ಬೆಂಗಳೂರು: ತುಮಕೂರಿನ ತಿಪಟೂರಿನಲ್ಲಿ ಎನ್‍ಎಸ್‍ಯುಐ ಕಾರ್ಯಕರ್ತರ ಬಂಧನ ಖಂಡಿಸಿ ಒಂದು ಕಡೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಯೂತ್ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನಲ್ಲಿಂದು ನಡೆದ ಯೂತ್ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಫುಲ್ ಹೈಡ್ರಾಮಾನೇ ನಡೆಯಿತು.
ತಿಪಟೂರಿನಲ್ಲಿ ಸಚಿವ ಬಿ.ಸಿ. ನಾಗೇಶ್ ನಿವಾಸದ ಆವರಣಕ್ಕೇ ನುಗ್ಗಿ ಪ್ರತಿಭಟಿಸಿದ ಎನ್‍ಎಸ್‍ಯುಐ ಕಾರ್ಯಕರ್ತರ ಬಂಧನ ಖಂಡಿಸಿ ಇಂದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಬೀದಿಗಿಳಿದಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಮತ್ತು ರಾಜ್ಯಾಧ್ಯಕ್ಷ ನಳಪಾಡ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಲಾಯಿತು. ಆರ್‍ಎಸ್‍ಎಸ್ ಸಮವಸ್ತ್ರ ಸುಟ್ಟಿದ್ದಕ್ಕೆ ಜೈಲಿಗೆ ಹಾಕಿದ್ದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಇಬ್ಬರೂ ಕಿಡಿಕಾರಿದರು. ಆರ್‌ಎಸ್‌ಎಸ್ ಸಮವಸ್ತ್ರ ತೊಟ್ಟ ಪ್ರತಿಕೃತಿ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪರಿಷ್ಕೃತ ಪಠ್ಯ ರದ್ದು ಮಾಡಿ, ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸಬೇಕು – ಸಿದ್ದರಾಮಯ್ಯ ಆಗ್ರಹ
ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮೊಹಮದ್ ನಳಪಾಡ್ ಬಸ್‍ನ ಕಿಟಕಿಯಿಂದ ಜಿಗಿಯುವ ಮೂಲಕ ಹೈಡ್ರಾಮಾ ಸೃಷ್ಟಿಸಿದರು. ಪೊಲೀಸರ ಬಂಧನ ಖಂಡಿಸಿ ಬಸ್‍ನಿಂದ ಜಿಗಿದ ನಳಪಾಡ್ ರಸ್ತೆ ಮಧ್ಯೆಯೇ ಕೂತು ಧಿಕ್ಕಾರ ಕೂಗಲಾರಂಭಿಸಿದರು. ಪೊಲೀಸರು ಮತ್ತೊಮ್ಮೆ ಬಲವಂತವಾಗಿ ನಳಪಾಡ್‍ನನ್ನು ಬಸ್‍ನೊಳಗೆ ತಳ್ಳಿ ಕರೆದೊಯ್ದರು.
ಪ್ರತಿಭಟನೆಯ ಅಂತ್ಯದಲ್ಲಿ ಅರ್ಧ ನಾಡಗೀತೆ ಹಾಡುವ ಮೂಲಕ ನಾಡಗೀತೆಗೆ ಅವಮಾನ ಮಾಡಲಾಯಿತು. ಒಟ್ಟಿನಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಾಮಕಾವಸ್ತೆಗೆ ಮಾಡಿದಂತಿತ್ತು. ಇದನ್ನೂ ಓದಿ: ಬೀದರ್ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್