– ಪರಿಷತ್ ಕಲಾಪದಲ್ಲೂ ಕೊರೊನಾ ಬಗ್ಗೆ ಬಿಸಿ ಬಿಸಿ ಚರ್ಚೆ
ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಕೊರೊನಾ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ಈ ವಿಚಾರದಲ್ಲಿಯೂ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಪರಸ್ಪರ ಕಾಲೆಳೆದುಕೊಳ್ಳುವ ಕೆಲಸ ಮಾಡಿದರು.
ಮಾತು ಆರಂಭಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೊನಾ ವೈರಸ್ ವಿವಿಧ ದೇಶಗಳಿಗೆ ಹರಡಿ ಆತಂಕ ಹೆಚ್ಚಿಸಿದೆ. ಅದು ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ಭೇದಭಾವ ಮಾಡುವುದಿಲ್ಲ. ಆದರೆ ನಿಮಗೆ ಸ್ವಲ್ಪ ಜಾಸ್ತಿ ಆತಂಕ ಇದೆ ಎಂದು ವಿಪಕ್ಷ ನಾಯಕರ ಕಾಲೆಳೆದರು.
Advertisement
Advertisement
ಈ ಮಧ್ಯೆ ಎದ್ದು ನಿಂತ ಎಸ್.ಆರ್.ಪಾಟೀಲ್ ಅವರು, ನಿನ್ನೆ ಪ್ರಭಾಕರ್ ಕೋರೆ ಅವರು ಸಿಕ್ಕಿದ್ರು. ಅವರಿಗೆ ಶೇಕ್‍ಹ್ಯಾಂಡ್ ಮಾಡೋದಕ್ಕೆ ಹೋದ್ರೆ ಅವರು, ಬೇಡ ಬೇಡ ಎಂದು ಹೋಗಿ ಬಿಟ್ಟರು. ಅದಕ್ಕೆ ನಾನು, ಯಾಕ್ರಿ ಎಂದು ಪ್ರಶ್ನಿಸಿದೆ. ಆಗ ಕೋರೆ, ಕೊರೊನಾ ಬಂದ್ರೆ ಏನ್ ಮಾಡ್ಲಿ ಅಂತ ಹೇಳಿದರು. ಹೀಗಾಗಿ ನಿಮಗೆ ಕೊರೊನಾ ಆಂತಕ ಹೆಚ್ಚಾಗಿದೆ ಎಂದು ಬಿ.ಸಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟರು.
Advertisement
ಸಚಿವನಾದ ಬಳಿಕ ನಾನು ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಜನರು ಕೈಕುಲುಕಿ ಅಭಿನಂದನೆ ಸಲ್ಲಿಸಲು ಬರುತ್ತಿದ್ದರು. ಆದರೆ ನಾನು ಕೈಮುಗಿದು ಅವರನ್ನು ಮಾತನಾಡಿಸುತ್ತಿದ್ದೆ. ನನಗೆ ಕೊರೊನಾ ಭೀತಿ ಇತ್ತು. ಹೀಗಾಗಿ ಜನರು ತಪ್ಪು ತಿಳಿಯಬಾರದು ಎನ್ನುವ ಕಾರಣಕ್ಕೆ, ನಾನು ‘ಕೈ’ ಪಕ್ಷ ಬಿಟ್ಟಿದ್ದೇನೆ. ಹೀಗಾಗಿ ಕೈ ಕೊಡುವುದಿಲ್ಲ ಅಂತ ಹೇಳಿದ್ದೆ ಎಂದು ಸದನದಲ್ಲಿ ನಗೆ ಹರಿಸಿದರು.
Advertisement
ಈ ವೇಳೆ ವಿಪಕ್ಷದ ಸದಸ್ಯರೊಬ್ಬರು ‘ಕೈ’ ಪಕ್ಷಕ್ಕೆ ಕೈಕೊಟ್ಟು ಹೋದೆ ಅಂತ ಹೇಳಿ ಎಂದು ಕಾಲೆಳೆದರು. ಆಗ ಬಿ.ಸಿ.ಪಾಟೀಲ್, ನಾನು ಕೈಕೊಟ್ಟು ಹೋಗಿಲ್ಲ. ರಾಜೀನಾಮೆ ಕೊಟ್ಟು, ಜನಾದೇಶ ಪಡೆದು ಬಂದಿದ್ದೇವೆ ಎಂದರು. ಈ ಮಧ್ಯೆ ಧ್ವನಿಗೂಡಿಸಿದ ತೇಜಸ್ವಿನಿ ರಮೇಶ್, ಕೈ ಬಿಟ್ಟವರು ಯಾಕೆ ಕೈ ಕೊಟ್ಟಿದ್ದರ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಹೇಳಿದರು. ತಕ್ಷಣವೇ ಧ್ವನಿ ಏರಿಸಿದ ಬಿ.ಸಿ.ಪಾಟೀಲ್, ನೀವು ಯಾರಿಗೆ ಹೇಗೆ ಕೈಕೊಟ್ರಿ ಅಂತ ಯೋಚನೆ ಮಾಡಿ ಎಂದರು.