ಬೆಂಗಳೂರು: ಕಾಂಗ್ರೆಸ್, ಸಮಾಜವಾದಿ, ಡಿಎಂಕೆ, ಆರ್.ಜೆ.ಡಿ., ಜನತಾದಳದಂಥ ಪಕ್ಷಗಳಲ್ಲಿ ಯಾರೂ ಪ್ರಧಾನಿಯಾಗಲು, ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷರಾಗಲೂ ಸಾಧ್ಯವಿಲ್ಲ. ಇಂತಹ ಪಕ್ಷಗಳಲ್ಲಿ ಕುಟುಂಬದ ಸದಸ್ಯರಷ್ಟೇ ಅಧಿಕಾರ ಅನುಭವಿಸಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.
Advertisement
ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ಖಾಸಗಿ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಬೇರೆ ಪಕ್ಷಗಳಿಂದ ಹೇಗೆ ಭಿನ್ನವಾಗಿದ್ದೇವೆ ಎಂಬುದನ್ನು ಅರಿಯಬೇಕು. ಕೇವಲ ಬಿಜೆಪಿ ಎಲ್ಲಾ ಪಕ್ಷಗಳಿಗಿಂತ ಶ್ರೇಷ್ಠ ಮತ್ತು ಮಹತ್ವದ್ದಾಗಿದೆ. ಬೇರೆ ಪಕ್ಷಗಳಲ್ಲಿ ರಾಜಕೀಯ ಸಂಘಟನೆ ಬಿಜೆಪಿಯಂತಿಲ್ಲ. ಅನ್ಯ ಪಕ್ಷಗಳಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಅನಿವಾರ್ಯ ಮತ್ತು ಅತ್ಯಗತ್ಯ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲೂ ಪಕ್ಷಕ್ಕಾಗಿ ದುಡಿಯುವವರು ನಮ್ಮ ಬಿಜೆಪಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿಯ ವೈಶಿಷ್ಟ್ಯವನ್ನು ಅರಿಯಬೇಕು ಎಂದು ಅವರು ನುಡಿದರು. ಇದನ್ನೂ ಓದಿ: 777 ಚಾರ್ಲಿ ಸಿನಿಮಾಗೆ 6 ತಿಂಗಳ ತೆರಿಗೆ ವಿನಾಯಿತಿ
Advertisement
Advertisement
ಬಿಜೆಪಿ ಇಡೀ ವಿಶ್ವದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ವಿಶೇಷತೆಯನ್ನು ಅರಿತು ನಡೆಯಬೇಕಿದೆ. ಬಿಜೆಪಿ ಎಲ್ಲರನ್ನೂ ಪರಿಗಣಿಸುತ್ತದೆ. ಎಲ್ಲಾ ಕಾರ್ಯಕರ್ತರ ಬಗ್ಗೆ ಪಕ್ಷಕ್ಕೆ ಮಾಹಿತಿಯಿದೆ. ಬಿಜೆಪಿಯೆನ್ನುವುದು ಎನ್ಸೈಕ್ಲೋಪೀಡಿಯಾ ಇದ್ದಂತೆ. ಎಲ್ಲರ ಬಗ್ಗೆಯೂ ಮಾಹಿತಿ ಇಟ್ಟುಕೊಂಡಿದೆ. ಎಲ್ಲಿ ಬಿಜೆಪಿಯ ಅವಶ್ಯಕತೆಯಿದೆಯೋ ಅಲ್ಲಿ ಬಿಜೆಪಿ ಧಾವಿಸುತ್ತದೆ. ಕಲಿಯುವಿಕೆ ಎನ್ನುವುದು ಜೀವನದ ಪ್ರತಿ ದಿನದಲ್ಲಿಯೂ ಇರುತ್ತದೆ. ಹೀಗಾಗಿ ಕಲಿಯಲು ಯಾರೂ ಹಿಂದೇಟು ಹಾಕಬೇಡಿ. ತರಬೇತಿ ಎನ್ನುವುದು ಕಲಿಯುವಿಕೆ ಎನ್ನುವುದು ಬಿಜೆಪಿಯಲ್ಲಿ ಇದ್ದೇ ಇದೆ. ಹೊಸ ವಿಷಯಗಳ ಕಲಿಯುವಿಕೆ ಪಕ್ಷದಲ್ಲಿ ಇದ್ದೇ ಇದೆ. ಸಣ್ಣ ಸಣ್ಣ ಆಸಕ್ತಿಗಳೇ ಮನುಷ್ಯನನ್ನು ಮನಸನ್ನು ಪ್ರೇರೇಪಿಸುತ್ತವೆ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ದೇಶಭಕ್ತಿ ಇರೋರು ಸೇನೆ ಸೇರ್ತಾರೆ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ: ಸಿ.ಟಿ ರವಿ
Advertisement
ಉತ್ತಮ ನಡವಳಿಕೆ ಎನ್ನುವುದು ಬಹಳ ಮುಖ್ಯ. ಕರ್ನಾಟಕದ ಬಗ್ಗೆಯೂ ನನಗೆ ಮಾಹಿತಿಯಿದೆ. ತರಬೇತಿ ಎನ್ನುವುದು ತಿಳಿಯುವಿಕೆಯ ಭಾಗವಾಗಿದೆ. ಯಾರೂ ತಿಳಿಯುತ್ತಾರೋ ಕಲಿಯುತ್ತಾರೋ ಅವರು ಮುಂದೆ ಬರುತ್ತಾರೆ. ಪ್ರತಿ ಜನಪ್ರತಿನಿಧಿಯೂ ಕಾರ್ಯಕರ್ತನಾಗಿರುತ್ತಾನೆ. ಎಲ್ಲರೂ ಕಲಿಯಲೇಬೇಕು. ಎಷ್ಟೇ ತಿಳಿದರೂ ಕಡಿಮೆಯೇ ಎಂಬ ಮನಸ್ಥಿತಿ ಇರಲಿ. ಹೀಗಾಗಿ ಎಲ್ಲಾ ಕ್ಷೇತ್ರಗಳ ಬಗ್ಗೆ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ಅರಿವು ಇರಬೇಕು. ಪಕ್ಷದ ವಿಷಯಗಳನ್ನು ಸಾಧನೆಗಳನ್ನು ಎಲ್ಲರೂ ಸರಳರೂಪದಲ್ಲಿ ತಮ್ಮದೇ ಭಾಷೆಯಲ್ಲಿ ಜನರ ಮುಂದೆ ಇಡುವ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಸಾಧರಣ ವ್ಯಕ್ತಿಗೆ ತಿಳಿಸಲು ಸರಳ ಭಾಷೆಯೇ ಉತ್ತಮ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದನ್ನು ಅರಿತು ಜನರಿಗೆ ತಿಳಿ ಹೇಳಬೇಕು. ರಾಜಕೀಯ ಕಾರ್ಯಕರ್ತರು ಸದಾ ಜಾಗೃತಾವಸ್ಥೆಯಲ್ಲಿರಬೇಕು. ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ, ವಾತಾವರಣ ಹೇಗಿದೆ, ವಿಪಕ್ಷಗಳ ಬಗ್ಗೆ ಏನು ಮಾಹಿತಿ ಇದೆ ಎಂಬುದನ್ನು ಅರಿತಿರಬೇಕಾದ ಕುತೂಹಲ ಪ್ರವೃತ್ತಿ ಮತ್ತು ಜವಾಬ್ದಾರಿ ಇರಲೇಬೇಕು. ಪ್ರತಿಯೊಬ್ಬರು ಪಕ್ಷಕ್ಕಾಗಿ, ಪಕ್ಷ ಸಂಘಟನೆಗಾಗಿ ಎಷ್ಟು ಕಾರ್ಯಕರ್ತರು ತಮ್ಮ ಬಳಿಯಿದ್ದಾರೆ ಎಂದು ವೈಯಕ್ತಿಕವಾಗಿ ಮನಸಿನಲ್ಲಿ ಅವಲೋಕನ ಮಾಡಿಕೊಳ್ಳಿ ಎಂದು ಎಂದು ಕರೆ ನೀಡಿದರು. ಇದನ್ನೂ ಓದಿ: ವೇದಿಕೆಯಲ್ಲೇ ಪರಿಷ್ಕೃತ ಪಠ್ಯಪುಸ್ತಕದ ಪ್ರತಿ ಹರಿದು ಹಾಕಿದ ಡಿಕೆಶಿ
ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರೆಂಬುದನ್ನು ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ರಾಜಕೀಯ ಕಾರ್ಯಕರ್ತರ ಜೀವನ ಪಕ್ಷವಾಗಬೇಕು. ತಮ್ಮತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಅರಿತಿರಬೇಕು. ಕಾರ್ಯಕರ್ತರು ಸದಾ ಸಕ್ರಿಯರಾಗಿರಬೇಕು. ನಮ್ಮ ಪರಿಚಯವೇನೆಂಬುದು ಕೇಳಿದರೆ ಅದು ಬಿಜೆಪಿಯಾಗಬೇಕು. ಎಲ್ಲರ ಜಾತಿ ಬಿಜೆಪಿಯಾಗಬೇಕು. ಇಂತಹ ಅಭ್ಯಾಸ ರೂಢಿಸಿಕೊಳ್ಳಬೇಕು. ಬಿಜೆಪಿ ಎನ್ನುವ ಜಾತಿಯೊಂದಿಗೆ ಎಲ್ಲರೂ ತಮ್ಮನ್ನು ಜೋಡಿಸಿಕೊಳ್ಳಬೇಕು. ಎಲ್ಲರ ಜಾತಿಯೇ ಬಿಜೆಪಿಯೇ ಆಗಬೇಕು. ನಾವು ವಿಶೇಷ ಚಿಕಿತ್ಸೆ ನೀಡುವುದಿಲ್ಲ. ನಮ್ಮ ಜಾತಿಯ ವ್ಯಕ್ತಿ ಬಿಜೆಪಿಯಲ್ಲಿದ್ದಾನೆ ಎಂಬ ಹೆಮ್ಮೆ ಜಾತಿ ಸಮುದಾಯದಲ್ಲಿ ಬರಬೇಕು. ಹಿಂದುಳಿದ ವರ್ಗಗಳ ಸಮುದಾಯ ಬಹಳ ದೊಡ್ಡ ಸಮುದಾಯವಾಗಿದೆ. ಈ ವರ್ಗದಿಂದ ಯಾರೊಬ್ಬರೂ ಬಿಜೆಪಿಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಹಿಂದುಳಿದ ಜಾತಿಗಳ ಪ್ರಭಾವಿ ಯಾರು? ನಾಯಕ ಯಾರು? ಎಂಬುದನ್ನು ತಿಳಿಯಬೇಕು. ನಮ್ಮ ನಮ್ಮಲ್ಲಿ ಜಾತಿ ದ್ವೇಷ ಬರಬಾರದು. ಎಲ್ಲಾ ಜಾತಿಗಳ ಪ್ರಭಾವಿಗಳು ನಾಯಕರು ಬಿಜೆಪಿಯಾಗಬೇಕು. ಸಣ್ಣ ಸಣ್ಣ ಮಾತುಗಳನ್ನು ಆಡುವವರು ಸಣ್ಣದಾಗಿಯೇ ಇದ್ದು ವ್ಯರ್ಥ ಉತ್ಪನ್ನಗಳಾಗಿ ಉಳಿದುಬಿಡುತ್ತಾರೆ. ಪ್ರಧಾನ ಮಂತ್ರಿಗಳು ಒಂದೊಂದು ವಿಷಯವನ್ನು ಒಂದೊಂದು ಸಮುದಾಯ ಒಂದೊಂದು ಜಾತಿಯನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಒಗ್ಗೂಡಿಸಿ ಸುಂದರ ಪುಷ್ಪಗುಚ್ಛವನ್ನು ತಯಾರು ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಪಕ್ಷ ಸಂಘಟನೆಯತ್ತ ಗಮನ ಕೇಂದ್ರೀಕರಿಸಬೇಕು ಎಂದು ನುಡಿದರು.
ಒಂದು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರೊಂದಿಗೂ ಮಾತನಾಡದೇ ಏಕಾಗ್ರತೆಯಿಂದ ನಮ್ಮ ಆರ್ಥಿಕತೆ ಸ್ಥಿತಿಯೇನಿದೆ? ನಮ್ಮ ಅಭಿವೃದ್ಧಿ ಏನಾಗಿದೆ? ನಾವೆಲ್ಲಿದ್ದೇವೆ? ನಾವು ಎಷ್ಟು ಕಾಲಾವಧಿಯಲ್ಲಿ ಎಲ್ಲಿಗೆ ಹೋಗಬೇಕು ಎಂಬುದನ್ನು ಚಿಂತನೆ ಮಾಡಬೇಕು. ಎಲ್ಲಾ ಜಾತಿಗಳ ನಾಯಕರ ಬಗ್ಗೆ ಪಟ್ಟಿ ಮಾಡಿ ಇದನ್ನು ದ್ವಿಗುಣಗೊಳಿಸಲು ದುಡಿಯಬೇಕು. ನಮ್ಮ ಸಂಘಟನೆ ಎಷ್ಟು ದೊಡ್ಡದಾಗಿದೆ ಎಂದರೆ ಪಕ್ಷಕ್ಕಾಗಿ ನನ್ನ ಕೊಡುಗೆ ಏನು ಎಂಬುದನ್ನೇ ಮರೆತುಬಿಡುವಂತಾಗಿದೆ. ಬಿಜೆಪಿ ಅಷ್ಟೊಂದು ವಿಶಾಲವಾಗಿ ಬೆಳೆದಿದೆ. ಕಳೆದ ಮೂರು ದಿನಗಳಿಂದ ತರಬೇತಿ ಕೇಂದ್ರದಲ್ಲಿ ಬಿಜೆಪಿ ಸಂಘಟನೆ ಬಗ್ಗೆ ಚರ್ಚಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೊಡುಗೆಗಳ ಬಗ್ಗೆ ಚರ್ಚಿಸಲಾಗಿದೆ. ಇದರೊಂದಿಗೆ ನರೇಂದ್ರ ಮೋದಿಯವರ 8 ವರ್ಷಗಳ ಸಾಧನೆ ಬಗ್ಗೆಯೂ ತರಬೇತಿ ಸಭೆಗಳಲ್ಲಿ ಚರ್ಚಿಸಲಾಗಿದೆ ಎಂದು ಜೆ.ಪಿ.ನಡ್ಡಾ ಹೇಳಿದರು.
ಕರ್ನಾಟಕದ ಭೂಮಿಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ಹಾಸ್ಟೆಲ್‍ಗಳು, ಪ್ರತ್ಯೇಕ ವಸತಿ ಶಾಲೆಗಳು, ಉದ್ಯೋಗ ನೀಡುವಂತಾಗಬೇಕು. ಇದನ್ನು ಬಿಜೆಪಿ ಸರ್ಕಾರ ಮಾಡುತ್ತದೆ. ಪ್ರತಿಯೊಂದು ಪ್ರದೇಶಗಳ ಒಬಿಸಿ ಬಗ್ಗೆ ಎಲ್ಲಾ ಪ್ರದೇಶಗಳಿಗೂ ತಿಳಿದಿರಬೇಕು. ಹೀಗಾಗಿ ದೇಶದ ಪ್ರತಿಯೊಂದು ಪ್ರದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಆದ ಕೆಲಸಗಳ ಮಾಹಿತಿ ನೀಡುವಂತೆ ರಾಷ್ಟ್ರೀಯ ಒಬಿಸಿ ಮೋರ್ಚಾದ ಅಧ್ಯಕ್ಷ ಡಾ.ಲಕ್ಷ್ಮಣ್ ಅವರಿಗೆ ನಡ್ಡಾ ಅವರು ಸೂಚಿಸಿದರು.
ಸಾಮಾಜಿಕ ನ್ಯಾಯವಷ್ಟೇ ಅಲ್ಲ, ಸಾಮಾಜಿಕ ಅವಕಾಶ ನೀಡುವಂತಾಗಬೇಕು. ಬೊಮ್ಮಾಯಿ ಅವರ ಸರ್ಕಾರ ಸಾಮಾಜಿಕ ನ್ಯಾಯವಷ್ಟೇ ಅಲ್ಲ, ಸಾಮಾಜಿಕ ಅವಕಾಶವನ್ನೂ ನೀಡಿದೆ. ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆ ಭಾರತದ ಬಡತನರೇಖೆಗಿಂತ ಕೆಳಗಿನ ಮಟ್ಟ 22% ಇಂದ 10%ಕ್ಕೆ ಕಡಿಮೆಯಾಗಿದೆ. ಕೋವಿಡ್ ಕಾಲದಲ್ಲಿಯೂ ಸರ್ಕಾರ ಮಾಡಿದ ಸಾಧನೆ ಸೇರಿದಂತೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಎಲ್ಲಾ ನಾಯಕರು ಇಡಬೇಕು ಎಂದರು.
ಸಮಾರೋಪ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್, ರಾಜ್ಯದ ಸಚಿವರು, ಆಹ್ವಾನಿತ ಪ್ರತಿನಿಧಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.