DistrictsKarnatakaLatestMain PostMandya

ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ.4-5ರಂದು ರಾಜ್ಯ ಮಟ್ಟದ ಯುವಜನೋತ್ಸವ: ನಾರಾಯಣಗೌಡ

ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನವರಿ 4-5 ರಂದು ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಅದಕ್ಕೆ ಯಾವುದೇ ಕುಂದು ಕೊರತೆ ಆಗದ ರೀತಿ ನೋಡಿಕೊಳ್ಳಿ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಯುವಜನೋತ್ಸವ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಪೂರ್ವಭಾವಿ ಕ್ರಮಗಳ ಕುರಿತು ಇಂದು ಅಧಿಕಾರಿಗಳ ಜೊತೆ ಡಾ.ನಾರಾಯಣಗೌಡ ಸಭೆ ನಡೆಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನವರಿ 4-5ರಂದು ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: 700ರ ಗಡಿದಾಟಿದ ಕೊರೊನಾ – ಓಮಿಕ್ರಾನ್ 43ಕ್ಕೆ ಏರಿಕೆ

ಜನವರಿ 4ರಂದು ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ನಾರಾಯಣಗೌಡ, ಡಾ.ಸಿ.ಎನ್ ಅಶ್ವಥ್ ನಾರಾಯಣ್, ಸುನಿಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ವಿಜೇತರಿಗೆ ಬಹುಮಾನ ಹೆಚ್ಚಳ:
ಯುವಜನೋತ್ಸವದ ವಿವಿಧ ಭಾಗವಹಿಸುವ ಸ್ಪರ್ಧಿಗಳ ಬಹುಮಾನ ಮೊತ್ತವನ್ನು ಹೆಚ್ಚಿಸಲು ಸಚಿವ ಡಾ. ನಾರಾಯಣಗೌಡ ಕ್ರಮವಹಿಸಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಿಗೆ ಮೊದಲ ಬಹುಮಾನ 15 ಸಾವಿರ, ಎರಡನೇ ಬಹುಮಾನ 10 ಸಾವಿರ, ಮೂರನೇ ಬಹುಮಾನ 5 ಸಾವಿರ, ಗುಂಪುಗಳಿಗೆ ನೀಡುವ ಮೊದಲ ಬಹುಮಾನ 25 ಸಾವಿರ, ಎರಡನೇ ಬಹುಮಾನ 25 ಸಾವಿರಕ್ಕೆ ಹೆಚ್ಚಳ ಮಾಡಿ ಡಾ.ನಾರಾಯಣಗೌಡ ಆದೇಶಿಸಿದರು. ಇದನ್ನೂ ಓದಿ: ನಾಳೆ ಬಂದ್ ಇಲ್ಲ – ವ್ಯಾಪಾರ, ವ್ಯವಹಾರ ನಡೆಸಬಹುದು: ಬೊಮ್ಮಾಯಿ

ಯುವಜನೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಎರಡು ಸಾವಿರಕ್ಕೂ ಅಧಿಕ ಪ್ರತಿಭಾನ್ವಿತರು ಆಗಮಿಸಲಿದ್ದಾರೆ. ಅವರಿಗೆ ಊಟ, ವಸತಿ ಸೇರಿದಂತೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋವಿಡ್ ನಿಯಮಗಳನ್ನು ಪಾಲನೆಯೊಂದಿಗೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ಪ್ರತಿಭಾನ್ವಿತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ. ರಾಜ್ಯ ಮಟ್ಟದ ಈ ಯುವಜನೋತ್ಸವ ಕಾರ್ಯಕ್ರಮ ಮಂಡ್ಯ ಜಿಲ್ಲೆಯಲ್ಲಿ ಹೆಮ್ಮೆಯಾಗಿದ್ದು, ಇದನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮಂಡ್ಯದಲ್ಲಿ ನಡೆದರೆ ಇಂಡಿಯಾದಲ್ಲಿ ನಡೆದಂತೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಮಂಡ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕು ಎಂದು ಸಚಿವರು ಕರೆ ನೀಡಿದರು. ಯುವಜನೋತ್ಸವದಲ್ಲಿ ಭಾಗಿಯಾಗುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಕ್ಲಿನಿಕ್ ಸ್ಥಾಪನೆ, ಅಂಬುಲೆನ್ಸ್ ಸೇವೆ, ಊಟ, ವಸತಿ ಸೇರಿದಂತೆ ಯಾವುದೇ ಕುಂದು ಕೊರತೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಶ್ವಥಿ ಸಚಿವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ನಾಳೆಯ ಕರ್ನಾಟಕ ಬಂದ್ ವಾಪಸ್

ಸಭೆಯಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ, ಜಿಲ್ಲಾಧಿಕಾರಿ ಅಶ್ವಥಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published.

Back to top button