ಜೆಡಿಎಸ್, ಕಾಂಗ್ರೆಸ್ ಮೈತ್ರಿ: 2019ರಲ್ಲಿ ಮೋದಿಗೆ ಹಿನ್ನಡೆ ಆಗುತ್ತಾ? ರಾಜಕೀಯ ಲೆಕ್ಕಾಚಾರ ಹೇಗೆ?

Public TV
3 Min Read
modi rahul hdk sonia karnataka

ಬೆಂಗಳೂರು: 2019ರ ಲೋಕಸಭಾ ಚುನಾವಣೆ ಮೋದಿಯನ್ನು ಮಣಿಸಲು ವಿರೋಧ ಪಕ್ಷಗಳು ಮಹಾಮೈತ್ರಿಗೆ ಕರೆ ನೀಡಿದ ಪರಿಣಾಮ ದಕ್ಷಿಣ ಭಾರತದಲ್ಲಿ ಕರ್ನಾಟಕದ ಮೂಲಕ ಪ್ರವೇಶಿಸಲು ಮುಂದಾಗಿದ್ದ ಬಿಜೆಪಿಯ ಬಾಗಿಲು ಬಂದ್ ಆಗಿದೆ. ಬಿಜೆಪಿಗೆ ಅಧಿಕಾರ ತಪ್ಪಿಸಲು ಜೆಡಿಎಸ್ ಕಾಂಗ್ರೆಸ್ ತೆಗೆದುಕೊಂಡ ರಾಜಕೀಯ ನಡೆ 2019ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿಯ ಶಕ್ತಿಯನ್ನು ಕುಂದಿಸುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಹೌದು, ಇಲ್ಲಿಯವರೆಗೆ ಹಳೆ ಮೈಸೂರಿನಲ್ಲಿ ಜಾಸ್ತಿ ಪ್ರಭಾವ ಹೊಂದಿದ್ದ ಜೆಡಿಎಸ್ ಈಗ ಸರ್ಕಾರ ರಚಿಸಿದ ಪರಿಣಾಮ ಮುಂದೆ ರಾಜ್ಯವ್ಯಾಪಿ ತನ್ನ ಬಲವನ್ನು ವಿಸ್ತರಿಸುತ್ತಾ? ಕಾಂಗ್ರೆಸ್ ಶಕ್ತಿಯನ್ನು ಕಡಿಮೆ ಮಾಡುತ್ತಾ? ಅಥವಾ ಲೋಕಸಭಾ ಚುನಾವಣೆಯಲ್ಲಿ ಈ ಎರಡು ಪಕ್ಷಗಳು ಬಿಜೆಪಿಯನ್ನು ಸೋಲಿಸುತ್ತಾ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಭದ್ರ ನೆಲೆ ಇರುವುದು ಕರ್ನಾಟಕದಲ್ಲಿ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಜೊತೆ ಚುನಾವಣಾ ಪೂರ್ವಮೈತ್ರಿ ಮಾಡಿಕೊಂಡರೆ ಒಟ್ಟು 28 ಕ್ಷೇತ್ರಗಳಿರುವ ಕರ್ನಾಟಕದಲ್ಲಿ ಬಿಜೆಪಿಗೆ ಬಲವಾದ ಹೊಡೆತ ಬೀಳುವ ಸಾಧ್ಯತೆಯಿದೆ. ಯಾಕೆಂದರೆ ಮೂರು ಲೋಕಸಭಾ ಚುನಾವಣೆಯ ಮತಗಳಿಕೆಯ ಪ್ರಮಾಣವನ್ನು ತೆಗೆದುಕೊಂಡು ದಳ ಮತ್ತು ಕಾಂಗ್ರೆಸ್ ಮತವನ್ನು ಸೇರಿಸಿದರೆ 50%ಕ್ಕೂ ಹೆಚ್ಚು ಮತಗಳು ಆಗುತ್ತದೆ. ಒಂದು ವೇಳೆ ಮಾತುಕತೆ ಯಶಸ್ವಿಯಾಗಿ ಈ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

rahul gandhi hd kumaraswamy

ಲೆಕ್ಕಾಚಾರ ಹೇಗೆ?
2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18, ಕಾಂಗ್ರೆಸ್ 8, ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ ಬಿಜೆಪಿಗೆ 34.8% ಮತ, ಕಾಂಗ್ರೆಸ್ 36.8% ಮತಗಳನ್ನು ಪಡೆದರೆ ಜೆಡಿಎಸ್ 20.4% ಮತವನ್ನು ಪಡೆದಿತ್ತು.

2009ರ ಚುನಾವಣೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 3 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ 41.6%, ಕಾಂಗ್ರೆಸ್ 37.6%, ಜೆಡಿಎಸ್‍ಗೆ 13.6% ಮತ ಬಿದ್ದಿತ್ತು.

ಇನ್ನು 2014ರಲ್ಲಿ ಮೋದಿ ಅಲೆಯಿಂದಾಗಿ ಬಿಜೆಪಿ ಅತಿ ಹೆಚ್ಚು ಸ್ಥಾನವನ್ನು ಗೆದ್ದರೂ 2009ಕ್ಕೆ ಹೋಲಿಸಿದರೆ 2 ಸ್ಥಾನ ಕಡಿಮೆ ಗೆದ್ದುಕೊಂಡಿತ್ತು. ಬಿಜೆಪಿ 17, ಕಾಂಗ್ರೆಸ್, 9 ಜೆಡಿಎಸ್ 2 ಕ್ಷೇತ್ರಗಳಲ್ಲಿ ವಿಜಯದ ನಗೆ ಬೀರಿತ್ತು. ಬಿಜೆಪಿಗೆ 43.4% ಮತ ಬಿದ್ದಿದ್ದರೆ, ಕಾಂಗ್ರೆಸ್ 41.2%, ಜೆಡಿಎಸ್‍ಗೆ 11.1% ಮತಗಳು ಬಿದ್ದಿತ್ತು.

ಒಂದು ವೇಳೆ ಮೈತ್ರಿ ನಡೆದು ಈ ಲೆಕ್ಕಾಚಾರದ ಪ್ರಕಾರ ಮತ ಬಿದ್ದರೆ ಬಿಜೆಪಿ ಭಾರೀ ಹೊಡೆತ ಬೀಳುವುದು ನಿಶ್ಚಿತ. ಆದರೆ ಈ ಮೈತ್ರಿ ಹೇಳಿದಷ್ಟು ಸುಲಭವೇ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಇಲ್ಲ ಎನ್ನುವ ಉತ್ತರ ಸಿಗುತ್ತದೆ.

ಯಾಕೆ ಕಷ್ಟ?
ಮಂಡ್ಯ, ಮೈಸೂರಿನಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಕಾರಣ ಕಾಂಗ್ರೆಸ್ ಈ ಕ್ಷೇತ್ರಗಳನ್ನು ಬಿಟ್ಟುಕೊಡಬಹುದು. ಆದರೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಬಲಿಷ್ಟವಾಗಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿರಂತರವಾಗಿ ಗೆಲ್ಲುತ್ತಿರುವ ಕಾರಣ ಈ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡುವ ಸಾಧ್ಯತೆ ಕಡಿಮೆ.

ಹಳೆ ಮೈಸೂರು ಭಾಗದ ಜೊತೆ ರಾಯಚೂರು, ವಿಜಯಪುರದಲ್ಲಿ ಜೆಡಿಎಸ್ ಬಲವಾಗಿದ್ದರೂ ಕಾಂಗ್ರೆಸ್ ಅಷ್ಟೇ ಪ್ರಬಲವಾಗಿದೆ. ಹೀಗಾಗಿ ಮೈತ್ರಿಗೆ ಇಲ್ಲಿನ ಸ್ಥಳೀಯ ನಾಯಕರ ಪ್ರಭಾವವು ಇರುತ್ತದೆ. ಒಂದು ವೇಳೆ ಎರಡು ಪಕ್ಷಗಳ ಮಾತುಕತೆ ಯಶಸ್ವಿಯಾಗಿ ಸ್ಥಾನ ಹಂಚಿಕೆಯಾದಲ್ಲಿ ಮೋದಿಗೆ ಹಿನ್ನಡೆಯಾಗಬಹುದು ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

Modi 1

ಏನು ಆಗಲ್ಲ:
ಈ ವಿಧಾನಸಭಾ ಚುನಾವಣೆಯಲ್ಲಿ ಜನ ಸಿದ್ದರಾಮಯ್ಯನವರ ಆಡಳಿತದಿಂದ ರೋಸಿ ಹೋಗಿ ಜನ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಹೊರತು ಬಿಜೆಪಿ ವಿರುದ್ಧದ ದ್ವೇಷದಿಂದ ಅಲ್ಲ. ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷವನ್ನು ಕರ್ನಾಟಕದ ಜನ ಒಪ್ಪುತ್ತಾರೆ ಎನ್ನುವುದು ಶುದ್ಧ ಸುಳ್ಳು. ಈ ವಾದವನ್ನು ಮುಂದಿಟ್ಟರೆ 2014ರಲ್ಲೂ ಇಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನವನ್ನು ಗೆಲ್ಲಬೇಕಿತ್ತು. ಸದ್ಯ ವಿರೋಧ ಪಕ್ಷಗಳಲ್ಲಿ ಮೋದಿಗೆ ಸರಿಸಮಾನವಾದ ನಾಯಕರಿಲ್ಲ. ಸಂಪುಟ ರಚನೆಯಾಗುವಾಗಲೇ ಭಿನ್ನಾಭಿಪ್ರಾಯಗಳು ಬಂದಿದ್ದು, ಅವರಿಗೆ ಅವರ ಶಾಸಕರ ಮೇಲೆ ನಂಬಿಕೆ ಇಲ್ಲದೇ ಅವರನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದಾರೆ. ಹೀಗಿರುವಾಗ ಸರ್ಕಾರ ಒಂದು ವರ್ಷ ಪೂರೈಸುತ್ತದೆ ಎನ್ನುವ ನಂಬಿಕೆಯೇ ನಮಗಿಲ್ಲ. 2019ರ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

dks hdk congress jds

Share This Article
Leave a Comment

Leave a Reply

Your email address will not be published. Required fields are marked *