ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾದ ಬಳಿಕ ಕೇಂದ್ರ ಸರ್ಕಾರ ಕಾವೇರಿ ಸ್ಕೀಂ ಕುರಿತ ತನ್ನ ಕರಡು ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಅಫಿಡವಿಟ್ ಅನ್ನು ಸಲ್ಲಿಸಿದೆ. ಕರಡಿನಲ್ಲಿ ಈ ಸ್ಕೀಂ ಕಾವೇರಿ ಪ್ರಾಧಿಕಾರವೋ, ಕಾವೇರಿ ಸಮಿತಿಯೊ ಅಥವಾ ಮಂಡಳಿಯೋ ಎಂಬುದನ್ನು ನೀವೇ ತೀರ್ಮಾನ ಮಾಡಿ ಎಂದು ಕೇಂದ್ರ ಸರ್ಕಾರ ನ್ಯಾಯಪೀಠದಲ್ಲಿ ಮನವಿ ಮಾಡಿಕೊಂಡಿದೆ.
Advertisement
ಕಾವೇರಿ ಸ್ಕೀಂ ರಚನೆ ಕುರಿತು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಸುಪ್ರೀಂ ತ್ರಿಸದಸ್ಯ ಪೀಠ ಕರಡು ಪ್ರತಿ ಸಲ್ಲಿಕೆ ಮಾಡುವಂತೆ ಗಡುವು ನೀಡಿತ್ತು. ಅಲ್ಲದೇ ಅಫಿಡವಿಟ್ ಸಲ್ಲಿಕೆ ವೇಳೆ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಕಾರ್ಯದರ್ಶಿ ಸ್ವತಃ ಹಾಜರಾಗುವಂತೆ ಸೂಚಿಸಿತ್ತು. ಸುಪ್ರೀಂ ಸೂಚನೆಯ ಅನ್ವಯ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಉಪೇಂದ್ರ ಕುಮಾರ್ ಸಿಂಗ್ ಇಂದು ಕರಡು ಅಫಿಡವಿಟ್ ಸಲ್ಲಿಸಿದ್ದಾರೆ. ಸದ್ಯ ಈ ಅಫಿಡವಿಟ್ ವಿಚಾರಣೆಗೆ ಪರಿಗಣಿಸಿ ಅಂತಿಮವಾಗಿ ಸುಪ್ರೀಂ ತನ್ನ ಆದೇಶವನ್ನು ಪ್ರಕಟಿಸಲಿದೆ.
Advertisement
Advertisement
ಕೇಂದ್ರ ಸರ್ಕಾರ ಕರಡು ಪ್ರತಿ ಸಲ್ಲಿಕೆ ವೇಳೆಯೂ ತಮಿಳುನಾಡು ತನ್ನ ವಾದವನ್ನು ಪುನರ್ ಉಚ್ಚರಿಸಿದ್ದು ಕಾವೇರಿ ಮಂಡಳಿ ರಚಿಸುವಂತೆ ಮನವಿ ಮಾಡಿದೆ. ಆದರೆ ತಮಿಳುನಾಡು ಮನವಿಯನ್ನು ಆಲಿಸಿದ ನ್ಯಾಯಪೀಠ ಕರಡು ಪರಿಶೀಲನೆ ಬಳಿಕ ತನ್ನ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿದೆ. ಮುಂದಿನ ವಿಚಾರಣೆ ಮೇ 16 ರಂದು ನಡೆಯಲಿದೆ.
Advertisement
ಹೇಗಿರಲಿದೆ ಸ್ಕೀಂ?
ಸದ್ಯ 14 ಪುಟಗಳ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಸುಪ್ರೀಂಗೆ ಸಲ್ಲಿಕೆ ಮಾಡಿದ್ದು, ಕೇಂದ್ರ ಸಲ್ಲಿಸಿರುವ ಕರಡು ಪ್ರತಿಯಲ್ಲಿ ಕಾವೇರಿ ಸ್ಕೀಂ ನಲ್ಲಿ ಐವರು ಶಾಶ್ವತ ಸದಸ್ಯರು ಮತ್ತು ನಾಲ್ವರು ತಾತ್ಕಾಲಿಕ ಸದಸ್ಯರನ್ನು ಹೊಂದಿರುತ್ತದೆ.
ಈ ಸ್ಕೀಂ ನಲ್ಲಿ ನಾಲ್ಕು ರಾಜ್ಯಗಳ ಸದಸ್ಯರು ಇರಲಿದ್ದು, ಇದರಲ್ಲಿ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಖಾಯಂ ಸದಸ್ಯರು ಅಧ್ಯಕ್ಷ (ಚೇರಮನ್) ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯಿಂದ ತಲಾ ಒಬ್ಬ ಚೀಫ್ ಎಂಜಿನಿಯರ್, ಹವಾಮಾನ ಇಲಾಖೆಯ ಜಂಟಿ ಆಯುಕ್ತ, ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್, ಕೇಂದ್ರ ಕೃಷಿ ಇಲಾಖೆಯ ಆಯುಕ್ತ, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.
ಕಾವೇರಿ ಪ್ರಾಧಿಕಾರದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದ್ದು, ರಾಜ್ಯದ ಚೀಫ್ ಎಂಜಿನಿಯರ್ ಶ್ರೇಣಿಯ ರಾಜ್ಯದ ಅಧಿಕಾರಿಗಳು ಸ್ಕೀಂನಲ್ಲಿ ಇರುವುದು ಕಡ್ಡಾಯವಾಗಿದೆ. ಕಾವೇರಿ ತೀರ್ಪನ್ನು ಯಾವುದೇ ರಾಜ್ಯ ಪಾಲಿಸದೆ ಇರುವುದು ಕಂಡು ಬಂದಲ್ಲಿ ಕೇಂದ್ರ ಸರ್ಕಾರಕ್ಕೆ ದೂರು ನೀಡಬಹುದಾಗಿದೆ. ನಂತರ ಕೇಂದ್ರ ತೆಗೆದುಕೊಳ್ಳುವ ತೀರ್ಮಾನ ಅಂತಿಮ ಆಗಿರಲಿದೆ.
ಸ್ಕೀಂ ಕಾರ್ಯಗಳು:
* ಪ್ರತಿನಿತ್ಯ ನೀರಿನ ಮಟ್ಟ ಹಾಗೂ ಒಳ ಮತ್ತು ಹೊರ ಹರಿವಿನ ಲೆಕ್ಕ ಇಡುವುದು.
* ಹೇಮಾವತಿ ಹಾರಂಗಿ, ಕೃಷ್ಣ ರಾಜಸಾಗರ, ಕಬಿನಿ, ಮೆಟ್ಟೂರು, ಭವಾನಿ ಸಾಗರ, ಅಮಾರವತಿ, ಭನಸೂರಸಾಗರ್ ಮೂಲಕ ಪ್ರಾಧಿಕಾರ ಸೂಚಿಸುವಷ್ಟು ನೀರು ಬಿಡುವುದು.
* ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 48 ಗಂಟೆ ಒಳಗೆ ಸಭೆ ಸೇರಿ ಚರ್ಚೆ ನಡೆಸಬೇಕು.
* ಸಭೆ ವೇಳೆ ಯಾವುದಾದರು ರಾಜ್ಯ ಗೈರು ಹಾಜರಾದರೆ ಮತ್ತೊಂದು ದಿನಾಂಕದಂದು ಸಭೆ ನಡೆಸಬಹುದು.
* ಮಾತುಕತೆ ತಡ ಆಗುವಂತಹ ಸಂದರ್ಭದಲ್ಲಿ ಬಹಮತ ಆಧರಿಸಿ ಪ್ರಾಧಿಕಾರ ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದು.
* ಸಭೆಯಲ್ಲಿ ಕನಿಷ್ಠ ಆರು ಮಂದಿ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು.
* ಅಧ್ಯಕ್ಷರು ಸೇರಿದಂತೆ ಕಾರ್ಯದರ್ಶಿ ಹಾಗೂ ಎಲ್ಲ ಸದಸ್ಯರಿಗೂ ವೋಟ್ ಮಾಡುವ ಹಕ್ಕಿದೆ.
* ಪ್ರಾಧಿಕಾರ ಅಧ್ಯಕ್ಷರಿಗೆ ನಿರ್ಣಾಯಕ ಮತ ಚಲಾಯಿಸುವ ಅಧಿಕಾರ.
* ನಿಯಮ ಪಾಲನೆ ವೇಳೆ ವ್ಯತಾಸ ಕಂಡು ಬಂದರೆ ಪ್ರಾಧಿಕಾರದ ಸದಸ್ಯರು ಎಲ್ಲ ಜಲಾಶಯಗಳ ನೀರಿನ ಮಟ್ಟ ಪರಿಶೀಲನೆ ನಡೆಸಬಹುದು. ಅಲ್ಲದೇ ವ್ಯತ್ಯಾಸ ಖಾತರಿ ಆದಲ್ಲಿ ಸಮಿತಿ ಎಲ್ಲ ಸದಸ್ಯರ ಗಮನಕ್ಕೆ ತರುವುದು.
* ಪ್ರತಿನಿತ್ಯ ಬಿಳಿಗುಂಡ್ಲು ಮೂಲಕ ಹರಿಯುವ ನೀರನ್ನು ಮಾಪನ ಮಾಡುವುದು.
* ಪ್ರತಿ ಜಲಾಶಯಗಳ ನೀರಿನ ಮಟ್ಟ ಪ್ರತಿ ತಿಂಗಳ ಪರಿಶೀಲನೆ ನಡೆಸಿ ನಿಗಾ ವಹಿಸುವುದು.
* ಪ್ರತಿವಾರ ಹವಾಮಾನ ಇಲಾಖೆ ಮೂಲಕ ಮಳೆ ಪ್ರಮಾಣ ಮಾಹಿತಿ ಪಡೆಯುವುದು ಹಾಗೂ ಪ್ರಾಧಿಕಾರದ ಗಮನಕ್ಕೆ ತರುವುದು.
* ರಾಜ್ಯದಲ್ಲಿ ನಿರ್ಮಾಣ ಮಾಡುವ ಕಾಮಗಾರಿಗಳ ಬಗ್ಗೆ ರಾಜ್ಯದ ಪ್ರತಿನಿಧಿ ಪ್ರಾಧಿಕಾರದ ಗಮನಕ್ಕೆ ತರುವುದು.
* ಮುಂಗಾರು, ಹಿಂಗಾರು ಸೇರಿದಂತೆ ವಾರ್ಷಿಕ ಮಳೆ ಪ್ರಮಾಣ ಕುರಿತು ಪ್ರಾಧಿಕಾರ ಅಫಿಡೆವಿಟ್ ಸಲ್ಲಿಸಬೇಕು.
* ಜೂನ್ ಮತ್ತು ಅಕ್ಟೋಬರ್ ಮಾನ್ಸೂನ್ ತಿಂಗಳಲ್ಲಿ ಪ್ರತಿ ಹತ್ತು ದಿನಕ್ಕೊಮ್ಮೆ ಸಭೆ ಸೇರಿ ಚರ್ಚೆ ನಡೆಸಬೇಕು.
* ಮಾನ್ಸೂನ್ ಬಳಿಕ ಎರಡು ವಾರಕ್ಕೊಮ್ಮೆ ಪ್ರಾಧಿಕಾರದ ಸಲಹೆ ಮೇರೆಗೆ ಸಭೆ ಏರ್ಪಡಿಸಬಹುದು.