– ಪ್ರವಾಹ ಬಾಧಿತ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಮುಂದುವರಿಕೆ
ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ತೀರದ ರಾಜ್ಯಗಳಲ್ಲಿ ಮುಂಗಾರ ಆರ್ಭಟ ಮುಂದುವರಿದಿದೆ. ಭಾರೀ ವರ್ಷಧಾರೆ, ಪ್ರವಾಹದಿಂದಾಗಿ ರಾಜ್ಯಾದ್ಯಂತ 8 ಮಂದಿ ಜಲಾಸುರನಿಗೆ ಬಲಿಯಾಗಿದ್ದಾರೆ.
ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಮಗಳೂರಿನಲ್ಲಿ 5 ದಿನ, ಬೆಳಗಾವಿ, ಧಾರವಾಡ, ಕೊಡಗು, ಮಂಗಳೂರು, ಹಾವೇರಿ, ಹಾಸನ, ಶಿವಮೊಗ್ಗದಲ್ಲಿ ಎರಡು ದಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹುಬ್ಬಳ್ಳಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಜೋರಾಗಿದ್ದು, ನಿಧಾನವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದ್ದಾರೆ. ಎಲ್ಲಾ ಕಡೆ ಕರೆಂಟ್ ವ್ಯತ್ಯಯವಾಗಿದ್ದು, ಸುತ್ತಲೂ ನೀರಿದ್ದರೂ ಕುಡಿಯುವುದಕ್ಕೆ ನೀರು ಇಲ್ಲದಂತಾಗಿದೆ.
Advertisement
Advertisement
ಬೆಳಗಾವಿಯಲ್ಲಿ ಕೃಷ್ಣಾ ನದಿ ಆರ್ಭಟ ತಣ್ಣಗಾಗೋ ಲಕ್ಷಣವೇ ಕಾಣುತ್ತಿಲ್ಲ. ಆಶ್ಲೇಷ ಮಳೆಗೆ ಬೆಳಗಾವಿಯಲ್ಲಿ ಇವತ್ತು ಇಬ್ಬರು ಬಲಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಚಂದನಹೊಸೂರಿನಲ್ಲಿ ಗೋಡೆ ಕುಸಿದು ಯಲ್ಲೇಶ್ ಬಣ್ಣಣವರ, ಗೋಕಾಕ್ ಲೋಳಸೂರ ಗ್ರಾಮದಲ್ಲಿ ಹೊಳೇ ನೀರಿನ ಪ್ರಭಾವದಿಂದ 22 ವರ್ಷದ ಪದ್ಮಾವತಿ ಸಾವಿಗೀಡಾಗಿದ್ದಾರೆ. ಮಾರ್ಕಂಡೇಯ ನದಿಯಲ್ಲಿ ಹೆಣಗಳು ತೇಲಿ ಬರ್ತಿವೆ. ಅಥಣಿಯ ತೀರ್ಥ ಗ್ರಾಮದ ಬಳಿಯಲ್ಲಿ 12 ವರ್ಷದ ಬಸವರಾಜ ಮಾನಿಂಗ ಕಾಂಬಳೆ ರಸ್ತೆ ದಾಟುವಾಗ ಕೊಚ್ಚಿ ಹೋಗಿದ್ದಾನೆ. ಬಾಲಕನ ರಕ್ಷಣೆಗೆ ಇಳಿದವರು ನದಿಯಿಂದ ಹೊರ ಬಾರಲಾಗದೆ ಪರದಾಡಿದ್ದಾರೆ. ಸ್ಥಳೀಯರು ಕೂಡಲೆ ಅವರತ್ತ ಹಗ್ಗ ಎಸೆದು ಮೂವರ ರಕ್ಷಣೆ ಮಾಡಿದ್ದಾರೆ. ಗೋಕಾಕ್ ಫಾಲ್ಸ್ ಭಾರೀ ರಭಸದಲ್ಲಿ ಭೋರ್ಗರೆಯುತ್ತಿದೆ.
Advertisement
ಅಥಣಿ ತಾಲೂಕಿನ ಅವರಖೇಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇನ್ನು ನೀರಿನ ಮಧ್ಯೆ ಶ್ರೀಶೈಲ್ ಧರಿಗೌಡರ್ ಕುಟುಂಬ ಸಿಲುಕಿಕೊಂಡಿತ್ತು. ನೀರಿನಲ್ಲೆ ಟ್ರ್ಯಾಕ್ಟರ್ ಮುಖಾಂತರ ಕುಟುಂಬಸ್ಥರನ್ನ ಸ್ಥಳೀಯರು ಶಿಫ್ಟ್ ಮಾಡಿದರು.
Advertisement
ಕೊಲ್ಹಾಪುರ ನಗರದ ಶಹಾಪುರಿಯಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಬೋಟ್ ಪಲ್ಟಿಯಾಗಿತ್ತು. 5-6 ಜನರನ್ನು ಎನ್‍ಡಿಆರ್ ಎಫ್ ಸಿಬ್ಬಂದಿ ಕರೆತರರುವಾಗ ಘಟನೆ ನಡೆದಿದೆ. ಚಿಕ್ಕೋಡಿಯ ಸದಲಗಾ ಪಟ್ಟಣದ ಬಳಿ ಇರುವ ದೂದಗಂಗಾ ನದಿ ನಡುಗಡ್ಡೆಯಲ್ಲಿ 100ಕ್ಕೂ ಹೆಚ್ಚು ಕುಟುಂಬ, 150 ಕ್ಕೂ ಹೆಚ್ಚು ಜಾನುವಾರಗಳು ಸಿಲುಕಿಕೊಂಡಿವೆ. ದೋಣಿಯಿಂದ ಆಗಲ್ಲ. ಹೆಲಿಕಾಪ್ಟರ್‍ನಲ್ಲೇ ಲಿಫ್ಟ್ ಮಾಡಬೇಕಾದ ಪರಿಸ್ಥಿತಿ ಇದೆ. ಜೋಡಕುರಳಿ ಗ್ರಾಮದ ಸಂತುಬಾಯಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ಯುವಕನನ್ನು ಜನ ರಕ್ಷಿಸಿದ್ದಾರೆ. ಹಿರಣ್ಯಕೇಶಿ ನದಿ ತೀರದಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ದಡದ ಸಂಕೇಶ್ವರ ಪಟ್ಟಣದ 500 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜನ ನಿಧಾನವಾಗಿ ಸ್ಥಳಾಂತರವಾಗ್ತಿದ್ದಾರೆ. ರಾಯಭಾಗದ ಭಾವನಗೌಂದತಿ ಗ್ರಾಮದ ಸುಗಂಧಾ ದೇವಿಗೆ ಶ್ರಾವಣ ಮಾಸದ ಪೂಜೆ ಸಲ್ಲಿಸಲು ಹೋಗಿದ್ದ ಭಕ್ತರಿಗೆ ಜಲಕಂಟಕ ಕಾಡಿದೆ. ಹುಕ್ಕೇರಿ ತಾಲೂಕಿನ ಕೊಟಬಾಗಿಯ ದುರ್ಗಾ ದೇವಿ ದೇವಸ್ಥಾನ ಹಾಗೂ ಹೊಳೆಮ್ಮ ದೇವಸ್ಥಾನ ಜಲಾವೃತವಾಗಿದೆ.
ಬಾಗಲಕೋಟೆ, ರಾಯಚೂರು, ಯಾದಗಿರಿ, ಗದಗನಲ್ಲೂ ಪ್ರವಾಹದ ಅದೇ ಚಿತ್ರಣ. ಅಪಾಯಕಾರಿಯಾಗಿ ಹರಿಯುತ್ತಿರುವ ಕೃಷ್ಣಾ ನದಿಯಿಂದಾಗಿ ಬಾಗಲಕೋಟೆಯ ಜಮಖಂಡಿ ತಾಲೂಕಿನ ಮತ್ತಷ್ಟು ಗ್ರಾಮಗಳು ಜಲಾವೃತಗೊಳ್ಳುತ್ತಿವೆ. ಹೀಗಾಗಿ ಜಿಲ್ಲಾಡಳಿತ ಪ್ರವಾಹ ಪ್ರದೇಶದಡಿ ಸಿಲುಕುವ ಜನರನ್ನು ಬೋಟ್ ಮೂಲಕ ಶಿಫ್ಟ್ ಮಾಡಲಾಗುತ್ತದೆ. ಆದರೆ ಪ್ರವಾಹಪೀಡಿತ ಜನರಿಗೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸ್ತಿದ್ದಾರೆ.
ರಾಯಚೂರಿನ ದೇವದುರ್ಗದ ಗೂಗಲ್ ಗ್ರಾಮದ ಅಲ್ಲಮ ಪ್ರಭು ದೇವಸ್ಥಾನದ ಗರ್ಭಗುಡಿಗೆ ನಾರಾಯಣಪುರ ಡ್ಯಾಂ ನೀರು ನುಗ್ಗಿದೆ. ನೀರಿನಲ್ಲೆ ಪೂಜಾ ಕೈಂಕರ್ಯಗಳು ನಡೆದಿವೆ. ರಾತ್ರಿಯಿಂದ 4.04 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡಲಾಗುತ್ತಿರುವ ಕಾರಣ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೆಜ್ ಮುಳುಗಡೆಯಾಗಿದೆ. ಜಿಲ್ಲೆಯ 54 ಗ್ರಾಮಗಳಿಗೆ ಪ್ರವಾಹ ಭೀತಿ ನಿರ್ಮಾಣವಾಗಿದೆ. ಎನ್‍ಡಿಆರ್ ಎಫ್, ಮಿಲಿಟರಿ ಪಡೆಗಳಿಂದ ಕಾರ್ಯಾಚರಣೆ ನಡೀತಿದೆ. ಅರಶಿಣಿಗಿ, ಕಾಡ್ಲೂರು ಸೇರಿ ವಿವಿಧೆಡೆ ಮೊಸಳೆಗಳು ಜಮೀನಿಗೆ ನುಗುತ್ತಿದೆ. ಯಾದಗಿರಿಯ ಸುರಪುರದ ಮುಷ್ಠಳ್ಳಿ ಗ್ರಾಮದ ಗಡ್ಡಿ ರಾಮಮಂದಿರ ಮುಳುಗಿದೆ.
ಕಾರವಾರ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ದಿನದಿಂದ ದಿನಕ್ಕೆ ಮಳೆ ಆರ್ಭಟ ಹೆಚ್ಚಾಗುತ್ತಲೇ ಇದೆ. ಜನರಲ್ಲಿ ಆತಂಕ ಮನೆ ಮಾಡುತ್ತಿದ್ದು, ನದಿಗಳೆಲ್ಲಾ ಭೀತಿ ಮೂಡಿಸುವಂತೆ ಸದ್ದು ಮಾಡಿ ಹರಿಯುತ್ತಿವೆ. ಚಿಕ್ಕಮಗಳೂರಿನ ಶೃಂಗೇರಿಯಿಂದ ಇತರೆ ಗ್ರಾಮಗಳಿಗೆ ಸಂಪರ್ಕ ಕಡಿವಾಗಿದೆ. ಮೂಡಿಗೆರೆಯ ಹಂತೂರು ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಗಿದೆ. ಚಾರ್ಮಾಡಿ ಘಾಟ್‍ನಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ಹೊರನಾಡು ರಸ್ತೆ ಸಂಪೂರ್ಣ ಬಂದ್ ಆಗಿದೆ. ಕಡೂರು ತಾಲೂಕಿನ ಸರಸ್ವತಿಪುರ ಬಳಿ ಬಸ್ ಪಲ್ಟಿಯಾಗಿ, 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಳ್ಳಯ್ಯನ ಗಿರಿಯ ಹೊನ್ನಮ್ಮನಹಳದಲ್ಲಿ ನೀರೋ ನೀರು. ಚಿಕ್ಕಮಗಳೂರಿನಿಂದ ಹಾಸನದತ್ತ ಮಳೆ ಮುಖಮಾಡಿದೆ. ಬೇಲೂರಿನ ಐತಿಹಾಸಿಕ ವಿಷ್ಣು ಸಮುದ್ರಕೆರೆ ಭರ್ತಿಯಾಗಿ ಉಕ್ಕಿ ಹರಿದಿದೆ. ಹತ್ತಾರು ಎಕರೆಯ ಭತ್ತ ನೀರು ಪಾಲಾಗಿದೆ. ಅಗಸರಹಳ್ಳಿ ಸೇತುವೆ ಮುಳುಗಡೆಯಾಗಿದೆ. ಸಕಲೇಶಪುರ ಹೊಳೇಮಲ್ಲೇಶ್ವರ ದೇವಾಲಯ ಜಲಾವೃತವಾಗಿದೆ.
ಶಿವಮೊಗ್ಗದಲ್ಲಿ ತುಂಗಾನದಿ ಭರ್ತಿಯಾಗಿದೆ. ಇಮಾಂ ಬಡಾ, ಕುಂಬಾರಗುಂಡಿ, ಮಂಡಕ್ಕಿ ಭಟ್ಟಿಯ ಜನರನ್ನು ದೋಣಿಯಲ್ಲಿ ಕರೆತರಲಾಗಿದೆ. ಶಾಂತಮ್ಮ ಲೇಔಟ್‍ನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರುಗ ನುಗ್ಗಿದೆ. ಡಿಸಿ, ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಮರ ಉರುಳಿದೆ.
ಕೊಡಗಿನಲ್ಲಿ ಪ್ರವಾಹ ತಗ್ಗಿಲ್ಲ. ಆತಂಕವೂ ದೂರ ಆಗಿಲ್ಲ. ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ವಿರಾಜಪೇಟೆ, ಸೋಮಾವಾರಪೇಟೆಯಲ್ಲಿ ಕಾಡು ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳು ಜಲಾವೃತ ವಾಗೋ ಹಂತಕ್ಕೆ ತಲುಪಿವೆ. ಸ್ಥಳಾಂತರಕ್ಕೆ ಹೋದ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಬಳಿ ನೇತ್ರಾವತಿ ಸ್ನಾನಘಟ್ಟ ಮುಳುಗಡೆಯಾಗಿದ್ದು ಮಳೆನೀರು ಅಬ್ಬರಿಸುತ್ತಾ ನುಗ್ಗಿ ಬರುತ್ತಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಉಡುಪಿಯ ಬ್ರಹ್ಮಾವರದ ಬೈಕಾಡಿ, ಉಪ್ಪೂರು, ಕುಂದಾಪುರದ ಶಿರಿಯಾರ ಸಕ್ಕಟ್ಟು ಪ್ರದೇಶಗಳಲ್ಲಿ ನೆರೆಯ ಭೀತಿ ಎದುರಾಗಿತ್ತು. ಆದ್ರೆ ಮಳೆ ಕೊಂಚ ಬಿಡುವು ನೀಡಿರುವುದರಿಂದ ನೆರೆ ತಗ್ಗುತಿದೆ.