ಬೆಂಗಳೂರು: ವಿಧಾನಸಭೆ ಕಲಾಪ ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಪ್ರತಿಷ್ಠೆಗೆ ಬಲಿಯಾಯಿತು. ನಿನ್ನೆ ವಿಧಾನಸಭೆ ಕಲಾಪದಲ್ಲಿ ಸಚಿವ ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಶುರುವಾದ ಜಟಾಪಟಿ ಇವತ್ತೂ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಕಲಾಪವನ್ನು ಮೂರು ಬಾರಿ ಮುಂದೂಡಿದರೂ ಕಲಹ ನಿಲ್ಲದೇ ಇಡೀ ದಿನ ವ್ಯರ್ಥವಾಯಿತು.
ಇವತ್ತು ಬೆಳಗ್ಗೆ ವಿಧಾನಸಭೆ ಕಲಾಪ ಆರಂಭ ಆಗುತ್ತಿದ್ದಂತೆಯೇ ಮತ್ತೆ ರಮೇಶ್ ಕುಮಾರ್ ಮತ್ತು ಸುಧಾಕರ್ ನಿಂದನೆ ವಿಷಯ ಪ್ರಸ್ತಾಪವಾಗಿ ಗದ್ದಲ ಸೃಷ್ಟಿಯಾಯಿತು. ರಮೇಶ್ ಕುಮಾರ್ ಅವರನ್ನು ಅಮಾನತು ಮಾಡುವಂತೆ ಸಚಿವ ಈಶ್ವರಪ್ಪ ಅವರು ಸ್ಪೀಕರ್ ಕಾಗೇರಿಗೆ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು. ಇತ್ತ ಕಾಂಗ್ರೆಸ್ ನಿಂದಲೂ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಆಗ್ರಹ ಮಂಡಿಸಿದರು. ಈ ವೇಳೆ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಸದನ ಸಾಕ್ಷಿಯಾಯ್ತು.
Advertisement
Advertisement
ಗದ್ದಲದ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎರಡು ಹಕ್ಕುಚ್ಯುತಿ ನೋಟಿಸ್ ಕೊಟ್ಟಿರುವ ಬಗ್ಗೆ ಸ್ಪೀಕರ್ ಕಾಗೇರಿಯವರು ಸದನದ ಗಮನಕ್ಕೆ ತಂದರು. ಈ ನೋಟಿಸ್ ಗಳ ಮೇಲಿನ ಚರ್ಚೆಗೆ ಪ್ರಶ್ನೋತ್ತರ ವೇಳೆಯ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಹೇಳಿದರು. ನಮ್ಮ ನೋಟಿಸ್ ಮೊದಲು ಚರ್ಚೆಯಾಗಬೇಕೆಂದು ಉಭಯ ಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ನಿಲ್ಲದೇ ಮುಂದುವರಿದಿತ್ತು. ಪರಿಣಾಮ ಸ್ಪೀಕರ್ ಸದನವನ್ನು 15 ನಿಮಿಷ ಮುಂದೂಡಿದರು.
Advertisement
Advertisement
ಮತ್ತೆ ಕಲಾಪ ಆರಭವಾಗಿದ್ದು ಒಂದು ತಾಸಿನ ನಂತರ. ಕಲಾಪ ಪುನರಾರಂಭವಾದರೂ ಮತ್ತೆ ಗದ್ದಲ ಮುಂದುವರಿಯಿತು. ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಮೇಲೆ ಪ್ರಸ್ತಾವ ಮಂಡಿಸಲು ಸಿದ್ದರಾಮಯ್ಯ ಮುಂದಾದಾಗ ಸಚಿವ ಸುಧಾಕರ್ ವಿರೋಧ ವ್ಯಕ್ತಪಡಿಸಿದರು. ಸಂವಿಧಾನದ ಮೇಲೆ ತಮ್ಮ ಚರ್ಚೆ ಇನ್ನೂ ಮುಗಿದಿಲ್ಲ. ಚರ್ಚೆ ಮುಗಿದ ಮೇಲೆ ಪ್ರಸ್ತಾವದ ಚರ್ಚೆಗೆ ಅವಕಾಶ ಕೊಡಿ ಎಂದು ಸುಧಾಕರ್ ಪಟ್ಟು ಹಿಡಿದರು. ಎರಡೂ ಕಡೆಯೂ ಪ್ರತಿಷ್ಠೆ ಮುಂದುವರೆದು ಕಲಾಪ ಗದ್ದಲದ ಗೂಡಾಯಿತು.
ಎರಡೂ ಕಡೆಯವರೂ ತಮ್ಮ ಪಟ್ಟು ಸಡಿಲಗೊಳಿಸಲಿಲ್ಲ. ಪರಿಣಾಮ ಸದನವನ್ನು ಮೂರು ಗಂಟೆಗೆ ಮುಂದೂಡಲಾಯ್ತು. ಮೂರು ಗಂಟೆ ಬಳಿಕ ಕಲಾಪ ಮತ್ತೆ ಸೇರಿದರೂ ಸದನದ ಸನ್ನಿವೇಶ ಬದಲಾಗಲಿಲ್ಲ. ಕಲಾಪದಲ್ಲಿ ಮತ್ತೆ ಕಲಹ, ಕೋಲಾಹಲ ಸೃಷ್ಟಿಯಾಯಿತು. ಕೊನೆಗೆ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು. ಆ ಮೂಲಕ ಇಡೀ ದಿನದ ಕಲಾಪ ಉಭಯ ಪಕ್ಷಗಳ ಪ್ರತಿಷ್ಠೆಗೆ ಬಲಿಯಾಯಿತು. ಈ ಮಧ್ಯೆ ಸ್ಪೀಕರ್ ಆಡಳಿತ ಪಕ್ಷದವರ ಜೊತೆ ಸಭೆ ನಡೆಸಿದರೂ ಸುಗಮ ಕಲಾಪ ಸಾಧ್ಯವಾಗಲಿಲ್ಲ.
ರಮೇಶ್ ಕುಮಾರ್ ಗೈರು: ಈ ಮಧ್ಯೆ ರಮೇಶ್ ಕುಮಾರ್ ಸದನಕ್ಕೆ ಗೈರಾಗಿದ್ದು ಎದ್ದು ಕಾಣುತ್ತಿತ್ತು. ರಮೇಶ್ ಕುಮಾರ್ ಅವರು ವಿಧಾನಸೌಧಕ್ಕೆ ಬಂದಿದ್ದರೂ ಇವತ್ತಿನ ಕಲಾಪಕ್ಕೆ ಬಾರದೇ ಮೊಗಸಾಲೆಯಲ್ಲೇ ಕೂತಿದ್ರು. ರಮೇಶ್ ಕುಮಾರ್ ಗೈರಿಗೆ ಕಲಾಪದೊಳಗೆ ಬಿಜೆಪಿ ಸದಸ್ಯರು ಧ್ವನಿ ಜೋರು ಮಾಡಿ ತೀವ್ರ ಟೀಕೆ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ರಮೇಶ್ ಕುಮಾರ್ ಪಲಾಯನವಾದಿ. ಹಾಗಾಗಿ ಇವತ್ತು ಅವರು ಸದನಕ್ಕೆ ಬಂದಿಲ್ಲ. ಎಲ್ಲಿ ಪಲಾಯನವಾದಿ ರಮೇಶ್ ಕುಮಾರ್ ಎಂದು ಬಿಜೆಪಿಯ ರೇಣುಕಾಚಾರ್ಯ ಮತ್ತಿತರ ಸದಸ್ಯರು ಕೂಗಿದ ಪ್ರಸಂಗ ನಡೆಯಿತು.