ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 20ಕ್ಕೆ ಏರಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಕರ್ನಾಟಕದಲ್ಲಿ 19 ಕೊರೊನಾ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದರು. ಆದರೆ ಸಂಜೆಯ ವೇಳೆ ಮೈಸೂರಿನಲ್ಲಿ ಮತ್ತೊಂದು ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಇಂದು ಒಂದೇ ದಿನ ರಾಜ್ಯದಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.
ಈ ವಿಚಾರವಾಗಿ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಅವರು, ಇಂದು ದುಬೈಗೆ ಹೋಗಿ ಅಲ್ಲಿಂದ ಗೋವಾಗೆ ಬಂದು ನಂತರ ಮೈಸೂರಿಗೆ ಬಂದ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಇಂದು ಒಂದೇ ದಿನವೇ 5 ಕೊರೊನಾ ಪ್ರಕರಣ ಪತ್ತೆಯಾದಂತಾಗಿದೆ. ಬೆಂಗಳೂರಿನಲ್ಲಿ 3 ಹಾಗೂ ಚಿಕ್ಕಬಳ್ಳಾಪುರದಲ್ಲಿ 1 ಮತ್ತು ಮೈಸೂರಿನಲ್ಲಿ 1 ಸೇರಿ ಒಟ್ಟು ಐದು ಪ್ರಕರಣಗಳು ಇಂದು ಕಂಡುಬಂದಿವೆ ಎಂದು ಹೇಳಿದರು.
ಒಟ್ಟು ರಾಜ್ಯದಲ್ಲಿ ದಾಖಲಾಗಿರುವ 20 ಕೊರೊನಾ ಪಾಸಿಟಿವ್ ಬಂದಿರುವವರಲ್ಲಿ ನಾಲ್ಕೈದು ಮಂದಿ ಗುಣಮುಖರಾಗಿದ್ದು, ಅವರು ಬುಧವಾರದಂದು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಇಂದು ಒಂದೇ ದಿನ ಐದು ಹೊಸ ಪ್ರಕರಣ ದಾಖಲಾಗಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಅವರು, ಜಿಲ್ಲೆಯ ಗೌರಿಬಿದನೂರಿನ ವ್ಯಕ್ತಿಗೆ ಸೋಂಕು ತಗುಲಿರುವ ದೃಢವಾಗಿದೆ. ಜೊತೆಗೆ ಅವರ ತಾಯಿಗೂ ಸೋಂಕು ಇರುವ ಬಗ್ಗೆ ಅನುಮಾನವಿದೆ. ಈಗ ಬಂದಿರುವ ಬೆಂಗಳೂರಿನ ಲ್ಯಾಬ್ ವರದಿ ಅವರಿಗೆ ಪ್ರಕಾರ ಪಾಸಿಟಿವ್ ಇದ್ದು, ಪುಣೆಯ ಲ್ಯಾಬ್ ವರದಿಗಾಗಿ ಕಾಯುತ್ತಿದ್ದೇವೆ. ಈ ವರದಿ ಸಂಜೆ ವೇಳೆಗೆ ಸಿಗಲಿದೆ. ಒಂದು ವೇಳೆ ಅವರ ತಾಯಿಗೂ ಸೋಂಕು ದೃಢವಾದರೆ ಕೊರೊನಾ ಪೀಡಿತರ ಸಂಖ್ಯೆ 20ಕ್ಕೆ ಏರಿಕೆಯಾಗಬಹುದು ಎಂದು ಹೇಳಿದ್ದರು.