ಬೆಂಗಳೂರು: ಜುಲೈ ಮೊದಲ ವಾರದಲ್ಲೇ ರಾಜ್ಯದಲ್ಲಿ ಭರ್ಜರಿ ಮುಂಗಾರು ಮಳೆಯ (Mansoon) ಆರ್ಭಟ ಜೋರಾಗಿದೆ. ಸಾಮಾನ್ಯವಾಗಿ 58 ಮಿಲಿಮೀಟರ್ ಮಲೆಯಾಗುತ್ತಿದ್ದ ಜುಲೈ ಮೊದಲವಾರದಲ್ಲಿ ಈ ಬಾರಿ 78 ಮಿಲಿಮೀಟರ್ ಮಳೆಯಾಗಿದೆ (Karnaraka Rains). ಇದು ಹಿಂದಿನ ಪ್ರಮಾಣಕ್ಕಿಂತ ಶೇ.25ಕ್ಕೂ ಹೆಚ್ಚಾಗಿದೆ.
ಅದರಲ್ಲೂ ಕರಾವಳಿ ಭಾಗದಲ್ಲಿ ಕಳೆದೊಂದು ವಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿದಿದೆ. ಕಳೆದ ಭಾನುವಾರ ಅಂತೂ, ರಾಜ್ಯದ ಕರಾವಳಿಯಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡದಲ್ಲಿ 264 ಮಿಲಿಮೀಟರ್, ಉಡುಪಿಯಲ್ಲಿ 210 ಮಿಲಿಮೀಟರ್, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ 168 ಮಿಲಿಮೀಟರ್ ಮಳೆಯಾಗಿದೆ. ಪರಿಣಾಮ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ನದಿ ತೊರೆಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಕಷ್ಟು ಅವಾಂತರಗಳು ಉಂಟಾಗಿವೆ. ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಪ್ರಕಟಿಸಲಾಗಿದ್ದು, ಹಲವು ತಾಲೂಕುಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಎಲ್ಲೆಲ್ಲಿ ಏನಾಯ್ತು?
* ಉಡುಪಿ ನಗರ ಜಲಾವೃತ: ಉಡುಪಿ ನಗರ ಜಲಾವೃತವಾಗಿದೆ. ಇಂದ್ರಾಣಿ ತೀರ್ಥ ನದಿ ಹರಿಯುವಲ್ಲೆಲ್ಲಾ ಜನಜೀವನ ಅಸ್ತವ್ಯಸ್ತವಾಗಿದೆ. ಮಗು, ವೃದ್ಧೆ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣ ಮಠ ಪಾರ್ಕಿಂಗ್ ಏರಿಯಾ ಜಲಾವೃತವಾಗಿದೆ.
* ರಸ್ತೆಗೆ ನುಗ್ಗಿದ ಮಳೆ ನೀರು: ಉಡುಪಿಯ ಮೂಡುಬೆಟ್ಟು-ಕೊಡವೂರು ರಸ್ತೆ ಜಲಾವೃತವಾಗಿದೆ. ಭಾರೀ ಮಳೆ ನೀರಿನ ನಡುವೆ ಖಾಸಗಿ ಬಸ್ಸು ಓಡಾಟ ನಡೆಸಿದೆ.
* ಹೊಟೆಲ್, ದೇಗುಲ ಜಲಾವೃತ: ಉಡುಪಿಯ ಕಡಿಯಾಳಿಯಲ್ಲಿರುವ ಹೋಟೆಲ್ ಒಳಗೆಲ್ಲಾ ನೀರು ನುಗ್ಗಿದೆ, ಮಠದ ಬೆಟ್ಟು ವ್ಯಾಪ್ತಿಯ ಬನ್ನಂಜೆ ಶನೇಶ್ವರ ಮಂದಿರ ಜಲಾವೃತವಾಗಿದೆ.
* ಬೋಟ್‌ಗಳಲ್ಲಿ ರಕ್ಷಣೆ: ಉಡುಪಿಯ ಚಕ್ರತೀರ್ಥ-ಸಗ್ರಿ-ಗುಂಡಿಬೈಲು-ಕಲ್ಸಂಕ ವ್ಯಾಪ್ತಿಯಲ್ಲಿ ಪ್ರವಾಹ ಸ್ಥಿತಿಯಿದೆ. ಬೋಟ್‌ಗಳ ಮೂಲಕ ಜನರ ರಕ್ಷಣೆ ಮಾಡಲಾಗ್ತಿದೆ. ಜನರ ಜೊತೆ ನಾಯಿ ಬೆಕ್ಕುಗಳನ್ನು ಕಾಪಾಡಲಾಗ್ತಿದೆ.
* ಮಣಿಪಾಲ ಜಲಾವೃತ: ಉಡುಪಿಯ ಮಣಿಪಾಲದ ರಸ್ತೆಗಳಲ್ಲಿ ನದಿಯಂತೆ ನೀರು ಹರಿದಿದೆ. ಹಲವು ಲೇಔಟ್‌ಗಳು ಜಲಾವೃತವಾಗಿವೆ.
* ಗುಂಡಬಾಳ ಪ್ರವಾಹ: ಹೊನ್ನಾವರದ ಗುಂಡಬಾಳ ನದಿ ಉಕ್ಕೇರಿದ್ದು, ನದಿಪಾತ್ರದ ತೋಟ-ಮನೆಗಳಿಗೆ ನೀರು ನುಗ್ಗಿದೆ.. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗ್ತಿದ್ದು, ಗುಡ್ಡೆಬಾಳೆ ಗ್ರಾಮದ ಜನ ಆತಂಕದಲ್ಲಿದ್ದಾರೆ.
* ರಕ್ಕಸ ಅಲೆಗಳಿಗೆ ಆಹುತಿ: ಅರಬ್ಬಿ ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಹೆಚ್ಚಿದ್ದು, ಅಂಕೋಲದ ತರಂಗಮೇಟ್ ಭಾಗದಲ್ಲಿ ಕಡಲ ಕೊರೆತದಿಂದ ತೆಂಗಿನ ಮರಗಳು ಉರುಳಿವೆ. ತಡೆಗೋಡೆ ಕೊಚ್ಚಿಹೋಗಿದೆ.
* ಕದ್ರಾ ಡ್ಯಾಂನಿಂದ ನೀರು ರಿಲೀಸ್: ಉತ್ತರ ಕನ್ನಡದ ಕದ್ರಾ ಡ್ಯಾಂ ಬಹುತೇಕ ಭರ್ತಿಯಾಗಿದ್ದು, 4 ಕ್ರಸ್ಟ್ ಗೇಟ್‌ಗಳ ಮೂಲಕ 10,600 ಕ್ಯೂಸೆಕ್ ನೀರನ್ನು ರಿಲೀಸ್ ಮಾಡಲಾಗ್ತಿದೆ.
ಮಲೆನಾಡಿನಲ್ಲೂ ನಿಲ್ಲದ ಮಳೆ:
ಬರೀ ಕರಾವಳಿ ಮಾತ್ರವಲ್ಲ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಹಲವೆಡೆ ಉತ್ತಮ ಮಳೆ ಬೀಳ್ತಿದೆ. ಶಿವಮೊಗ್ಗದಲ್ಲಿ 118 ಮಿಲಿಮೀಟರ್, ವಿಜಯಪುರದಲ್ಲಿ 89 ಮಿಲಿಮೀಟರ್, ಬೆಳಗಾವಿಯಲ್ಲಿ 87.5 ಮಿಲಿಮೀಟರ್, ಚಿಕ್ಕಮಗಳೂರಿನಲ್ಲಿ 67.5 ಮಿಲಿಮೀಟರ್, ಕೊಡಗಿನಲ್ಲಿ 58.5 ಮಿಲಿಮೀಟರ್ ಮಳೆಯಾಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಹಾರಂಗಿ ಜಲಾಶಯದ 4 ಕ್ರಸ್ಟ್ ಗೇಟ್ ಓಪನ್ ಮಾಡಿ, 1 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ.
ಇನ್ನೂ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಕಾರಣ ನದಿಗಳ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆ ಯಕ್ಸಾಂಬಾ ಬಳಿಯ ಮುಲ್ಲಾಣಕಿ ದರ್ಗಾಗೆ ದೂದ್‌ಗಂಗಾ ನೀರು ನುಗ್ಗಿದೆ. ಮಲ್ಲಿಕವಾಡ-ದತ್ತವಾಡ ಸಂಪರ್ಕ ಸೇತುವೆ ಸೇರಿ 5 ಸೇತುವೆಗಳು ಮುಳುಗಡೆಯಾಗಿದೆ. ಹಾಸನ, ಚಿಕ್ಕಮಗಳೂರಲ್ಲಿ ಧಾರಕಾರ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಉರುಳಿವೆ. ದಾವಣಗೆರೆಯಲ್ಲೂ ಮಳೆಯಾಗಿದೆ. ಇತ್ತ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಆಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.