– ದೆಹಲಿಯಿಂದ ಮುಂಬೈ, ಬೆಂಗಳೂರಿಗೆ ಪ್ರಯಾಣ
– ಬೆಂಗಳೂರಿನಲ್ಲಿ ಮಂಗಳೂರು ಪೊಲೀಸರ ಕಾರ್ಯಾಚರಣೆ
ಮಂಗಳೂರು: ರಾಜ್ಯದ ಅತೀ ದೊಡ್ಡ ಡ್ರಗ್ಸ್ (Drugs) ಜಾಲವನ್ನು ಭೇದಿಸಿ ಇಬ್ಬರು ವಿದೇಶಿ ಮಹಿಳೆಯರನ್ನು ಮಂಗಳೂರು ಪೊಲೀಸರು (Mangaluru Police) ಬಂಧಿಸಿದ್ದಾರೆ. ಬಂಧಿತ ಇಬ್ಬರು ಮಹಿಳೆಯರು ಕಳೆದ ಒಂದು ವರ್ಷದಲ್ಲಿ ದೆಹಲಿ ವಿಮಾನ ನಿಲ್ದಾಣದ (Delhi Aiprport) ಮೂಲಕ ಬೆಂಗಳೂರು ಹಾಗೂ ಮುಂಬೈ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 59 ಬಾರಿ ಡ್ರಗ್ಸ್ ಸಮೇತ ಬಂದಿದ್ದಾರೆ. ಆದರೂ ಮೂರು ವಿಮಾನ ನಿಲ್ದಾಣದಲ್ಲಿ ಇವರು ಸಿಕ್ಕಿಬೀಳಿಲ್ಲ ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ ಎದ್ದಿದೆ.
ಮಂಗಳೂರು ಸಿಸಿಬಿ ಪೊಲೀಸರು (CCB Police) ರಾಜ್ಯದ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ಭೇದಿಸಿ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿ ಅವರಿಂದ ಬರೋಬ್ಬರಿ 75 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಬರುತ್ತಿದ್ದ ಡ್ರಗ್ಸ್ ಬುಡವನ್ನೇ ಅಲುಗಾಡಿಸಿದ್ದಾರೆ.
ದೇಶದೆಲ್ಲೆಡೆ ಡ್ರಗ್ಸ್ ಸಾಗಾಟ ಮಾಡುವ ಈ ಇಬ್ಬರು ಮಹಿಳಾ ಡ್ರಗ್ ಪೆಡ್ಲರ್‌ಗಳು ದೆಹಲಿ ವಿಮಾನ ನಿಲ್ದಾಣದಿಂದ ದೇಶದ ಇತರೆಡೆ ವಿಮಾನದಲ್ಲೇ ಡ್ರಗ್ಸ್ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಮಂಗಳೂರು ಸಿಸಿಬಿ ಪೊಲೀಸರು ಮಾರ್ಚ್ 14ರ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು.
ರಾತ್ರಿ 12:30ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಎರಡು ಟ್ರಾಲಿಗಳ ಮೂಲಕ ಹೊರ ಬಂದ ದಕ್ಷಿಣ ಆಫ್ರಿಕಾ ಪ್ರಜೆಗಳಾದ 31 ವರ್ಷದ ಬಂಬಾ ಫಾಂಟಾ ಹಾಗೂ 30 ವರ್ಷದ ಅಬಿಗಾಲ್ ಅಡೋನಿಸ್ ಪ್ರತ್ಯೇಕ ಎರಡು ಕಾರುಗಳ ಮೂಲಕ ಹೊರಡುತ್ತಾರೆ. ಇಬ್ಬರಲ್ಲೂ ಒಂದೊಂದು ಟ್ರಾಲಿ ಬ್ಯಾಗ್ ಗಳಿದ್ದು ವಿಮಾನ ನಿಲ್ದಾಣಗಳಿಂದ ಎಲೆಕ್ಟ್ರಾನಿಕ್ ಸಿಟಿಯತ್ತ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಂಗಳೂರು ಸಿಸಿಬಿ ಪೊಲೀಸರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರಲ್ಲಿದ್ದ ಎರಡು ಟ್ರಾಲಿ ಬ್ಯಾಗ್‌ನಲ್ಲಿ ಒಟ್ಟು 75 ಕೋಟಿ ಮೌಲ್ಯದ 37.878 ಕೆಜಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದ್ದು ಎಲ್ಲವನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ ರಾಮ ಜನ್ಮಭೂಮಿ ಟ್ರಸ್ಟ್‌ನಿಂದ 400 ಕೋಟಿ ರೂ. ತೆರಿಗೆ ಪಾವತಿ!
ಮಂಗಳೂರು ಪೊಲೀಸರು ಬೆಂಗಳೂರಿಗೆ ಹೋಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರ ಬಂದ ಈ ಡ್ರಗ್ ಪೆಡ್ಲರ್‌ಗಳನ್ನು ಹಿಡಿದ್ದಾರೆ. ಆದರೆ ಅವರು ವಿಮಾನ ನಿಲ್ದಾಣದಿಂದ ಡ್ರಗ್ಸ್ ಸಮೇತ ಹೊರ ಬಂದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ.
ಈ ಇಬ್ಬರು ಮಹಿಳೆಯರು ಇದೇ ಮೊದಲ ಬಾರಿಗೆ ಈ ರೀತಿ ವಿಮಾನದಲ್ಲಿ ಡ್ರಗ್ಸ್ ಸಾಗಾಟ ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 59 ಬಾರಿ ವಿಮಾನದಲ್ಲೇ ಈ ಡ್ರಗ್ಸ್ ಸಾಗಾಟ ಮಾಡಿದ್ದಾರೆ. ದೆಹಲಿಯಿಂದ 37 ಬಾರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಾಗೂ ದೆಹಲಿಯಿಂದ 22 ಬಾರಿ ಮುಂಬೈ ವಿಮಾನ ನಿಲ್ದಾಣ ಡ್ರಗ್ಸ್ ಸಾಗಿಸಿದ್ದಾರೆ. ಪ್ರತೀ ಬಾರಿಯೂ ದೆಹಲಿಯಿಂದ ಲೇಟ್ ನೈಟ್ ಫ್ಲೈಟ್ ಗಳನ್ನೇ ಬುಕ್ ಮಾಡಿಕೊಂಡು ಬರುತ್ತಿದ್ದ ಈ ಇಬ್ಬರು ಮಹಿಳೆಯರು ಅದ್ಯಾವ ರೀತಿ ತಪಾಸಣೆಗೆ ಒಳಗಾಗದೇ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬೀಳದೇ ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಾರೆ ಎನ್ನುವುದೇ ಅನುಮಾನ ಹುಟ್ಟಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ತಪಾಸಣೆ ನಡೆಸಿ ಬಳಿಕ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿಯೇ ಪ್ರತಿ ಪ್ರಯಾಣಿಕರನ್ನು ಒಳಗೆ ಹಾಗೂ ಹೊರಗೆ ಬಿಡಲಾಗುತ್ತದೆ. ಎಲ್ಲವನ್ನೂ ಬಹಳ ಕಟ್ಟು ನಿಟ್ಟಾಗಿ ತಪಾಸಣೆ ಮಾಡುವ ಭದ್ರತಾ ಸಿಬ್ಬಂದಿಗಳು ಈ ಡ್ರಗ್ ಪೆಡ್ಲರ್ ಗಳನ್ನ ಇಷ್ಟೊಂದು ಬಾರಿ ಸಲೀಸಾಗಿ ಹೇಗೆ ಬಿಟ್ಟು ಕಳಿಸಿದ್ದಾರೆ ಎನ್ನುವುದು ಅನುಮಾನದ ವಿಚಾರ.
ಒಟ್ಟಿನಲ್ಲಿ ಮಂಗಳೂರು ಪೊಲೀಸರ ಈ ಕಾರ್ಯಾಚರಣೆಯಿಂದಾಗಿ ರಾಜ್ಯ ಹಾಗೂ ದೇಶಕ್ಕೆ ಸಾಗಾಟ ಆಗುತ್ತಿದ್ದ ದೊಡ್ಡ ಡ್ರಗ್ಸ್ ಜಾಲ ಪತ್ತೆಯಾಗಿದೆ. ಮಂಗಳೂರು ಪೊಲೀಸರ ಈ ಬೃಹತ್ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ಮುಖಂಡರುಗಳು ಸೇರಿ ರಾಜ್ಯಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇಷ್ಟಕ್ಕೇ ಸುಮ್ಮನಾಗದ ಮಂಗಳೂರು ಪೊಲೀಸರು ಈ ಜಾಲದಲ್ಲಿ ಇರೋ ಇನ್ನಷ್ಟು ಪೆಡ್ಲರ್ ಗಳ ಪತ್ತೆಗೆ ಬಲೆ ಬೀಸಿದ್ದಾರೆ.