– ನಂಜನಗೂಡಿನ ವ್ಯಕ್ತಿಗೆ ಕೊರೊನಾ
– ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 55ಕ್ಕೆ ಏರಿಕೆ
ಬೆಂಗಳೂರು: ಇಲ್ಲಿಯವರೆಗೆ ಕರ್ನಾಟಕದಲ್ಲಿ ವಿದೇಶಕ್ಕೆ ತೆರಳಿದದವರಿಗೆ ಮತ್ತು ಅವರ ಜೊತೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಕೊರೊನಾ ಬಂದಿತ್ತು. ಆದರೆ ಈಗ ಯಾರ ಸಂಪರ್ಕಕ್ಕೆ ಸಿಗದ ವ್ಯಕ್ತಿಗೆ ಕೊರೊನಾ ಬಂದಿದೆ.
ಇಂದು ಮಧ್ಯಾಹ್ನ ಸರ್ಕಾರ ಬಿಡುಗಡೆ ಮಾಡಿದ ವರದಿ ಪ್ರಕಾರ 4 ಜನರಲ್ಲಿ ಹೊಸದಾಗಿ ಕೊರೊನಾ ಪತ್ತೆಯಾಗಿದೆ. ಈ ಪೈಕಿ ರೋಗಿ 52 ಪ್ರಕರಣ ಶಾಕಿಂಗ್ ಆಗಿದ್ದು, ಈ ವ್ಯಕ್ತಿ ಯಾವೊಬ್ಬ ಕೊರೊನಾ ಪೀಡಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿಲ್ಲ. ಆದರೂ ಈ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ. ಇಂದು 4 ಹೊಸ ಪ್ರಕರಣದಿಂದಾಗಿ ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
Advertisement
ರೋಗಿ 52 – ಮೈಸೂರು ಜಿಲ್ಲೆಯ 35 ವರ್ಷದ ಪುರುಷನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಯಾವುದೇ ಹೊರಗಿನ ಪ್ರದೇಶಕ್ಕೆ ತೆರಳಿಲ್ಲ. ಜೊತೆಗೆ ಕೊರೊನಾ ಸೋಂಕು ಪಾಸಿಟಿವ್ ಇರುವ ವ್ಯಕ್ತಿಗಳ ಜೊತೆ ಸಂಪರ್ಕಕ್ಕೆ ಬಂದಿಲ್ಲ. ಈ ವ್ಯಕ್ತಿ ನಂಜನಗೂಡಿನಲ್ಲಿರುವ ಒಂದು ಔಷಧ ಉತ್ಪಾದನಾ ಕೈಗಾರಿಕೆಯ ಗುಣ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಂದರ್ಭದಲ್ಲಿ ಅನೇಕ ವೈದ್ಯಕೀಯ ತಂತ್ರಜ್ಞರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಅವರ ವಿವರದ ಬಗ್ಗೆ ವೈದ್ಯಕೀಯ ತನಿಖೆ ನಡೆಯುತ್ತಿದೆ. ಇಲ್ಲಿಯವರೆಗೆ ಏಳು ಜನ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಪತ್ತೆ ಮಾಡಿದ್ದು, ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.
Advertisement
ರೋಗಿ 53 – ಚಿಕ್ಕಬಳ್ಳಾಪುರದ ನಿವಾಸಿಯಾದ 70 ವಯಸ್ಸಿನ ಮಹಿಳೆಯೊಬ್ಬರು ಮೆಕ್ಕಾ, ಸೌದಿ ಅರೇಬಿಯಾಗೆ ಪ್ರಯಾಣ ಮಾಡಿ ಮಾರ್ಚ್ 14ರಂದು ಬೆಂಗಳೂರಿಗೆ ವಾಪಸ್ ಆಗಿದ್ದರು. ಅವರು ಮಾ.24 ರಂದು ಬೆಂಗಳೂರಿನ ನಿಯೋಜಿತ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಭಾರತ ಸರ್ಕರದ ಕೋವಿಡ್-19 ಮಾರ್ಗಸೂಚಿ ಅನ್ವಯ ಅಂತ್ಯ ಕ್ರಿಯೆಯನ್ನು ನಡೆಸಲಾಗಿದೆ.
Advertisement
ರೋಗಿ 54 – ಆಂಧ್ರ ಪ್ರದೇಶ ರಾಜ್ಯದ ಅನಂತಪುರ ನಿವಾಸಿಯಾದ 64 ವಯಸ್ಸಿನ ಪುರುಷರೊಬ್ಬರು ಫ್ರಾನ್ಸ್ ದೇಶಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆಯನ್ನು ಹೊಂದಿದ್ದಾರೆ. ಮಾರ್ಚ್ 1 ರಂದು ಭಾರತಕ್ಕೆ ವಾಪಸ್ ಆಗಿದ್ದಾರೆ. ನಂತರ ಅವರು ಹಿಮಾಚಲಪ್ರದೇಶ, ಪುಟಪರ್ತಿ ಮೂಲಕ ಮಾ. 21 ರಂದು ಬೆಂಗಳೂರಿಗೆ ಬಂದಿದ್ದಾರೆ. ಈ ಪ್ರಕರಣವನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ರೋಗಿ 55 – ಬೆಂಗಳೂರಿನ ನಿವಾಸಿಯಾದ 45 ವಯಸ್ಸಿನ ಪುರಷರೊಬ್ಬರಾಗಿದ್ದು, ರೋಗಿ 25ರ ಸಂಪರ್ಕ ಹೊಂದಿದ್ದರು. ಇವರು ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಈ ಪ್ರಕರಣವನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಬೆಂಗಳೂರು ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟು 55 ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, 3 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 51 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.