ಬೆಂಗಳೂರು: ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅವಕಾಶಗಳು ಬಹಳ ಕಡಿಮೆ. ಇದಕ್ಕೆ ರಾಜಕೀಯ ಕ್ಷೇತ್ರವೂ ಹೊರತಾಗಿಲ್ಲ. ಕರ್ನಾಟಕ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ತುಂಬಾ ಕಡಿಮೆ. ಕಳೆದ (2018) ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರ ಪೈಕಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇತ್ತು. 2018ರಲ್ಲಿ 224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಲ್ಲಿ ಜಯದ ನಗೆ ಬೀರಿದ್ದು, ಕೇವಲ ಕೆಲವೇ ಮಂದಿ ಮಾತ್ರ. ಇಲ್ಲೇ ಅರ್ಥವಾಗುತ್ತೆ, ಕರ್ನಾಟಕ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸಿಗುವ ಪ್ರಾತಿನಿಧ್ಯ ಎಷ್ಟು ಎಂದು.
Advertisement
ಈಗ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕರ್ನಾಟಕ ಎದುರು ನೋಡುತ್ತಿದೆ. ಈ ಬಾರಿಯಾದರೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬಹುದೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಈ ಹೊತ್ತಿನಲ್ಲಿ, ಕಳೆದ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೇಗಿತ್ತು? ಎಷ್ಟು ಮಹಿಳೆಯರು ಸ್ಪರ್ಧೆ ಮಾಡಿದ್ದರು? ಗೆದ್ದವರು ಯಾರು ಎಂಬುದನ್ನು ತಿಳಿಯೋಣ. ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
Advertisement
Advertisement
2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಯಾರಿಗೂ ಬಹುಮತ ನೀಡಿರಲಿಲ್ಲ. ಬಿಜೆಪಿ 104 ಕ್ಷೇತ್ರಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇತ್ತ ಕಾಂಗ್ರೆಸ್ ಭಾಗಶಃ ಆಡಳಿತ ವಿರೋಧಿ ಅಲೆಯಲ್ಲಿ ಕೇವಲ 80 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿತ್ತು. ಇನ್ನು ಜೆಡಿಎಸ್ 37, ಬಿಸ್‍ಪಿ 1, ಕೆಪಿಜೆಪಿ 1, ಪಕ್ಷೇತರ 1 ಕ್ಷೇತ್ರದಲ್ಲಿ ಗೆದ್ದಿತ್ತು.
Advertisement
ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕೃತಿ ಸಚಿವೆಯಾಗಿದ್ದ ಉಮಾಶ್ರೀ ಅವರಿಗೆ 2018ರ ಚುನಾವಣೆಯಲ್ಲಿ ಸೋಲಾಗಿತ್ತು. ಗುಂಡ್ಲುಪೇಟೆ ವಿಧಾನಸಭೆಯ ಉಪಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದ ಮಾಜಿ ಸಚಿವ ಮಹದೇವ ಪ್ರಸಾದ್ ಪತ್ನಿ, ಸಚಿವೆಯಾಗಿದ್ದ ಗೀತಾ ಮೋಹನಕುಮಾರಿ ಅವರು ಸಹ ಸೋತಿದ್ರು. ಇನ್ನು ಸತತ ಸೋಲುಗಳಿಂದ ಕೆಂಗಟ್ಟಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆದ್ದು ಬೀಗಿದ್ದರು.
2018ರಲ್ಲಿ 224 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಒಟ್ಟು 219 ಮಹಿಳೆಯರು ಸ್ಪರ್ಧೆ ಮಾಡಿದ್ದರು. ಈ ಪೈಕಿ ಕೇವಲ ಏಳು ಜನರು ಮಾತ್ರ ವಿಧಾನಸಭೆ ಪ್ರವೇಶಿದ್ದಾರೆ. ಇದರಲ್ಲಿ 200 ಮಹಿಳಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ವಿಧಾನಸಭಾ ಒಟ್ಟು ಸ್ಥಾನಗಳ ಪೈಕಿ ಶೇ.3.2ರಷ್ಟು ಮಹಿಳೆಯರಿದ್ದರು.
ಗೆದ್ದವರು ಯಾರು?:
1. ಶಶಿಕಲಾ ಜೊಲ್ಲೆ: 2018 ರಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಶಿಕಲಾ ಜೊಲ್ಲೆ ಅವರು ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ್ ವಿರುದ್ಧ 8506 ಮತಗಳ ಅಂತರದಿಂದ ಗೆಲುವಿನ ಪತಾಕೆ ಹಾರಿಸಿದರು.
2. ಅಂಜಲಿ ನಿಂಬಾಳ್ಕರ್: ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್‍ನ ಅಂಜಲಿ ನಿಂಬಾಳ್ಕರ್ ಅವರು ಬಿಜೆಪಿಯ ವಿಠಲ್ ಹಲಗೇಕರ್ ವಿರುದ್ಧ ಸ್ಪರ್ಧಿಸಿ 5,133 ಮತಗಳ ಅಂತರದಿಂದ ಕಿರೀಟ ತನ್ನದಾಗಿಸಿಕೊಂಡರು.
3. ರೂಪಾಲಿ ನಾಯ್ಕ್: ಕಾರವಾರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೂಪಾಲಿ ನಾಯ್ಕ್ ಅವರು ಜೆಡಿಎಸ್‍ನ ಆನಂದ್ ಅಸ್ನೋಟಿಕರ್ ವಿರುದ್ಧ 14 ಸಾವಿರ ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು.
4. ಲಕ್ಷ್ಮಿ ಹೆಬ್ಬಾಳ್ಕರ್– ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಜೆಪಿ ಅಭ್ಯರ್ಥಿ ಸಂಜಯ್ ಪಾಟೀಲ್ ವಿರುದ್ಧ 51,724 ಮತಗಳ ಅಂತರದಿಂದ ಗೆಲುವು ಕಂಡರು.
5. ಕನೀಜ್ ಫಾತಿಮಾ- ಕಲಬುರಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‍ನ ಕನೀಜ್ ಫಾತಿಮಾ ಅವರು ಬಿಜೆಪಿಯ ಚಂದ್ರಕಾಂತ್ ಪಾಟೀಲ್ ವಿರುದ್ಧ ಸ್ಪರ್ಧಿಸಿ 5,940 ಮತಗಳ ಅಂತರದಿಂದ ಗೆಲುವು ಕಂಡರು.
6. ಕೆ.ಪೂರ್ಣಿಮಾ ಶ್ರೀನಿವಾಸ್– ಹಿರಿಯೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ. ಸುಧಾಕರ್ ವಿರುದ್ಧ 12,875 ಮತಗಳ ಅಂತರದಿಂದ ಗೆಲುವಿನ ಮಾಲೆಗೆ ಕೊರಳೊಡ್ಡಿದರು.
7. ಎಂ.ರೂಪಕಲಾ– ಕೆಜಿಎಫ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ರೂಪಕಲಾ ಎಂ ಅವರು ಬಿಜೆಪಿಯ ಅಶ್ವಿನಿ ಸಂಪಂಗಿ ವಿರುದ್ಧ ಸ್ಪರ್ಧಿಸಿ 40,827 ಮತಗಳ ಅಂತರದಿಂದ ಗೆಲುವು ಕಂಡರು. ಇದನ್ನೂ ಓದಿ: ಅತಂತ್ರ ಪ್ರಜಾ ತೀರ್ಪು; 2018ರ ವಿಧಾನಸಭಾ ಚುನಾವಣೆಯಲ್ಲೇನಾಗಿತ್ತು?
8. ಸೌಮ್ಯಾ ರೆಡ್ಡಿ– 2018ರ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಜಯನಗರದ ಬಿಜೆಪಿ ಅಭ್ಯರ್ಥಿ ನಿಧನರಾಗಿದ್ದರು. ಹಾಗಾಗಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸೌಮ್ಯರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಬಿ.ಎನ್ ಪ್ರಲ್ಹಾದ್ ಬಾಬು ಅವರನ್ನು 3,885 ಮತಗಳ ಅಂತರದಿಂದ ಸೋಲಿಸಿದರು.
9. ಅನಿತಾ ಕುಮಾರಸ್ವಾಮಿ: ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರು ಬಿಜೆಪಿಯ ಎಲ್ ಚಂದ್ರಶೇಖರ್ ವಿರುದ್ಧ 1,09,137 ಮತಗಳ ಅಂತರದಿಂದ ಗೆಲುವು ಕಂಡರು. ಇದಲ್ಲದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಾಮ ನಿರ್ದೇಶನಗೊಂಡಿದ್ದ ಆಂಗ್ಲೋ ಇಂಡಿಯನ್ ಪ್ರತಿನಿಧಿ ವಿನಿಷಾನೆರೋ ಪ್ರಸ್ತುತ ವಿಧಾನಸಭೆ ಶಾಸಕಿಯಾಗಿದ್ದಾರೆ.
ಉಪ ಚುನಾವಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ: ಕುಂದಗೋಳ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಸುಮಾವತಿ ಶಿವಳ್ಳಿ ಅವರು ಬಿಜೆಪಿಯ ಎಸ್‍ಐ ಚಿಕ್ಕನಗೌಡರನ್ನು 1,601 ಮತಗಳ ಅಂತರದಿಂದ ಸೋಲಿಸಿದರು. ಆರ್.ಆರ್.ನಗರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ.ಕೆ.ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಸ್ಪರ್ಧೆ ಮಾಡಿದ್ದರು. ಆದ್ರೆ ಬಿಜೆಪಿಯ ಮುನಿರತ್ನ ವಿರುದ್ಧ ಸೋಲಾಗಿತ್ತು.
ಇನ್ನು ಬಸವಕಲ್ಯಾಣಕ್ಕೆ ನಡೆದ ಉಪಚುನಾವಣೆಯಲ್ಲಿ ದಿ.ನಾರಾಯಣ್ ರಾವ್ ಅವರ ಪತ್ನಿ ಮಾಲಾ ನಾರಾಯಣ್ ರಾವ್ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋತಿದ್ದರು. ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಅಮ್ಮಜಮ್ಮಾ ಸ್ಪರ್ಧೆ ಮಾಡಿ, ಬಿಜೆಪಿಯ ಅಭ್ಯರ್ಥಿ ವಿರುದ್ಧ ಸೋತಿದ್ದರು.
ಸೋತವರು: ತೇರದಾಳ- ಉಮಾಶ್ರೀ (ಕಾಂಗ್ರೆಸ್), ಕುಮಟಾ- ಶಾರದ ಶೆಟ್ಟಿ (ಕಾಂಗ್ರೆಸ್), ಮೂಡಿಗೆರೆ- ಮೋಟಮ್ಮ (ಕಾಂಗ್ರೆಸ್), ಕೆಜಿಎಫ್- ಅಶ್ವಿನಿ ಸಂಪಂಗಿ (ಬಿಜೆಪಿ), ರಾಜಾಜಿನಗರ – ಜಿ. ಪದ್ಮಾವತಿ (ಕಾಂಗ್ರೆಸ್), ಪುತ್ತೂರು – ಶಕುಂತಳಾ ಶೆಟ್ಟಿ (ಕಾಂಗ್ರೆಸ್) ಸೇರಿದಂತೆ ಒಟ್ಟು 211 ಮಂದಿ ಮಹಿಳೆಯರು ಚುನಾವಣಾ ಅಖಾಡಕ್ಕಿಳಿದು ಸೋಲು ಕಂಡಿದ್ದಾರೆ.