– ಪೊಲೀಸ್ ಸೇವೆಯಲ್ಲಿ ಮಹಿಳೆಯರ ಪ್ರಮಾಣ ಶೇ 25 ರಷ್ಟು ಏರಿಕೆ ತೀರ್ಮಾನ
ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ಭಾಗ್ಯ ಸಿಕ್ಕಿದ್ದು, ಈ ಮೂಲಕ 5 ಲಕ್ಷ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಿತು. ಈ ವೇಳೆ ಸೈಕಲ್ ವಿತರಣೆ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
Advertisement
ಸಂಪುಟ ಸಭೆ ಬಳಿಕ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೃಷ್ಣ ಭೈರೇಗೌಡ ಅವರು, 189 ಕೋಟಿ ರೂ. ವೆಚ್ಚದಲ್ಲಿ 2019-20ನೇ ಸಾಲಿನ 5 ಲಕ್ಷ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ ಪೊಲೀಸ್ ಸೇವೆಯಲ್ಲಿ ಮಹಿಳೆಯರ ಪ್ರಮಾಣವನ್ನು ಶೇ 25 ರಷ್ಟು ಏರಿಸಲು ನಿರ್ಧಾರ ಮಾಡಲಾಗಿದೆ. ಅದರಲ್ಲಿ ಶೇ 25 ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
Advertisement
Advertisement
ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಶೇ 25 ರಷ್ಟು ನೇಮಕಾತಿ ಮಾಡಲಾಗುವುದು. ನೇರ ನೇಮಕಾತಿ ಅಡಿ ಎಲ್ಲಾ ಹುದ್ದೆ ನೇಮಕಾತಿಗೆ ಸರ್ಕಾರ ತೀರ್ಮಾನಿಸಿದೆ. ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗ ನೀಡಲು ಕಾಯ್ದೆ ಮಾಡಲಾಗಿದೆ ಎಂದರು.
Advertisement
2018ರ ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ ತಿದ್ದುಪಡಿ ವಿಧೇಯಕ ಜಾರಿಗೆ ಅನುಮೋದನೆ ಸಿಕ್ಕಿದೆ. ಸರ್ಕಾರದಿಂದ ಸಹಾಯ, ರಿಯಾಯಿತಿ ಪಡೆಯುವ ಖಾಸಗಿ ಕಾರ್ಖಾನೆಯಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಬಳ್ಳಾರಿಯ ವಿಜಯನಗರ ಮೆಡಿಕಲ್ ಸಂಸ್ಥೆಯಲ್ಲಿ ಹಾಸ್ಟೆಲ್ ಮತ್ತು ಸಲಕರಣೆಗೆ 65 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ. ವಿಕಲಚೇತನ ಹಕ್ಕುಗಳ ಕರಡು ಅಧಿನಿಯಮ 2019ರ ಅಡಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೇ 5 ವಸತಿ ವ್ಯವಸ್ಥೆ, ಶೇ 5 ರಷ್ಟು ಸರ್ಕಾರಿ ಸವಲತ್ತು. ಶೇ 4ರಷ್ಟು ಸರ್ಕಾರಿ ನೇಮಕಾತಿ ಅವಕಾಶ ನೀಡುವ ನಿಯಮಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಚಾಮರಾಜನಗರದಲ್ಲಿ ಸರ್ಕಾರಿ ಕಾನೂನು ವಿದ್ಯಾಲಯ ಸ್ಥಾಪನೆಗೆ ಅನುಮತಿ ದೊರಕಿದೆ ಎಂದು ಮಾಹಿತಿ ನೀಡಿದರು.
ಉನ್ನತ ವ್ಯಾಸಂಗ, ಸಂಶೋಧಕ ವಿದ್ಯಾರ್ಥಿಗಳು ಸರ್ಕಾರದ ಹಲವು ಇಲಾಖೆಗಳಲ್ಲಿ ಇಂಟರ್ನ್‍ಶಿಪ್ ಮಾಡಬಹುದು. ಈ ನಿಟ್ಟಿನಲ್ಲಿ 27 ವಿಷಯಗಳನ್ನು ನಿಗದಿ ಮಾಡಲಾಗಿದೆ. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅನುಮೋದನೆ. ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 25 ಕೋಟಿ ರೂ.ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬಳ್ಳಾರಿ ಅಕ್ರಮ ಗಣಿಗಾರಿಕೆ ಅಕ್ರಮ ಕುರಿತು ಎಸ್‍ಐಟಿ ನಡೆದುತ್ತಿದ್ದ ತನಿಖೆಯ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ಹೆಚ್ಚುವರಿಯಾಗಿ ವಿಸ್ತರಣೆ ಮಾಡಲಾಗಿದೆ ಎಂದ ಅವರು, ಆಪರೇಷನ್ ಕಮಲ ಆಡಿಯೋ ಸಿಡಿ ಪ್ರಕರಣ ಎಸ್‍ಐಟಿ ತನಿಖೆ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ. ಸಿಎಂ ಕುಮಾರಸ್ವಾಮಿ ಅವರು ಎಸ್‍ಐಟಿ ತಂಡ ರಚನೆಯ ಪೂರ್ಣಾಧಿಕಾರ ಹೊಂದಿದ್ದಾರೆ. ಇದರಿಂದಾಗಿ ಅದನ್ನು ಸಚಿವ ಸಂಪುಟದ ಗಮನಕ್ಕೆ ತರಲೇಬೇಕು ಎಂಬ ಕಡ್ಡಾಯ ನಿಯಮವೇನಿಲ್ಲ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv