ಶಿವಮೊಗ್ಗ: ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಸಾಲ ವಸೂಲಿಗೆ ಬರುವ ಸಹಕಾರಿ ಸಂಸ್ಥೆಗಳ ಏಜೆನ್ಸಿಯವರನ್ನು ಗ್ರಾಮದಲ್ಲಿಯೇ ಕಟ್ಟಿ ಹಾಕುತ್ತೇವೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜನಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸಂಸ್ಥೆಗಳಿಂದ ರೈತರು ಪಡೆದ ಸಾಲಗಳನ್ನು ಸರ್ಕಾರ ಬಲವಂತವಾಗಿ ವಸೂಲಿ ಮಾಡಲು ಆದೇಶ ನೀಡಿದೆ. ಈ ಆದೇಶವನ್ನು ರೈತ ಸಂಘ ಖಂಡಿಸುತ್ತದೆ. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿರಬಹುದು. ಆದರೆ ಸಹಕಾರಿ ಸಂಸ್ಥೆಗಳು ಕಡ್ಡಾಯ ಸಾಲ ವಸೂಲಿ ಮಾಡಿದರೆ, ಸಾಲದ ಹಣಕ್ಕಾಗಿ ರೈತರ ಟ್ರ್ಯಾಕ್ಟರ್, ಟಿಲ್ಲರ್, ಜಪ್ತಿಗೆ ಬಂದರೆ ಅಂತಹವರನ್ನು ಕಟ್ಟಿ ಹಾಕುತ್ತೇವೆ. ಅಲ್ಲದೇ ಜಪ್ತಿ ಮಾಡಿದ್ದರೆ ಅದನ್ನು ಮರು ಜಪ್ತಿ ಮಾಡುತ್ತೇವೆ. ಹೀಗಾಗಿ ಸರ್ಕಾರ ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
Advertisement
Advertisement
ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಲೂ ಸಹಕಾರಿ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ದೀರ್ಘಾವಧಿ ಸಾಲಗಳಿಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಆದೇಶ ಹೊರಡಿಸಿದ್ದರು. ಆದರೆ ರೈತರು ಅಸಲು ಕೂಡ ಕಟ್ಟಲು ಸಾಧ್ಯವಾಗಲಿಲ್ಲ. ನಂತರ ಎಚ್.ಡಿ.ಕುಮಾರಸ್ವಾಮಿ ಸರಕಾರ ಬಂದಾಗ 1 ಲಕ್ಷದವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ ಈಗ ಅಸಲು ಮತ್ತು ಬಡ್ಡಿ ವಸೂಲಿಗೆ ಆದೇಶ ನೀಡಿರುವುದು ಖಂಡನೀಯ.
Advertisement
ರೈತರು ಮೊದಲೇ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಎರಡರಿಂದಲೂ ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಸುತ್ತೋಲೆ ಹಿಂಪಡೆದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.