ಬೆಂಗಳೂರು: ಕೊರೊನಾ ಆತಂಕದ ನಡುವೆ ಸೋಮವಾರ ವರುಣದೇವ ಅಬ್ಬರಿಸಿದ್ದಾರೆ. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಇಂದಿನಿಂದ ಎರಡು ದಿನ ಭಾರೀ ಮಳೆಯಾಗಲಿದ್ದು, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರಲ್ಲಿ ಸೋಮವಾರ ರಾತ್ರಿ ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ, ರಾಜಾಜಿನಗರ, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ನಗರದಲ್ಲಿ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Advertisement
Advertisement
ಚಾಮರಾಜನಗರದಲ್ಲಿ ರಾತ್ರಿ ಸುರಿದ ಮಳೆಗೆ ನೂರಾರು ಎಕರೆ ಬಾಳೆ ನೆಲಸಮವಾಗಿದೆ. ಹನೂರು ತಾಲೂಕಿನ ಮಿಣ್ಯ ಗ್ರಾಮದಲ್ಲಿ ಬೀಸಿದ ಭಾರೀ ಗಾಳಿಗೆ ಬಾಳೆ, ಟೊಮಟೋ ಬೆಳೆ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಮಂಡ್ಯ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಅಲ್ಲಲ್ಲಿ ವಿದ್ಯುತ್ ಕಡಿತವಾಗಿದೆ. ಮಳೆಯಿಂದ ರೈತರು ಸಂತಸಗೊಂಡಿದ್ದಾರೆ.
Advertisement
Advertisement
ಕಾಫಿನಾಡು ಚಿಕ್ಕಮಗಳೂರಲ್ಲೂ ವರುಣರಾಯ ಅಬ್ಬರಿಸಿದ್ದಾನೆ. ಗುಡುಗು-ಸಿಡಿಲಿನ ಕೂಡಿದ ಧಾರಾಕಾರ ಮಳೆಯಾಗಿದೆ. ಮಲೆನಾಡು ಭಾಗದಲ್ಲೂ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಇತ್ತ ಕೋಲಾರ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಬಯಲುಸೀಮೆಗೆ ವರುಣ ತಂಪೆರೆದಿದ್ದಾನೆ. ಕುಡಿಯಲು ನೀರು, ಮೇವು ಸಿಗದೇ ಕಂಗಾಲಾಗಿದ್ದ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.