ಬೆಂಗಳೂರು: ಕರ್ನಾಟಕದಿಂದ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದವರು ಎಷ್ಟು? ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಸರ್ಕಾರದ ಬಳಿ ಈಗಲೂ ಸ್ಪಷ್ಟವಾದ ಉತ್ತರವಿಲ್ಲ.
ಹೌದು, ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೆ ಕರ್ನಾಟಕದಿಂದ 1,300 ಮಂದಿ ಭಾಗಿಯಾಗಿದ್ದರು ಎಂದು ಸರ್ಕಾರ ಅಧಿಕೃತ ಮಾಹಿತಿಯನ್ನು ಕಳೆದ ಬುಧವಾರ ಬಿಡುಗಡೆಗೊಳಿತ್ತು. ಕರ್ನಾಟಕದಿಂದ 1,300 ಮಂದಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು, 50 ಮಂದಿಗೆ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 269 ಮಂದಿ, ಇತರ ಜಿಲ್ಲೆಗಳಲ್ಲಿ 472 ಮಂದಿ ಸೇರಿ ಒಟ್ಟು 801 ಮಂದಿ ಕ್ವಾರಂಟೈನ್‍ನಲ್ಲಿದ್ದು 581 ಮಂದಿ ಇನ್ನೂ ಪತ್ತೆಯಾಗಿಲ್ಲ. 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದರು.
Advertisement
Advertisement
ಹಳೆ ಲೆಕ್ಕದಲ್ಲಿ 1,300 ಮಂದಿ ಇದ್ದರೆ ಕಳೆದ 8 ದಿನಗಳಲ್ಲಿ ಹಲವು ಲೆಕ್ಕ ಸಿಕ್ಕಿದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ತಬ್ಲಿಘಿ ಕಾರ್ಯಕ್ರಮಕ್ಕೆ ತೆರಳಿದ್ದರು ಎನ್ನುವ ವಿಚಾರ ಈಗ ತಿಳಿದುಬಂದಿದೆ. ರೈಲಿನಲ್ಲಿ ಮಾರ್ಚ್ 20 ರಂದು ಪ್ರಯಾಣಿಸಿದವರು ಮತ್ತು ಈಗಾಗಲೇ ಪತ್ತೆಯಾದ ವ್ಯಕ್ತಿಗಳ ಜೊತೆ ವಿಚಾರಣೆ ವೇಳೆ ಈ ಮಾಹಿತಿ ಲಭ್ಯವಾಗಿದೆ.
Advertisement
ಈಗ ಉಳಿದ 600 ಮಂದಿ ಎಲ್ಲಿದ್ದಾರೆ? ಅವರನ್ನು ಪತ್ತೆ ಮಾಡುವುದು ಹೇಗೆ ಎನ್ನುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಕಳೆದ 8 ದಿನಗಳಲ್ಲಿ ಜಮಾತ್ ನಂಟಿನಿಂದ ಬೆಳಗಾವಿಯಲ್ಲಿ 18 ಕೊರೊನಾ ಪಾಸಿಟಿವ್ ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.
Advertisement
ಸರ್ಕಾರ ಈಗಾಗಲೇ ತಬ್ಲಿಘಿಗೆ ಹೋದವರು ಸ್ವಯಂಪ್ರೇರಿತವಾಗಿ ಆಗಮಿಸಿ ವೈದ್ಯಕೀಯ ಪರೀಕ್ಷೆಗೆ ಬರಬೇಕು ಎಂದು ಸೂಚಿಸಿದ್ದರೂ ಇನ್ನೂ ಹಲವು ಮಂದಿ ಆಗಮಿಸಿಲ್ಲ. ಹೀಗೆ ರಾಜ್ಯದ ಉದ್ದಗಲಕ್ಕೂ ಮತ್ತಷ್ಟು ತಬ್ಲಿಘಿಗಳು ತಲೆಮರೆಸಿಕೊಂಡಿರುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಬ್ಲಿಘಿಗಳನ್ನು ಪತ್ತೆ ಹಚ್ಚುವ ಕಾರ್ಯ ಮತ್ತಷ್ಟು ತೀವ್ರಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಸರಿಯಾದ ಮಾಹಿತಿ ಸಿಗದ ಪರಿಣಾಮ ನಗರ ಪ್ರದೇಶದಲ್ಲಿ ತಬ್ಲಿಘಿಗಳನ್ನ ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ಕ ಪಕ್ಕದವರ ದೂರು ಆದರಿಸಿ ಪರಿಶೀಲನೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಎಷ್ಟಿದೆ?
ಬೆಂಗಳೂರಿನಲ್ಲಿ ಒಟ್ಟು 71 ಮಂದಿಗೆ ಕೊರೊನಾ ಬಂದಿದ್ದು, ಈ ಪೈಕಿ 35 ಮಂದಿ ಗುಣಮುಖರಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಟ್ರಾವೆಲ್ ಹಿಸ್ಟರಿಯಿಂದ 34( ಶೇ.48), ಪ್ರಾಥಮಿಕ ಸಂಪರ್ಕ 18(ಶೇ.25), ಉಸಿರಾಟದ ತೊಂದರೆ 10(ಶೇ.14), ತಬ್ಲಿಘಿ ಜಮಾತ್ 7(ಶೇ.10) ಮಂದಿಗೆ ಕೊರೊನಾ ಬಂದಿದೆ.