ಬೆಂಗಳೂರು: ನಮ್ಮ ನೆರವಿಗೆ ಬರುತ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದ ಎರಡೂ ಬಣದವರ ನಿರೀಕ್ಷೆ ಹುಸಿಯಾಗಿದೆ. ನನಗೆ ನೀವೂ ಬೇಕು, ಅವರೂ ಬೇಕು. ಹೀಗಾಗಿ ನಾನು ಯಾರ ಪರವೂ ಪ್ರಚಾರಕ್ಕೆ ಬರಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಹೌದು. ಮಂಡ್ಯ ಅಖಾಡದ ಲೇಟೆಸ್ಟ್ ಬೆಳವಣಿಗೆಯಾಗಿದ್ದು, ಕೆ.ಆರ್. ಪೇಟೆ ಅಖಾಡದಲ್ಲಿ ಸಂಸದೆ ಸುಮಲತಾ ಸೈಲೆಂಟಾಗಿರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಸುಮಲತಾ ಅವರು ತನ್ನ ಬೆಂಬಲ ನಿರೀಕ್ಷಿಸಿದವರಿಗೆ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಬಣದವರು ತಮ್ಮ ಪರವಾಗಿ ಪ್ರಚಾರಕ್ಕೆ ಬರುವಂತೆ ಸುಮಲತಾರ ಮೇಲೆ ಒತ್ತಡ ಹೇರತೊಡಗಿದ್ರು. ಸುಮಲತಾ ಅವರು ಮಂಡ್ಯದ ಅಖಾಡದಿಂದ ಸ್ಪರ್ಧೆ ಮಾಡಿದಾಗ ಬಿಜೆಪಿ ಬಾಹ್ಯ ಬೆಂಬಲ ಘೋಷಣೆ ಮಾಡಿತ್ತು. ಕಾಂಗ್ರೆಸ್ಸಿನ ಚಲುವರಾಯ ಸ್ವಾಮಿ ಮತ್ತು ಟೀಮ್ ಪರವಾಗಿ ಕೆಲಸ ಮಾಡಿದ್ದರು. ಅಸಹಜವಾಗಿಯೇ ಕೆ.ಆರ್.ಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ನಾನು ನಿಮ್ಮನ್ನ ಬೆಂಬಲಿಸಿದ್ದೆ. ಉಪ ಚುನಾವಣೆಯಲ್ಲಿ ನೀವು ನಮ್ಮನ್ನು ಬೆಂಬಲಿಸಿ ಎಂದು ಒತ್ತಡ ಹೇರತೊಡಗಿದ್ದರು. ಇನ್ನೊಂದೆಡೆ ಲೋಕಸಭಾ ಚುನಾವಣೆಯಲ್ಲಿ ಬಾಹ್ಯ ಬೆಂಬಲ ಘೋಷಿಸಿದ್ದ ಬಿಜೆಪಿ ಉಪ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವಂತೆ ಒತ್ತಡ ಹೇರತೊಡಗಿತ್ತು. ಹೀಗಾಗಿ ಧರ್ಮ ಸಂಕಟಕ್ಕೆ ಸಿಲುಕಿದ್ದ ಸಂಸದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು.
ಈಗ ಎರಡು ಬಣದವರಿಗೂ ಸ್ಪಷ್ಟವಾಗಿ ಸಂಸದೆ ತಿಳಿಸಿದ್ದಾರೆ. ಯಾವ ಕಾರಣಕ್ಕೂ ಯಾರ ಪರವಾಗಿಯೂ ಪ್ರಚಾರಕ್ಕೆ ಬರಲ್ಲ ಎಂದಿದ್ದಾರೆ. ಈ ಮೂಲಕ ಸಂಸದೆ ಸುಮಲತಾರನ್ನು ಕರೆತಂದು ತಮ್ಮ ಪರವಾಗಿ ಪ್ರಚಾರ ಮಾಡಿಸಿ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದ ಕೆ.ಆರ್ ಪೇಟೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಈಗ ನಿರಾಸೆ ಅನುಭವಿಸುವಂತಾಗಿದೆ ಎನ್ನಲಾಗಿದೆ.