ಜುಲೈನಲ್ಲಿ ರಾಜ್ಯ ಬಜೆಟ್ ಮಂಡನೆ – ನೂತನ ಸಿಎಂ ಸಿದ್ದರಾಮಯ್ಯ ಘೋಷಣೆ

Public TV
2 Min Read
Siddaramaiah 10

ಬೆಂಗಳೂರು: ಮುಂದಿನ ಜುಲೈ ತಿಂಗಳಿನಲ್ಲೇ ರಾಜ್ಯ ಬಜೆಟ್ (Karnataka Budget 2023) ಮಂಡಿಸುವುದಾಗಿ ನೂತನ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಶನಿವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ಸಂಪುಟ ಸಭೆ ನಡೆಸಿದ ಬಳಿಕ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸುಮ್ನೆ ರಸ್ತೆಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡಕ್ಕಾಗಲ್ಲ – ಡಿಸಿಎಂ ಡಿಕೆಶಿ

CONGRESS CABINET

ಮೊದಲ ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಎಲ್ಲಾ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಉಚಿತ ನೀಡುತ್ತೇವೆ. ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ. ಲಕ್ಷುರಿ ಹೊರತು ಪಡಿಸಿ ಸರ್ಕಾರಿ ಬಸ್ಸಿನಲ್ಲಿ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ನೀಡಲಾಗುತ್ತದೆ. ಇದು ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ. ಹೊರ ರಾಜ್ಯದ ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಎರಡು ವರ್ಷದವರೆಗೆ ತಿಂಗಳಿಗೆ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡುತ್ತೇವೆ. ಮಧ್ಯೆ ಕೆಲಸ ಸಿಕ್ಕಿದರೆ ಭತ್ಯೆ ನೀಡುವುದಿಲ್ಲ ಎಂದು ಘೋಷಿಸಿದರು.

DKShivakumar

2013-2018 ರಲ್ಲಿ 158 ಭರವಸೆ ಈಡೇರಿಸಿದ್ವಿ, ಅದರ ಜೊತೆಗೆ 30 ಕಾರ್ಯಕ್ರಮಗಳನ್ನ ಹೊಸದಾಗಿ ಜಾರಿ ಮಾಡಿದ್ವಿ. ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ವಿದ್ಯಾಸಿರಿ ಯೋಜನೆಗಳನ್ನ ಹೊಸದಾಗಿ ಜಾರಿಗೊಳಿಸಿದ್ವಿ. ಜನರಿಗೆ ನಮ್ಮ ಮೇಲೆ ವಿಶ್ವಾಸ ಇದೆ. ನಾವು ಕೊಟ್ಡ ಮಾತಿನಂತೆ ನಡೆಯುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ – ಮುಂದಿನ ಕ್ಯಾಬಿನೆಟ್‌ನಲ್ಲಿ ಆದೇಶ

SIDDARAMAIAH 3

ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ ಏಳು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ 2005-07 ಮತ್ತು ಆಗಿನ ಜೆಡಿ ಸರ್ಕಾರದಲ್ಲಿ 1995-2000 ವರೆಗೆ. 1995 ಮತ್ತು 1996 ರಲ್ಲಿ ಹೆಚ್.ಡಿ. ದೇವೇಗೌಡರ ಅಡಿಯಲ್ಲಿ ಎರಡು ಬಾರಿ. 1997, 1998 ಮತ್ತು 1999 ರಲ್ಲಿ ಜೆ.ಹೆಚ್. ಪಟೇಲ್ ಅವರ ಅಡಿಯಲ್ಲಿ ಮೂರು ಬಾರಿ. 2005 ಮತ್ತು 2006 ರಲ್ಲಿ ಎನ್. ಧರಂ ಸಿಂಗ್ ನೇತೃತ್ವದಲ್ಲಿ ಬಜೆಟ್ ಮಂಡಿಸಿದ್ದಾರೆ.

SIDDARAMAIAH BUDGET

2013ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಆಗ ಹಣಕಾಸು ಖಾತೆಯನ್ನೂ ಹೊಂದಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸತತ 6 ಬಜೆಟ್ ಮಂಡಿಸಿದ್ದಾರೆ. ಇಲ್ಲಿಯವರೆಗೂ ಸಿದ್ದರಾಮಯ್ಯ ಅವರು ಬರೋಬ್ಬರಿ 13 ಬಜೆಟ್‌ಗಳನ್ನು ಮಂಡಿಸಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದೀಗ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಅವರು 14ನೇ ಬಾರಿ ಬಜೆಟ್ ಮಂಡಿಸಲು ಉತ್ಸುಕರಾಗಿದ್ದಾರೆ.

Share This Article