70ನೇ ಗಣರಾಜ್ಯೋತ್ಸವ- ದೆಹಲಿಯ ರಾಜ್‍ಪಥದಲ್ಲಿ ಮೊಳಗಿತು ಕನ್ನಡದ ಕಹಳೆ

Public TV
3 Min Read
tableau collage

– ಕರ್ನಾಟಕ ಸ್ತಬ್ಧಚಿತ್ರದ ವಿಶೇಷತೆಯೇನು..?

ನವದೆಹಲಿ: ಇಲ್ಲಿನ ರಾಜ್‍ಪಥ್ ರಸ್ತೆಯಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಕರ್ನಾಟಕದಿಂದ ಈ ಬಾರಿ ಗಾಂಧೀಜಿ ಹಾಗೂ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು. ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಹಾಡಿನ ಮೂಲಕ ಎಲ್ಲರ ಗಮನಸೆಳೆಯಿತು.

ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ 16 ರಾಜ್ಯಗಳ ಮತ್ತು 6 ಇಲಾಖೆಗಳ ಒಟ್ಟು 22 ಸ್ತಬ್ಧ ಚಿತ್ರಗಳು ಪ್ರದರ್ಶನವಾಗುತ್ತಿದೆ. ಸ್ತಬ್ಧ ಚಿತ್ರಗಳಲ್ಲಿ ಗಾಂಧೀಜಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಹಾಗೆಯೇ ಕರ್ನಾಟಕದಿಂದ ಈ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶಿಸಿದೆ.

rd

ಸ್ತಬ್ಧಚಿತ್ರದ ವಿಶೇಷತೆಯೇನು..?
ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಐತಿಹಾಸಿಕ ಅಧಿವೇಶನ ನಡೆದ ಆವರಣಕ್ಕೆ ವಿಜಯನಗರ ಎಂದು ನಾಮಕರಣ ಮಾಡಲಾಗಿತ್ತು. ಅಲ್ಲದೇ ಅಧಿವೇಶನ ನಡೆದ ಸ್ಥಳದ ಪ್ರವೇಶ ದ್ವಾರವನ್ನು ಹಂಪೆಯ ವಿರೂಪಾಕ್ಷ ದೇಗುಲದ ಗೋಪುರದ ವಿನ್ಯಾಸದಲ್ಲಿ ಅಲಂಕರಿಸಲಾಗಿತ್ತು. ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರತಿನಿಧಿಗಳು ಮತ್ತು ಆಹ್ವಾನಿತರು ತಂಗಲು ಕುಟೀರಗಳನ್ನು ಬಿದಿರು ಮತ್ತು ಖಾದಿ ವಸ್ತ್ರಗಳಿಂದ ರೂಪಿಸಲಾಗಿತ್ತು. ಕುಡಿಯುವ ನೀರು ಸರಬರಾಜಿಗಾಗಿ ಹೊಸ ಬಾವಿಯೊಂದನ್ನು ನಿರ್ಮಿಸಿದ್ದು, ಅದಕ್ಕೆ ಪಂಪಾ ಸರೋವರ ಎಂದು ಹೆಸರಿಡಲಾಗಿತ್ತು. ಪ್ರತಿನಿಧಿಗಳ ಊಟೋಪಚಾರದ ವ್ಯವಸ್ಥೆಗೆ ಬೃಹತ್ ಪಾಕಶಾಲೆ ನಿರ್ಮಿಸಲಾಗಿತ್ತು. ಸಮಾವೇಶದ ಇಡೀ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಮುಂಬೈನಿಂದ ಸಾವಿರಾರು ಸಂಖ್ಯೆಯಲ್ಲಿ ಲಾಟೀನ್‍ಗಳು ಮತ್ತು ಪೆಟ್ರೋಮ್ಯಾಕ್ಸ್ ದೀಪಗಳನ್ನು ತರಿಸಲಾಗಿತ್ತು. ನಾ. ಸೂ. ಹರ್ಡಿಕರ್ ಅವರು ತರಬೇತಿಗೊಳಿಸಿದ್ದ ಹಿಂದೂಸ್ಥಾನ್ ಸೇವಾ ದಳದ ಸ್ವಯಂ ಸೇವಕರು, ಪ್ರತಿನಿಧಿಗಳು ಮತ್ತು ಆಹ್ವಾನಿತರ ಸೇವೆಯ ಮೇಲುಸ್ತುವಾರಿ ವಹಿಸಿದ್ದರು.

ಮಹಾತ್ಮಾ ಗಾಂಧೀಜಿಯವರು ಮಹಾಧಿವೇಶನಕ್ಕೆ ಆಗಮಿಸಿ ಅಲ್ಲಿ ಸಹೋದರರು, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರು, ಸರದಾರ್ ವಲ್ಲಭಾಬಾಯ್ ಪಟೇಲ್ ಮತ್ತಿತರ ಗಣ್ಯನಾಯಕರು ಅವರೊಡನೆ ಇದ್ದರು. ಗಂಗಾಧರ ದೇಶಪಾಂಡೆ ಅವರ ಅಧ್ಯಕ್ಷತೆಯ ಸ್ವಾಗತ ಸಮಿತಿ ಜೊತೆಗೆ ಅಪಾರ ಸಂಖ್ಯೆಯಲ್ಲಿದ್ದ ಗಾಂಧೀ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗಣ್ಯರ ಸಮೂಹವನ್ನು ಆತ್ಮೀಯತೆಯಿಂದ ಬರ ಮಾಡಿಕೊಂಡು ಮೆರವಣಿಗೆ ಮೂಲಕ ಕಾಂಗ್ರೆಸ್ ಶಿಬಿರಕ್ಕಿ ಕರೆದೊಯ್ದರು. ಅಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಮತ್ತು ಕನ್ನಡ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗಿತ್ತು. ಸಂಗೀತ ದಿಗ್ಗಜ ವೀಣೆ ಶೇಷಣ್ಣನವರು ವೀಣಾವಾದನ ಮತ್ತು ಹುಯಿಲಗೋಳ ನಾರಾಯಣರಾವ್ ಅವರು ಕನ್ನಡ ರಾಜ್ಯೋದಯದ ಕುರಿತು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ಹಾಡುವ ಮೂಲಕ ಮಹಾಧಿವೇಶನಕ್ಕೆ ವಿಶೇಷ ಮೆರುಗನ್ನು ನೀಡಿದ್ದರು.

rd 1

ಬೆಳಗಾವಿ ಮಹಾಧಿವೇಶನದ ವಿಶೇಷವೆಂದರೆ ಸರಿಯಾಗಿ ಮಧ್ಯಾಹ್ನ 3.00ಗಂಟೆಗೆ ಎಲ್ಲ ಕಲಾಪಗಳು ಪ್ರಾರಂಭವಾದದ್ದು, ಮೊಟ್ಟ ಮೊದಲ ಬಾರಿಗೆ ಧ್ವಜಾರೋಹಣದ ಪದ್ಧತಿಯನ್ನು ಪ್ರಾರಂಭಿಸಿಲಾಗಿತ್ತು. ಅಲ್ಲದೇ ಬಿಳಿ, ಹಸಿರು ಮತ್ತು ಕೆಂಪು ಬಣ್ಣದ ಜೊತೆಗೆ ಮಧ್ಯಭಾಗದಲ್ಲಿ ಚರಕದ ಚಿತ್ರವುಳ್ಳ ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಹಾರಿಸಲಾಯಿತು. ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಪಂಡಿತ್ ವಿಷ್ಣು ದಿಗಂಬರ್ ಪಾಲುಸ್ಕರ್ ಮತ್ತು ಅವರ ಶಿಷ್ಯ ಗಣ ವಿಶಿಷ್ಟ ರಾಗದೊಂದಿಗೆ ನುಡಿಸಿದ್ದು ಮತ್ತೊಂದು ವಿಶೇಷವಾಗಿದೆ. ಇದಕ್ಕೂ ಮೊದಲು ಗುರುದೇವ ರವೀಂದ್ರ ನಾಥ್ ಠಾಗೂರ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದ್ದು ಉಲ್ಲೇಖಾರ್ಹ.

rd 2

39ನೇ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷ ಸ್ಥಾನದಿಂದ ಮಹಾತ್ಮ ಗಾಂಧೀಜಿಯವರು ಹಲವು ಕ್ರಾಂತಿಖಾರಿ ಮತ್ತು ವಿನೂತನ ವಿಷಯಗಳು ಪ್ರತಿಪಾದನೆ ಮಾಡಿದ್ದರು. ಹಿಂದೂ-ಮುಸ್ಲಿಂ ಏಕತೆ, ವಿದೇಶಿ ವಸ್ತುಗಳು ಬಹಿಷ್ಕಾರ, ಚರಕ ಮತ್ತು ಖಾದಿ ನೂಲುವಿಕೆಗೆ ಪ್ರೋತ್ಸಾಹ, ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಗಾಂಧೀಜಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಲವಾದ ಪ್ರತಿಪಾದನೆ ಮಾಡಿದ್ದರು.

ಮಹಾತ್ಮಾ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಿಗೆ ಕರ್ನಾಟಕ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿತು. ಖಾದಿ ಪ್ರಚಾರ ಮತ್ತು ಗ್ರಾಮೋದ್ಯೋಗದ ಬಗ್ಗೆ ಕರ್ನಾಟಕದ ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಹರಿಜನೋದ್ದಾರಕ್ಕಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಕಲ್ಯಾಣ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. 1922 ರಿಂದ 25ರ ನಡುವೆ ರಾಷ್ಟ್ರೀಯ ನೇತಾರರುಗಳಾದ ಸಿ. ರಾಜಗೋಪಾಲಚಾರಿ, ಚಿತ್ತರಂಜನ್ ದಾಸ್, ಲಾಲಾ ಲಜಪತ್ ರಾಯ್, ಎಸ್. ಶ್ರೀನಿವಾಸ್ ಐಯ್ಯಂಗಾರ್, ಪಟ್ಟಾಭಿ ಸೀತಾರಾಮಯ್ಯ, ಜಮ್ನಾದಾಸ ಮೆಹೆತಾ, ಕೊಂಡ ವೆಂಕಟ್ಟಪ್ಪಯ್ಯ ಮತ್ತಿತರರು ಕರ್ನಾಟಕದ ಮೂಲೆ-ಮೂಲೆಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಜಾಗೃತಿ ಪ್ರಜ್ಞೆಯನ್ನು ಜೀವಂತವಿರಿಸಿದರು. ಕರ್ನಾಟಕದ ನಾಯಕರುಗಳಾದ ನಾ.ಸೂ ಹರ್ಡೀಕರ್, ಶ್ರೀನಿವಾಸ್ ರಾವ್ ಕೌಜಲಗಿ, ಗಂಗಾಧರ ರಾವ್ ದೇಶಪಾಂಡೆ, ಕಡಪ ರಾಘವೇಂದ್ರ ರಾವ್, ಆರ್. ಆರ್ ದಿವಾಕರ್, ಕೃಷ್ಣ ರಾವ್ ಮುದವೇಡಕರ್ ಮತ್ತಿತರರು ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆ ಪ್ರಜ್ವಲಿಸಲು ಶ್ರಮಿಸಿದ್ದರು.

https://www.youtube.com/watch?v=Fn2jwU5ayD4

https://www.youtube.com/watch?v=QmK1zbMMIv4

https://www.youtube.com/watch?v=QxzTqdy-KS4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *