ಅಭಿಮಾನಿಗಳ ಆರಾಧ್ಯ ದೈವ, ಸಾಹಸಸಿಂಹ ಬಿರುದಾಂಕಿತ ನಟ ದಿ. ಡಾ.ವಿಷ್ಣುವರ್ಧನ್‌ರಿಗೆ (Vishnuvardhan) ಮರಣೋತ್ತರ ʻಕರ್ನಾಟಕ ರತ್ನʼ ಪ್ರಶಸ್ತಿ (Karnataka Ratna Award) ನೀಡಬೇಕೆಂಬ ಒತ್ತಾಯ ಹೆಚ್ಚಾಗಿದೆ. ಬಹುಶಃ ನಾಳೆ (ಸೆ.4) ಈ ಕುರಿತು ಸರ್ಕಾರ ತೀರ್ಮಾನಿಸಿ, ನಾಳೆಯೇ ಘೋಷಣೆ ಮಾಡುವ ಸಾಧ್ಯತೆ ಇದೆ.
ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ವಿಷ್ಣುವರ್ಧನ್, ನಾಡು, ನುಡಿ, ಕಲೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಈ ಕಲಾವಿದನಿಗೆ ಗೌರವ ಸೂಚಕವಾಗಿ ʻಕರ್ನಾಟಕ ರತ್ನʼ ಪ್ರಶಸ್ತಿ ನೀಡುವಂತೆ ಹಿಂದಿನಿಂದಲೂ ಒತ್ತಾಯ ಕೇಳಿ ಬರುತ್ತಿತ್ತು. ಇದೀಗ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಹಾಗೂ ಅಳಿಯ ಅನಿರುದ್ಧ ಜಟ್ಕರ್ ಬುಧವಾರ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನ ಭೇಟಿಮಾಡಿ ಅಭಿಮಾನ್ ಸ್ಡುಡಿಯೋ ಜಾಗದ ವಿಚಾರ ಪ್ರಸ್ತಾಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ತಾರೆಯರ ಒತ್ತಾಯದ ಮೇರೆಗೆ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ʻಕರ್ನಾಟಕ ರತ್ನʼ ಕೊಡುವ ವಿಚಾರವನ್ನ ಸರ್ಕಾರ ಭಾರತಿಯವರ ಗಮನಕ್ಕೆ ತಂದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ
ಒಂದು ದಿನದ ಹಿಂದಷ್ಟೇ ಮಾಜಿ ಸಚಿವೆ ಜಯಮಾಲಾ, ಹಿರಿಯ ನಟಿ ಶ್ರುತಿ, ನಟಿ ಮಾಳವಿಕಾ ಅವಿನಾಶ್ ಸೇರಿ ಅನೇಕರು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ವಿಷ್ಣುವರ್ಧನ್ ಅವರಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಇದೇ ತಿಂಗಳು ಸೆ. 18ರಂದು ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವಿದೆ. ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಿಷ್ಣುವರ್ಧನ್ ಅವರಿಗೆ ಪ್ರಶಸ್ತಿ ಘೋಷಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಗ್ ಬಾಸ್ ಪ್ರೋಮೋ ರಿಲೀಸ್ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್
ನಟ ಅನಿರುದ್ಧ ಹೇಳಿದ್ದೇನು?
ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಅನಿರುದ್ಧ (Aniruddha Jatkar), ಅಭಿಮಾನ್ ಸ್ಟುಡಿಯೋದಲ್ಲಿರುವ 19 ಗುಂಟೆ ಜಾಗಕ್ಕಾಗಿ ಮನವಿ ಮಾಡಿದ್ದೇವೆ. ಆ ಜಾಗದಲ್ಲಿ ಮಂಟಪ ನಿರ್ಮಿಸಲು ಅನುಮತಿ ಕೊಡಿ ಎಂದು ಕೇಳಿದ್ದೇವೆ. ಹಿಂದೆ ಅಲ್ಲಿ ಮಂಟಪವನ್ನು ನಾವು ಕಟ್ಟಿದ್ವಿ. ಈಗಲೂ ಜಾಗ ಕೊಟ್ಟರೆ ನಾವೇ ಮಂಟಪ ಕಟ್ಟಿಕೊಳ್ತೇವೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೆಪ್ಟೆಂಬರ್ 18ರ ಒಳಗೆ ಜಾಗಕ್ಕೆ ಅನುಮತಿ ಸಿಗೋ ಸಾಧ್ಯತೆಯಿದೆ. ಅಲ್ಲದೇ ನಾಳೆಯ ಕ್ಯಾಬಿನೆಟ್‌ನಲ್ಲಿ ʻಕರ್ನಾಟಕ ರತ್ನʼದ ಬಗ್ಗೆ ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ. ನಾಳೆಯೇ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ