ಬೆಂಗಳೂರು: ರಾಜ್ಯದ ಕರಾವಳಿ (Karavali), ಮಲೆನಾಡಲ್ಲಿ ವರುಣನ ಆರ್ಭಟ ಬಿಡುವಿಲ್ಲದೇ ಮುಂದುವರಿದಿದೆ. ಶಿರೂರಿನ ದುರಂತ ಸ್ಥಳದಲ್ಲಿ ಸತತ ಐದನೇ ದಿನವೂ ರಕ್ಷಣಾ ಕಾರ್ಯಚರಣೆ ನಡೆದಿದೆ. ಆದ್ರೆ, ಈವರೆಗೂ ಕೇರಳ. ತಮಿಳುನಾಡು ಮೂಲದ ಇಬ್ಬರು ಚಾಲಕರ ಸುಳಿವು ಸಿಕ್ಕಿಲ್ಲ. ರಾಡಾರ್ ಸಿಗ್ನಲ್ ಬಳಸಿಕೊಂಡು ಶೋಧ ಕಾರ್ಯ ನಡೆಸಲಾಗ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಕಾರಣ ಕೆಆರ್‌ಎಸ್ (KRS Dam_ ಬಹುತೇಕ ಭರ್ತಿ ಹಂತ ತಲುಪಿದೆ. ಡ್ಯಾಂ ಭರ್ತಿಗೆ ಇನ್ನು 4 ಅಡಿಯಷ್ಟೇ ಬಾಕಿ ಇದೆ. ಹಾರಂಗಿ ಹಾಗೂ ಹೇಮಾವತಿಯಿಂದ ಹೆಚ್ಚು ನೀರು ಹರಿಸುತ್ತಿರುವುದರಿಂದ ಭಾನುವಾರ (ಜು.21) ಸಂಜೆಯೊಳಗೆ ಕನ್ನಂಬಾಡಿ ಕಟ್ಟೆ ಭರ್ತಿ ಆಗೋ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 115 ಮಂದಿ ಬಲಿ – 1,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತವರಿಗೆ ವಾಪಸ್
ಈ ಹಿನ್ನೆಲೆಯಲ್ಲಿ ಹೊರಹರಿವಿನ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲಾಗ್ತಿದೆ. ಸದ್ಯಕ್ಕೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿಪಾತ್ರದ 92 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಿಷೇಧಿಸಲಾಗಿದೆ. ಕಪಿಲಾ ನದಿ ಆರ್ಭಟದ ಕಾರಣ ನಂಜನಗೂಡಿನ ದೇವಾಲಯಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಹೊಗೇನಕಲ್ ಜಲಪಾತದ ವೈಭವ ಡ್ರೋನ್ ಕಣ್ಣಲ್ಲಿ ಸೆರೆಯಾಗಿದೆ. ಚಾಮುಂಡಿ ಬೆಟ್ಟದಲ್ಲೂ ಜಲಪಾತ ಸೃಷ್ಟಿಯಾಗಿದೆ.
ರಾಜ್ಯದ ವಿವಿಧೆಡೆ ಮಳೆಯಿಂದ ಹಲವು ಅವಾಂತರ ಉಂಟಾಗಿವೆ. ಖಾನಾಪುರದ ಕಾಡಂಚಿನ ಕುಗ್ರಾಮ ಅಂಗಾಂವದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಕಟ್ಟಿಗೆ ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು 5 ಕಿಲೋಮೀಟರ್ ದೂರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳ್ಳಾರಿ ನಾಲಾ ಉಕ್ಕಿಹರಿದು ಬೆಳಗಾವಿ ನಗರದ ಹಲವಾರು ಬಡಾವಣೆಗಳು ಜಲಾವೃತವಾಗಿವೆ. ಇದನ್ನೂ ಓದಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್ – ಮಾಸ್ಟರ್ ಮೈಂಡ್, ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್
ಬೆಳಗಾವಿಯ 13 ಸೇತುವೆಗಳು ಜಲಾವೃತವಾಗಿದೆ. ಕಳಸ ತಾಲೂಕಿನ ಮಾವಿನಹೊಲದಲ್ಲಿ ಎಮ್ಮೆಯೊಂದು ನೀರಲ್ಲಿ ಕೊಚ್ಚಿ ಹೋಗಿದೆ. ಕೊಡಗಿನ ಮಲ್ಲಳ್ಳಿ ಜಲಪಾತದ ಭೋರ್ಗರೆತ ಜೋರಾಗಿದೆ. ಹೆಬ್ರಿಯ ನಾಡ್ಪಾಲಿ ಬಳಿ ಹಗ್ಗದ ನೆರವಿಂದ ಸೀತಾನದಿ ದಾಟ್ತಿದ್ದಾಗ ಕೊಚ್ಚಿ ಹೋಗ್ತಿದ್ದ ಕಾರ್ಮಿಕ ಆನಂದ್ ಶವ ಇಂದು ಪತ್ತೆಯಾಗಿದೆ. ಬೀದರ್‌ನಲ್ಲಿ ಮಳೆಯಿಂದ ಸೃಷ್ಟಿಯಾದ ಹೊಂಡದಲ್ಲಿ ಲಾರಿ ಸಿಲುಕಿ ಚಾಲಕ ಪರದಾಡಿದ್ದಾನೆ. ಸುರಪುರದ ತಿಂಥಣಿ ಗ್ರಾಮದ ಬಳಿ ಆಯತಪ್ಪಿ ನದಿಗೆ ಜಾರಿ ಬಿದ್ದ ವ್ಯಕ್ತಿಯನ್ನು ಅಂಬಿಗರು ರಕ್ಷಣೆ ಮಾಡಿದ್ದಾರೆ.
ಶಿರಾಡಿ, ಸಂಪಾಜೆ ಮಾರ್ಗದಲ್ಲಿ ಭೂ ಕುಸಿತ ಕಾರಣ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಇಲ್ಲಿಯೂ ಇದೀಗ ಭೂಕುಸಿತ ಭೀತಿ ಎದುರಾಗಿದೆ. ಶಿರಾಡಿ ಘಾಟ್‌ನಲ್ಲಿ ಹಗಲಿನ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನದಿಯ ಮಧ್ಯೆ ಕಟೀಲು ದುರ್ಗಾಪರಮೇಶ್ವರಿ ದೇಗುಲದ ವಿಹಂಗಮ ನೋಟ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹೆಚ್‍ಡಿಕೆ ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ದಾರಾ? – ಅಂಕೋಲಾ ಭೇಟಿಗೆ ಡಿಸಿಎಂ ವ್ಯಂಗ್ಯ