ನವದೆಹಲಿ: ಅನರ್ಹತೆ ಭೀತಿಯಿಂದ ಸದ್ಯಕ್ಕೆ ಅತೃಪ್ತ ಶಾಸಕರು ಪಾರಾಗಿದ್ದು ಮಂಗಳವಾರದವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸ್ಪೀಕರ್ ಅವರಿಗೆ ಆದೇಶ ನೀಡಿದೆ.
ಮಧ್ಯಾಹ್ನ 12 ಗಂಟೆಯಿಂದ ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಂಜನ್ ಗೋಗಯ್ ಅವರಿದ್ದ ತ್ರಿಸದಸ್ಯ ಪೀಠ ಶಾಸಕರ ಅನರ್ಹತೆ ಕೈಗೊಳ್ಳುವಂತಿಲ್ಲ ಮತ್ತು ರಾಜೀನಾಮೆಯನ್ನು ಅಂಗೀಕಾರಿಸುವಂತಿಲ್ಲ ಎಂದು ಹೇಳಿ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿತು.
Advertisement
Advertisement
ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹ್ಟಗಿ, ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಸಿಎಂ ಪರವಾಗಿ ರಾಜೀವ್ ಧವನ್ ವಾದ ಮಂಡಿಸಿದರು.
Advertisement
ಆರಂಭದಲ್ಲಿ ಮುಕುಲ್ ರೋಹ್ಟಗಿ ವಾದ ಮಂಡಿಸಿ, ಸ್ಪೀಕರ್ ಉದ್ದೇಶ ಪೂರ್ವಕವಾಗಿ ರಾಜೀನಾಮೆ ಅಂಗೀಕರಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ರಾಜೀನಾಮೆ ಅಂಗೀಕರಿಸಲು 10 ಸೆಕೆಂಡ್ ಸಾಕು. ಈ ಮೂಲಕ ಸ್ಪೀಕರ್ ಎರಡು ಕುದುರೆಯ ಮೂಲಕ ಹೋಗಲು ಮುಂದಾಗಿದ್ದಾರೆ. ಶಾಸಕರು ಸ್ವಯಂ ಪ್ರೇರಣೆಯಿಂದ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದರೂ ವಿಳಂಬ ಮಾಡುತ್ತಿದ್ದಾರೆ. ಶಾಸಕರನ್ನು ಅನರ್ಹತೆಗೊಳಿಸಲೆಂದೇ ವಿಪ್ ಜಾರಿ ಮಾಡಿದ್ದಾರೆ. ಹೀಗಾಗಿ ಕೂಡಲೇ ಸ್ಪೀಕರ್ ಅವರಿಗೆ ರಾಜೀನಾಮೆ ಅಂಗೀಕರಿಸುವಂತೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
Advertisement
ಅಭಿಷೇಕ್ ಮನು ಸಿಂಘ್ವಿ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸ್ಪೀಕರ್ ಅವರಿಗೆ ಆದೇಶ ನೀಡಲು ನ್ಯಾಯಾಲಯಕ್ಕೆ ಅಧಿಕಾರ ಇಲ್ಲ. ಸ್ಪೀಕರ್ ಈಗಾಗಲೇ ರಾಜೀನಾಮೆ ಸ್ವೀಕರಿಸಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಕಾರಣ ಬೇಕು. ಈಗಾಗಲೇ ಕೆಲ ಶಾಸಕರಿಗೆ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದಾರೆ ಎಂದು ವಾದಿಸಿದರು.
ಈ ಸಂದರ್ಭಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ಸಭಾಧ್ಯಕ್ಷರಿಗೆ ಆದೇಶ ನೀಡಲು ಅಧಿಕಾರ ಇಲ್ಲ ಎಂದು ಹೇಳಲು ಆಗುವುದಿಲ್ಲ. ಈ ಹಿಂದೆ ಕೆಲವು ಪ್ರಕರಣದಲ್ಲಿ ಆದೇಶ ನೀಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂ ಪರವಾಗಿ ವಾದ ಮಂಡಿಸಿದ ರಾಜೀವ್ ಧವನ್, ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಸ್ಪೀಕರ್ ಅವರಿಗೆ ಮಾತ್ರ ಅಧಿಕಾರ ಇದೆ ಹೊರತು ಬೇರೆ ಯಾರಿಗೂ ಇಲ್ಲ. ಹರ್ಯಾಣ ಪ್ರಕರಣದಲ್ಲಿ ಸ್ಪೀಕರ್ ಅವರಿಗೆ ಹೈಕೋರ್ಟ್ 4 ತಿಂಗಳು ಅವಧಿ ನೀಡಿದೆ. ರಾಜೀನಾಮೆ ನೀಡಿದ ಶಾಸಕರ ಪೈಕಿ ಒಬ್ಬರ ಮೇಲೆ ಭ್ರಷ್ಟಾಚಾರ ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ ಎಂದು ವಾದಿಸಿದರು.
ಈ ವೇಳೆ ರೋಹ್ಟಗಿ ವಾದಿಸಿ, 8 ಶಾಸಕರು ರಾಜೀನಾಮೆ ನೀಡಿದ ಬಳಿಕ ಅನರ್ಹತೆಯ ಪ್ರಕ್ರಿಯೆ ಆರಂಭಗೊಂಡಿದೆ. ಹೀಗಾಗಿ ಪ್ರತಿವಾದಿಗಳ ಮನವಿಯನ್ನು ಪುರಸ್ಕರಿಸಬಾರದು ಎಂದು ಮನವಿ ಮಾಡಿಕೊಂಡರು.
ಎರಡು ಕಡೆಯ ವಾದವನ್ನು ಅಲಿಸಿದ ನ್ಯಾಯಾಲಯ ಶಾಸಕರ ಅನರ್ಹತೆ ಬಗ್ಗೆ ಉಲ್ಲೇಖಿಸಲಾಗಿರುವ ಸಂವಿಧಾನದ 190 ವಿಧಿ ಮತ್ತು ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಇರುವ 361ನೇ ವಿಧಿಯ ಬಗ್ಗೆ ಇಲ್ಲಿ ಹಲವು ಪ್ರಶ್ನೆಗಳು ಎದ್ದಿದೆ. ಇದರ ಜೊತೆಯಲ್ಲಿ ರಾಜೀನಾಮೆ ವಿಚಾರದ ಬಗ್ಗೆ ಸ್ಪೀಕರ್ ಅವರಿಗೆ ಆದೇಶ ನೀಡಲು ನ್ಯಾಯಾಲಯಕ್ಕೆ ಅಧಿಕಾರ ಇದೆಯೋ ಎನ್ನುವುದರ ಬಗ್ಗೆ ಮತ್ತೊಂದು ಪ್ರಶ್ನೆ ಎದ್ದಿದೆ. ಹೀಗಾಗಿ ಮಂಗಳವಾರದವರೆಗೆ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.