ಬೆಳಗಾವಿ: ಮಗನ ಶವವನ್ನು ಅಪ್ಪನೇ ಹಳ್ಳದಿಂದ ಹೊರತೆಗೆದ ಮನಕಲಕುವ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಸಂಗಮೇಶ ಬಸಪ್ಪ ಹುಂಬಿ(22) ಮೃತ ಯುವಕನಾಗಿದ್ದು, ಈತ ನೀರಿನಲ್ಲಿ ಕೊಚ್ಚಿ ಹೋಗಿದ್ದನು. ಇಂದು ಸಂಗಮೇಶ ಧರಿಸಿದ್ದ ಬಟ್ಟೆಯನ್ನು ಗುರುತಿಸಿ ಆತನ ತಂದೆ ಶವವನ್ನು ಹಳ್ಳದಿಂದ ಮೇಲಕ್ಕೆತ್ತಿದ್ದಾರೆ.
ಆಗಿದ್ದೇನು?
15 ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳವಡಿ ಗ್ರಾಮದ ಬಳಿಯ ಸಂಗೊಳ್ಳಿ ಹಳ್ಳ ತುಂಬಿ ಹರಿಯುತ್ತಿತ್ತು. ಕಳೆದ ಭಾನುವಾರ ಸಂಗಮೇಶ ತಮ್ಮ ಹೊಲಕ್ಕೆ ಮೇವು ತರಲು ಹೋದ ಸಂದರ್ಭದಲ್ಲಿ ಹಳ್ಳ ದಾಟುತ್ತಿದ್ದವನು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದನು. ಆದರೆ ಯುವಕ ನಾಪತ್ತೆಯಾಗಿದ್ದಾನೆಂದು ಹೇಳಿ ಆತನ ಸಂಬಂಧಿಕರು ದೊಡವಾಡ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಯುವಕ ಹಳ್ಳದಲ್ಲಿ ಸಿಲುಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಈ ವೇಳೆ ಕೊಚ್ಚಿಕೊಂಡು ಹೋಗಿದ್ದನ್ನು ನೀವೇನು ನೋಡಿದ್ದೀರಾ ಎಂದು ಬೇಜಾವಾಬ್ದಾರಿ ಹೇಳಿಕೆ ನೀಡಿದ ದೂರುದಾರರನ್ನು ಮರಳಿ ಕಳಿಸಿದ ದೊಡವಾಡ ಠಾಣೆ ಪೊಲೀಸರ ವಿರುದ್ಧ ಮಲ್ಲಮ್ಮನ ಬೆಳವಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನದ ವೇಳೆ ಹಳ್ಳದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.