Karnataka State Budget 2024- ರಾಜ್ಯ ಬಜೆಟ್ ನಲ್ಲಿ ಬಸವಣ್ಣ: ಸಾಂಸ್ಕೃತಿಕ ನಾಯಕನಿಗೆ ಜೈಕಾರ

Public TV
1 Min Read
Basavanna

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2024-25ನೇ ಸಾಲಿನ ಬಜೆಟ್ (Karnataka State Budget 2024) ನಲ್ಲಿ ವಿಶ್ವಗುರು ಬಸವಣ್ಣ (Basavanna)ನವರ ಹೆಸರಿನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಬೆನ್ನಲ್ಲೇ ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

cm siddaramaiah

12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಲಿಂಗ ಸಮಾನತೆಗಾಗಿ ಮತ್ತು ವರ್ಗಬೇಧ ಹಾಗೂ ವರ್ಣಬೇಧ ವಿರುದ್ಧವಾಗಿ ಶೋಷಿತ ವರ್ಗದ ಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ, ಸಮಾಜೋಧಾರ್ಮಿಕ ಕ್ರಾಂತಿಯನ್ನು ಮಾಡಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಪ್ರಜಾ ಪ್ರಭುತ್ವಕ್ಕೆ ಅನುಭವ ಮಂಟಪ ಸ್ಥಾಪನೆ ಮೂಲಕ ಬುನಾದಿಯನ್ನು ಶ್ರೀ ಬಸವೇಶ್ವರರು ಹಾಕಿರುವುದು ಕನ್ನಡಿಗರು ಮತ್ತು ಭಾರತೀಯರಿಗೆ ಹೆಮ್ಮೆಯಾಗಿದೆ. ಇಂತಹ ಅಪೂರ್ವ ವ್ಯಕ್ತಿತ್ವದ ವಿಶ್ವಗುರು ಜಗಜ್ಯೋತಿ ಬಸವೇಶ್ವರನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿರುವ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಭಾವಚಿತ್ರದಲ್ಲಿ ವಿಶ್ವಗುರು ಬಸವಣ್ಣ- ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲಾಗುವುದು.

Siddaramaiah 03

12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದವರು. ಇವರು ತಮ್ಮ ವಚನ ಸಾಹಿತ್ಯದ ಮೂಲಕ ಕಾಯಕ –ದಾಸೋಹದ ತತ್ವವನ್ನು ಪ್ರಸಾರ ಮಾಡಿದವರು. ಈ ಹಿನ್ನೆಲೆಯಲ್ಲಿ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ ಮತ್ತು ವಚನ ಸಾಹಿತ್ಯ ಕುರಿತು ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

Siddaramaiah 02

ಬಸವಣ್ಣನವರ ಬದುಕು, ಸಂದೇಶ, ಚಿಂತನೆಯನ್ನು ವ್ಯಾಪಕವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಸರ್ವ ಧರ್ಮ ಸಂಸತ್ತನ್ನು ಬಸವ ಜಯಂತಿಯಂದು ಆಯೋಜಿಸಲಾಗುವುದು. ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು. ಬಸವಣ್ಣ ಹಾಗೂ ಇತರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ/ ವಚನ ಮಂಟಪವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು.

ಬಸವಣ್ಣನವರ ಹೆಸರಿನಲ್ಲಿ ಇಷ್ಟೆಲ್ಲ ಆಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.

Share This Article