಿದ್ದು, ಉತ್ತರ ಪ್ರದೇಶದ ನಂತರ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು 1.10 ಕೋಟಿ ಲಸಿಕೆ ನೀಡಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಬೇಕು ಎಂಬ ಚಿಂತನೆ ಇದೆ ಎಂದು ತಿಳಿಸಿದರು.
Advertisement
Advertisement
ವಾರದಲ್ಲಿ ಬುಧವಾರ 15 ಲಕ್ಷ ಲಸಿಕೆ ಹಾಕುವ ಗುರಿ ಇದೆ. ದಿನಕ್ಕೆ 5 ಲಕ್ಷ ಲಸಿಕೆಯ ಗುರಿ ಹೊಂದಲಾಗಿದೆ. ಬೃಹತ್ ಲಸಿಕೆ ಕಾರ್ಯಕ್ರಮದಂದು ಕೇಂದ್ರ ಸರ್ಕಾರ ಒಂದೇ ದಿನ 2 ರಿಂದ 3 ಕೋಟಿ ಲಸಿಕೆ ನೀಡುವ ಉದ್ದೇಶವಿದ್ದು, ರಾಜ್ಯದಲ್ಲಿ 30 ಲಕ್ಷ ಲಸಿಕೆ ಹಾಕುವ ಗುರಿ ಇದೆ. ಲಸಿಕೆ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ವಿಶೇಷ ಬೇಡಿಕೆ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರ ಒದಗಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
Advertisement
ಬಡತನ ರೇಖೆಗಿಂತ ಕೆಳಗಿರುವ ದುರ್ಬಲ ವರ್ಗದವರಿಗೆ ಹಾಗೂ ದುಡಿಯುವ ವರ್ಗಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ನಗರ ಪ್ರದೇಶಗಳಲ್ಲಿ, ಬೆಂಗಳೂರಿನಲ್ಲಿ ಕೊಳಚೆ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ಸೂಚಿಸಿದರು. ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳ ಸಹಯೋಗ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಸೆಪ್ಟೆಂಬರ್ 17, ಶುಕ್ರವಾರದಂದು ಬೃಹತ್ ಪ್ರಮಾಣದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರ ಪೂರ್ವಸಿದ್ಧತೆಗಾಗಿ ಮುಖ್ಯಮಂತ್ರಿ ಶ್ರೀ @BSBommai ಅವರ ನೇತೃತ್ವದಲ್ಲಿ ಇಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಯಿತು. pic.twitter.com/wUPuscKkgQ
— Dr Sudhakar K (@mla_sudhakar) September 14, 2021
ಜಿಲ್ಲೆಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ, ಸೂಕ್ತ ಸಂಖ್ಯೆಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲು ತಿಳಿಸಿದರು. ಮುಂಚಿತವಾಗಿಯೇ ಲಸಿಕೆ ದಾಸ್ತಾನು ಪಡೆದು, ಲಸಿಕಾ ಕೇಂದ್ರಗಳಿಗೆ ತಲುಪಿಸಿ, ವಿಶೇಷ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.
ಕಲಬರುಗಿಯಲ್ಲಿ ಸಿಎಂ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬೃಹತ್ ಲಸಿಕೆ ಕಾರ್ಯಕ್ರಮಕ್ಕೆ ಕಲಬುರಗಿಯಲ್ಲಿ ಚಾಲನೆ ನೀಡಲಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಲಸಿಕೆ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಸರಾಸರಿ ಶೇ.71 ಜನರಿಗೆ ಮೊದಲ ಡೋಸ್ ಹಾಕಲಾಗಿದೆ. ರಾಜ್ಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಇತರ ಜಿಲ್ಲೆಗಳಲ್ಲಿಯೂ ರಾಜ್ಯದ ಸರಾಸರಿ ಪ್ರಮಾಣದ ಸಾಧನೆ ಮಾಡುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಭಿವೃದ್ಧಿ ಆಯುಕ್ತರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತಿತರರು ಭಾಗವಹಿಸಿದ್ದರು.