BelgaumDistrictsKarnatakaLatestLeading NewsMain Post

ಕುಂದಾನಗರಿಯ ಸಮ ವಾತಾವರಣದಲ್ಲಿ ಅಧಿವೇಶನಕ್ಕೆ ಶುಭಾರಂಭ – ಮಂಗಳವಾರದಿಂದ ಸಮರಕಲೆಯ ಅಸಲಿ ಆಟ

– ರವೀಶ್ ಹೆಚ್.ಎಸ್
ಬೆಳಗಾವಿ: ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಾತ್ರೆಯಿಂದ ಕಳೆಗಟ್ಟುತ್ತಿದ್ದ ಕುಂದಾನಗರಿಯಲ್ಲೀಗ ಮೂರು ವರ್ಷಕ್ಕೊಮ್ಮೆ ಬಂದಿರುವ ಜಾತ್ರೆಯಲ್ಲೂ ಅದೇ ಕಳೆ. ಆದರೆ ಅಬ್ಬರ, ಹಾರಾಟ ಮಾತ್ರ ತುಸು ಕುಗ್ಗಿದೆ. ಸಮಗಾಳಿಗೆ ಸಮ ಎಂಬಂತಹ ಬಿಸಿಲು…‌ ಸಮ ಬಿಸಿಲಿಗೆ ಸಮ ಶೀತ ಎಂಬ ವಾತಾವರಣದಲ್ಲಿ ಮೂರು ವರ್ಷದ ಬಳಿಕ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಮತಾಂತರದ ನಿಷೇಧ ಕಾಯ್ದೆಯ ಚರ್ಚೆಯ ಬೆಂಕಿಗೆ ಸಚಿವ ಸುನಿಲ್ ಕುಮಾರ್ ಲವ್ ಜಿಹಾದ್ ಎಂಬ ತುಪ್ಪವನ್ನು ಸುರಿಯುವ ಮೂಲಕ ಅಧಿವೇಶನದ ಕಾವಿಗೆ ಚಾಲನೆ ಕೊಟ್ಟಿದ್ದಾರೆ.‌

ವಿಧಾನಮಂಡಲದಲ್ಲಿ ಇವತ್ತು ಬಹುತೇಕ ಸಮಯ ಸಂತಾಪದ ಸೂಚಕಕ್ಕೆ ಮೀಸಲಾಗಿತ್ತು. ನಟ ಪುನೀತ್ ರಾಜ್‌ಕುಮಾರ್‌ ನಮ್ಮನ್ನಗಲಿ ಒಂದೂವರೆ ತಿಂಗಳಾಗ್ತಿದೆ. ಪುನೀತ್ ಅಪಾರ ಅಭಿಮಾನಿ ಬಳಗ ಇನ್ನೂ ಅರಗಿಸಿಕೊಳ್ಳಲು ಆಗ್ತಿಲ್ಲ‌. ಈ ನಡುವೆ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಪುನೀತ್ ಸ್ಮರಣೆ ನಡೆಯಿತು. ವಿಧಾನಸಭೆಯಲ್ಲಿ ಇವತ್ತು ಮಾಜಿ ರಾಜ್ಯಪಾಲ ರೋಸಯ್ಯ ಸಿಡಿಎಸ್ ಬಿಪಿನ್ ರಾವತ್, ನಟ ಪುನೀತ್, ಶಿವರಾಂ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ನಿರ್ಣಯ ಕೈಗೊಳ್ಳಲಾಯ್ತು.

ಪುನೀತ್ ರಾಜಕುಮಾರ್‌ಗೆ ಸ್ಪೀಕರ್ ಸಂತಾಪ ಸೂಚಿಸುವ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕುಳಿತಲ್ಲೇ ಗದ್ಗದಿತರಾದ್ರು. ಬಳಿಕ ಸಂತಾಪ ಸೂಚಿಸಿದ ಮಾತನಾಡಿದ ಸಿಎಂ ಪುನೀತ್ ರಾಜಕುಮಾರ್ ಗೆ ಈಗಾಗಲೇ ಮರಣೋತ್ತರವಾಗಿ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ, ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕವನ್ನ ಶೀಘ್ರ ಪ್ರಕಟ ಮಾಡುತ್ತೇವೆ ಅಂತೇಳಿದ್ರು. ಅಲ್ಲದೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ. ವಿರೋಧ ಪಕ್ಷದ ನಾಯಕರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಪತ್ರ ಬರೆದಿದ್ದರು.‌ ಈ ನಿಟ್ಟಿನಲ್ಲಿ ಸರ್ಕಾರ ಶಿಫಾರಸು ಮಾಡಲಿದೆ ಅಂತೇಳಿದ್ರು. ಇದನ್ನೂ ಓದಿ: ಬೆಳಗಾವಿಯಿಂದ ‘ಸುಶಾಸನ ಸಂಗಮ’ಕ್ಕೆ ವಾರಾಣಸಿಗೆ ಹೊರಟ ಸಿಎಂ ಬೊಮ್ಮಾಯಿ

 ಸಂತಾಪ ಸೂಚಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಅಪ್ಪು ಸ್ಮರಣೆ ಮಾಡಿದ್ರು. ರಾಜಕುಮಾರ್ ಅವರ ಗುಣಗಳು ನೀತ್ ಗೆ ಬಳುವಳಿಯಾಗಿ ಬಂದಿದ್ವು. ಬಹಳ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಜನಪ್ರಿಯರಾಗಿದ್ದರು. ಪುನೀತ್ ನನ್ನ ಮಾಮ ಅಂತಿದ್ದ. ರಾಜಕುಮಾರ್ ಸಿನಿಮಾ ನೋಡುವಂತೆ ಹೇಳಿದ್ರು. ನಾನು ಥಿಯೇಟರ್ ಗೆ ಹೋಗ್ತಿರಲಿಲ್ಲ, ಆದ್ರೆ ಮೈಸೂರಲ್ಲಿ ಪುನೀತ್ ರಾಜಕುಮಾರ್ ಗಾಗಿ ರಾಜಕುಮಾರ ಸಿನಿಮಾ ನೋಡಿದೆ ಅಂತಾ ನೆನಪುಗಳನ್ನ ಮೆಲಕು ಹಾಕಿದ್ರು.‌

ಈ ಸಂತಾಪ ಸೂಚನೆ ವೇಳೆಯಲ್ಲೇ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದ ತನಿಖೆಗೆ ಒತ್ತಾಯ ಕೇಳಿಬಂತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ದುರಂತದ ತನಿಖೆ ಆಗಬೇಕು ಅಂತಾ ಆಗ್ರಹಿಸಿದ್ರು. ಸಂತಾಪ ಸೂಚಿಸಿ ಮಾತನಾಡಿದ ಸಿದ್ದರಾಮಯ್ಯ ರಷ್ಯಾದ ಹೆಲಿಕಾಪ್ಟರ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿತ್ತು. ಅವರ ಜೊತೆಯಲ್ಲಿ ಪತ್ನಿ ಹಾಗೂ ಅನೇಕ ಸೈನಿಕರು ಕೂಡ ಸಾವನ್ನಪ್ಪಿದ್ದಾರೆ. ಅದು ರಷ್ಯಾದ ಹೆಲಿಕಾಪ್ಟರ್, ಕ್ರ್ಯಾಶ್ ಹೇಗೆ ಆಯ್ತು? ಏನಾಗಿತ್ತು ಅನ್ನೋದು ಗೊತ್ತಾಗಬೇಕು. ಇದರ ಹಿಂದೆ ಯಾರೋ ಇದ್ದಾರೆ ಅಂತಾ ನಾನು ಹೇಳಲ್ಲ, ನನಗೆ ಅನುಮಾನ ಇಲ್ಲ. ಆದ್ರೆ ಹೇಗೆ ಆಯ್ತು ಅನ್ನೋದು ತಿಳಿಯಬೇಕು, ಸಮಗ್ರ ತನಿಖೆ ಆಗಬೇಕು ಅಂತಾ ಒತ್ತಾಯಿಸಿದ್ರು.  ಇದನ್ನೂ ಓದಿ: ನಾಳೆ ಬೆಳಗಾವಿ ಬಂದ್‍ಗೆ MES ಕರೆ – ಬಂದ್‍ಗೆ ಅವಕಾಶ ಕೊಡಲ್ಲ ಎಂದ ಕರ್ನಾಟಕ ಪೊಲೀಸ್

ಇನ್ನು ಸಚಿವ ಈಶ್ವರಪ್ಪ ಸಂತಾಪ ಸೂಚಿಸಿ ಮಾತನಾಡಿ, ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದ ನಿಧನದ ಬಗ್ಗೆ ತನಿಖೆ ಆಗಬೇಕು. ಇಲ್ಲದಿದ್ದರೆ ಪ್ರಪಂಚದಲ್ಲಿ ಅಸಮಾಧಾನ ಹಾಗೆಯೇ ಉಳಿಯುತ್ತದೆ. ಸುಪ್ರೀಂ ಕೋರ್ಟ್ ನಿಗಾದಡಿ ತನಿಖೆ ನಡೆದರೆ ಸೂಕ್ತ ಅಂತೇಳಿದ್ರು. ಅಲ್ಲದೆ ಕೆಲವರು ಸಿಡಿಎಸ್ ನಿಧನದ ಬಗ್ಗೆ ವಿಕೃತ ಹೇಳಿಕೆ ಟ್ವೀಟ್ ಮಾಡಿದ್ದಾರೆ. ಇದನ್ನು ರಾಜ್ಯದ ಸಿಎಂ ಖಂಡನೆ ಮಾಡಿದ್ದಾರೆ. ಬಿಪಿನ್ ರಾವತ್ ಭಾರತದ ಬಾಹುಬಲಿ, ರಾವತ್ ಹೆಸರು ಕೇಳುತ್ತಿದ್ದಂತೆ ಶತ್ರುಗಳ ಎದೆ ನಡುಗುತ್ತಿತ್ತು. ಅವರ ಸಾವು ದೊಡ್ಡ ದುರಂತ ಅಂತೇಳಿದ್ರು.

ಇದೆಲ್ಲದರ ನಡುವೆ ಮಳೆ ಹಾನಿ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದು, ನಾಳೆ ಭಾಷಣ ಮುಂದುವರಿಸಲಿದ್ದಾರೆ.‌

Leave a Reply

Your email address will not be published.

Back to top button